ದೊಡ್ಡಬಳ್ಳಾಪುರ: ತಾಲೂಕಿನ ಚಿಕ್ಕಮಕೂರು ಕೆರೆ ತುಂಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಬಂದ ಶಾಸಕರು ಹಾಗೂ
ಮುಖಂಡರಿಗೆ ಕೊಳಚೆ ನೀರಿಗೆ ಬಾಗಿನ ಅರ್ಪಿಸಲು ಬಂದಿದ್ದಾರೆಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರ ಧಿಕ್ಕಾರ ಕೂಗಿದ ಪ್ರಸಂಗ ನಡೆದಿದೆ.
ಇದರಿಂದಾಗಿ ಕೆರೆ ಕೋಡಿ ಬಿದ್ದಿದ್ದರಿಂದ ಬಾಗಿನ ಅರ್ಪಿಸಲು ಬಂದಿದ್ದ ಶಾಸಕರ ಬೆಂಬಲಿಗರು ಹಾಗೂ ರಾಜ್ಯ ರೈತ ಸಂಘದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಗರಸಭೆ ವ್ಯಾಪ್ತಿಯಿಂದ ಒಳಚರಂಡಿ ಮೂಲಕ ಕೆರೆಗೆ ಹರಿದು ಬರುವ ನೀರನ್ನು ಶುದ್ಧೀಕರಿಸದೇ ಬಿಡುವ ನಗರಸಭೆಗೆ ಧಿಕ್ಕಾರ ಎಂದು ಕೂಗಿದರು.
ಶಾಸಕರು ಎಂಜಿನಿಯರ್‌ಗೆ ಸೂಚನೆ ನೀಡಿದ್ದಾರೆ: ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ತಿ. ರಂಗರಾಜು, ಕೆರೆ ಕೋಡಿ ಬಿದ್ದಿರುವುದು ರೈತರು ಸಂಭ್ರಮ ಪಡುವ ಸಂದರ್ಭವಾಗಿದೆ. ಯಾವುದೇ ಸಮಸ್ಯೆ ಇದ್ದರೂ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಧಿಕ್ಕಾರ ಕೂಗಿದ ಮಾತ್ರಕ್ಕೆ ಕೆರೆಯಲ್ಲಿನ ನೀರು ಶುದ್ಧೀಕರಣ ಆಗುವುದಿಲ್ಲ. ಈಗಾಗಲೇ ಚಿಕ್ಕತುಮಕೂರು ಕೆರೆಗೆ ನಗರಸಭೆ ಒಳಚರಂಡಿ ನೀರು ಸೂಕ್ತ ರೀತಿಯಲ್ಲಿ ಶುದ್ಧೀಕರಿಸಿ ಬಿಡುತ್ತಿಲ್ಲ ಎನ್ನುವುದು ಎಲ್ಲರ ಗಮನಕ್ಕೂ ಬಂದಿದೆ. ಇದನ್ನು ಸರಿಪಡಿಸಿ ಕೊಳ್ಳಲು ನಗರಸಭೆ ಎಂಜಿನಿಯರ್‌ಗಳಿಗೆ ಶಾಸಕರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ನರಕಯಾತನೆ : ಈ ಭಾಗದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾದ ನಂತರ ಕೆಲವರಿಗೆ ಉದ್ಯೋಗ ದೊರೆತಿದೆ. ಆದರೆ ರೈತರ ಕೊಳವೆ ಬಾವಿಗಳಿಂದ ಬರುವ ನೀರು, ಗಾಳಿ ಸೇರಿದಂತೆ ಎಲ್ಲವೂ ಕಲುಷಿತವಾಗುತ್ತ ನರಕಯಾತನೆ ಅನುಭವಿಸುವಂತಾಗಿದೆ. ಇದನ್ನು ಸರಿಪಡಿಸಿಕೊಳ್ಳಲು ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳಲು ಒಂದು ಸಮಿತಿ ರಚಿಸಿಕೊಂಡು ಎಲ್ಲ ಕೈಗಾರಿಕೆಗಳಿಗೂ ಭೇಟಿ ನೀಡಬೇಕಿದೆ. ಇದರಿಂದ ಅಂರ್ತಜಲ ಹಾಗೂ ವಾಯು ಮಾಲಿನ್ಯ ಉಂಟು ಮಾಡುತ್ತಿರುವ ಕೈಗಾರಿಕೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಅಧಿಕಾರಿಗಳಿಗೆ ಶಾಸಕರ ತರಾಟೆ: ನಂತರ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಬಾಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಯಿಂದ ಹರಿದು ಬರುತ್ತಿರುವ ಒಳಚರಂಡಿ ನೀರನ್ನು ಶುದ್ಧೀಕರಿಸಿ ಹೊರ ಬಿಡಬೇಕು. ಇದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿಕೊಳ್ಳುವಂತೆ ಹಲವಾರು ಬಾರಿ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹೇಳಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನೀರನ್ನು ಕುಡಿದು ಮೇಕೆಗಳು ಮೃತ: ಚಿಕ್ಕತುಮಕೂರು ಕೆರೆಗೆ ನಗರಸಭೆ ಒಳಚರಂಡಿಯಿಂದ ಬರುತ್ತಿರುವ ನೀರು
ಶುದ್ಧೀಕರಿಸದೇ ಎಲ್ಲೆಂದರಲ್ಲಿ ಹರಿದು ಬಿಟ್ಟಿ ದ್ದರಿಂದ ಈ ನೀರನ್ನು ಕುಡಿದು ಮೇಕೆಗಳು ಮೃತಪಟ್ಟಿವೆ. ಈ ಬಗ್ಗೆ ನಾವು ಹಲವಾರು ಬಾರಿ ಹೋರಾಟ ನಡೆಸಿ ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ಈ ಬಗ್ಗೆ ಶಾಸಕರು, ಜಿಪಂ ಸದಸ್ಯರ ಗಮನಕ್ಕೂ ತರಲಾಗಿತ್ತು. ಆದರೆ ಒಂದು ಬಾರಿಯೂ ಈ ಕಡೆಗೆ ಭೇಟಿ ನೀಡಿದವರು ಈಗ ಕೊಳಚೆ ನೀರಿಗೆ ಬಾಗಿನ ಅರ್ಪಿಸಲು ಬಂದಿರುವುದು ಎಷ್ಟು ಸರಿ ಎಂದು ರಾಜ್ಯ ರೈತ ಸಂಘದ ಮುಖಂಡರಾದ ವಸಂತ್, ಜಿಂಕೆಬಚ್ಚ ಹಳ್ಳಿಸತೀಶ್, ರಮೇಶ್,ವಕೀಲರಾದ ಹನುಮಂತ ರಾಜು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಜರಾಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಗ್ರಾಪಂ ಸದಸ್ಯರಾದ ಶಿವಕುಮಾರ್, ರತ್ನಮ್ಮ, ಆದಿತ್ಯನಾಗೇಶ್, ಕೃಷ್ಣಪ್ಪ, ಮುನಿರಾಜು, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಬಿ.ಸಿ.ಆನಂದ್, ಮುಖಂಡರಾದ ಎಚ್.ಪಿ.ಸುಬ್ಬೇಗೌಡ, ಬಿ.ಎಚ್.ಕೆಂಪಣ್ಣ, ಎಚ್.ಪಿ.ಅಶೋಕ್, ಸಂದೇಶ್, ಹರೀಶ್,ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಭಾಗವಹಿಸಿದ್ದರು.