ನಾಯಕನಹಟ್ಟಿ: ಗೋಶಾಲೆಯ ರಾಸುಗಳಿಗೆ ಮೇವು ಒದಗಿಸುವಂತೆ ಒತ್ತಾಯಿಸಿ ಸೋಮವಾರ ತುರುವನೂರು ಗ್ರಾಮದ ರೈತರು ನಾಡ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ತಿಪ್ಪೇಸ್ವಾಮಿ, ಕಳೆದ ವರ್ಷ ಗೋಶಾಲೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಈ ವರ್ಷ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ನಿರ್ವಹಣೆ ಸಮಸ್ಯೆ ಎದುರಾಗಿದೆ. ಒಂದು ತಿಂಗಳಿನಿಂದ ನಡೆಯುತ್ತಿರುವ ಗೋಶಾಲೆಗೆ ಸಮರ್ಪಕವಾಗಿ ಮೇವು ಪೂರೈಸುತ್ತಿಲ್ಲ. ಒಂದು ವಾರದಿಂದ ಮೇವು ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರತಿದಿನ ಮೇವು ಪೂರೈಸುವುದಾಗಿ ಅಧಿಕಾರಿಗಳು ಸುಳ್ಳು ಭರವಸೆ ನೀಡುತ್ತಿದ್ದಾರೆ. ಮೇವು ಪೂರೈಕೆ ಸಾಧ್ಯವಾಗದಿದ್ದರೆ ಗೋಶಾಲೆಯನ್ನೇ ಮುಚ್ಚಿ ಬಿಡಿ ಎಂದರು.
ಗೋಶಾಲೆಯಲ್ಲಿ ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ. ಸ್ಥಳದಲ್ಲಿ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ. ನಾಲ್ಕು ದಿನಗಳಿಂದ ಹಸುವೊಂದು ತೀವ್ರವಾಗಿ ಅಸ್ವಸ್ಥಗೊಂಡಿದೆ. ಹೀಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ರೈತ ಸಂದೀಪ್ ರೆಡ್ಡಿ ಮಾತನಾಡಿ, ಗೋಶಾಲೆಯಲ್ಲಿ ಶುಚಿತ್ವ ಕಾಪಾಡುತ್ತಿಲ್ಲ. ಒಂದು ವಾರದಿಂದ ಸಗಣಿ ಹಾಗೂ ಮೇವು ಮಿಶ್ರಣಗೊಂಡಿದೆ. ಹೀಗಾಗಿ ಅಲ್ಲಿರುವ ಮೇವನ್ನು ರಾಸುಗಳು ತಿನ್ನುತ್ತಿಲ್ಲ. ಮಳೆಯಲ್ಲಿ ತೇವಗೊಂಡಿರುವ ಮೇವನ್ನು ಪೂರೈಕೆ ಮಾಡಲಾಗುತ್ತಿದೆ. ನೂರಾರು ರಾಸುಗಳು ಒಂದೆಡೆ ಇದ್ದರೂ ಪಶು ವೈದ್ಯಕೀಯ ಇಲಾಖೆಯವರು ರಾಸುಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಚಿಕಿತ್ಸೆಯಿಲ್ಲದೆ ರಾಸುಗಳು ಸೊರಗಿವೆ ಎಂದ ಆರೋಪಿಸಿದರು.
ಮೇವಿಲ್ಲದೆ ರೋಸಿ ಹೋದ ತುರುವನೂರು ಹಾಗೂ ಸುತ್ತಲಿನ ಗ್ರಾಮಗಳ ರೈತರು ನಾಡ ಕಚೇರಿಗೆ ತಮ್ಮ ರಾಸುಗಳೊಂದಿಗೆ ಆಗಮಿಸಿದ್ದರು.
ರಾಜಸ್ವ ನಿರೀಕ್ಷಕ ಸಿದ್ರಾಮಪ್ಪ ಅವರಿಗೆ ಘೇರಾವ್ ಹಾಕಿದರು. ನಾಡ ಕಚೇರಿಗೆ ಬೀಗ ಹಾಕಲು ಯತ್ನಿಸಿದಾಗ ಪೊಲೀಸರು ರೈತರ ಮನವೊಲಿಸಿದರು. ರೈತರಾದ ರುದ್ರೇಶ್, ಲೋಕೇಶ್, ರುದ್ರೇಶ್, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.