Advertisement

ರೈತರು ಸಾವಯವ ಪದ್ಧತಿಗೆ ಮರಳಲಿ

06:09 AM Jan 14, 2019 | Team Udayavani |

ದಾವಣಗೆರೆ: ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ಸಿರಿಧಾನ್ಯಗಳನ್ನು ಬಳಸುವುದರಿಂದ ಆರೋಗ್ಯವಂತರಾಗಿರಬಹುದು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ತಿಳಿಸಿದರು.

Advertisement

ಭಾನುವಾರ ರೇಣುಕಾ ಮಂದಿರದಲ್ಲಿ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸಾವಯವ ಕೃಷಿ ಪದ್ಧತಿಯಡಿ ಇಳುವರಿ ಕಡಿಮೆಯಾದರೂ ಚಿಂತೆ ಇಲ್ಲ. ಪೌಷ್ಟಿಕಾಂಶಯುಕ್ತ ಸಿರಿಧಾನ್ಯ ಬೆಳೆಯಬೇಕು ಎಂದು ರೈತರಿಗೆ ಮನವಿ ಮಾಡಿದರು.

ರಾಸಾಯನಿಕ ಕೃಷಿಯಿಂದ ನಾವು ಬೇರೆ ದೇಶಗಳಿಗೆ ಕೊಡುವಷ್ಟು ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಆದರೆ, ರಾಸಾಯನಿಕ ಕೃಷಿಯಿಂದ ಬೆಳೆದ ಆಹಾರ ಸೇವನೆಯಿಂದ ರೋಗಗಳು ಹೆಚ್ಚಾಗಿವೆ. ಯಾವುದೇ ರಸಗೊಬ್ಬರ, ಕೀಟನಾಶಕ ಬಳಸದೆ ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲಿ ಬೆಳೆಯಬೇಕು. ಸಾವಯವ ಸಿರಿಧಾನ್ಯಕ್ಕೆ ಬೇರೆ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ರೈತರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಉಪಯುಕ್ತ ಮಾಹಿತಿ ಪಡೆದು, ಕೃಷಿಯಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್‌ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್‌. ಮಹೇಶ್‌ ಮಾತನಾಡಿ, ಚೀನಾದಲ್ಲಿ ಭೂಮಿ ಮತ್ತು ವಾಯುಗುಣಕ್ಕನುಸಾರವಾಗಿ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಅಂತಹ ನಿರ್ಧಾರಗಳಿಂದ ಅಲ್ಲಿನ ಕೃಷಿಯಲ್ಲಿ ಕ್ರಾಂತಿಯಾಯಿತು. ಭಾರತದಲ್ಲೂ ಅಂತಹ ಪದ್ಧತಿ ಬರಬೇಕು. ರೈತರು ಹೆಚ್ಚಾಗಿ ಸಾವಯವ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬೆಳೆಯಬೇಕು. ಅಂತಹ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಎಚ್. ಓಬಳಪ್ಪ ಮಾತನಾಡಿ, ರೈತರು ಹೆಚ್ಚಿನ ಇಳುವರಿ, ಲಾಭ ಗಳಿಸುವ ಉದ್ದೇಶದಿಂದ ವಿಜ್ಞಾನಿಗಳು ರಾಸಾಯನಿಕಗಳನ್ನು ಪರಿಚಯಿಸಿದರು. ಅಂತಹ ರಾಸಾಯನಿಕದಿಂದ ರೈತರು ಪುನಾ ಸಾವಯವ ಕೃಷಿ ಪದ್ಧತಿಗೆ ಬದಲಾಗುತ್ತಿರುವುದು ಸಾಮಾನ್ಯ ವಿಷಯವಲ್ಲ. ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ರೈತರು ಪ್ರಾಯೋಗಿಕವಾಗಿ ಸ್ವಲ್ಪ ಭಾಗದಲ್ಲಿ ಸಾವಯವ ಕೃಷಿ ಪದ್ಧತಿಯಡಿ ಆಹಾರ ಪದಾರ್ಥ ಬೆಳೆದು, ಮನೆಗಳಿಗೆ ಉಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ದಾವಣಗೆರೆ ಮತ್ತು ಚಿತ್ರದರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಉಪಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ನಮ್ಮ ಪೂರ್ವಿಕರು ಪ್ರಕೃತಿಗೆ ಪೂರಕವಾದಂತಹ ಕೃಷಿ ಪದ್ಧತಿ ಅನುಸರಿಸುತ್ತಿದ್ದರು. ಇಂದು ಪ್ರಕೃತಿಗೆ ವಿರುದ್ಧವಾಗಿ ಕೃಷಿ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ 68 ವರ್ಷಗಳಲ್ಲಿ ಜನರ ಆರೋಗ್ಯದಲ್ಲಿ ಸಾಕಷ್ಟು ಋಣಾತ್ಮಕ ಬದಲಾವಣೆಗಳಾಗಿವೆ. ಅದಕ್ಕೆ ಪ್ರಕೃತಿಗೆ ವಿರುದ್ಧವಾದ ಕೃಷಿಯೇ ಕಾರಣ. ನಾವು ವಿನಾಶದ ಹಾದಿಯಲ್ಲಿದ್ದೇವೆ. ಇದು ಈ ಪೀಳಿಗೆಗೆ ಕೊನೆಯಾಗಬೇಕು. ಎಲ್ಲಾ ರೈತರು ಸನಾತನವಾದ ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು ಎಂದು ಮನವಿ ಮಾಡಿದರು.

ದಾವಣಗೆರೆ ತಾಲೂಕು ಪಂಚಾಯತ್‌ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿಲ್ಲಾ ಕೃಷಿಕ ಸಮಾಜದ ಕುಂದೂರು ಹನುಮಂತಪ್ಪ, ಶಾಮನೂರು ಶಿವಪ್ಪ, ಹುಚ್ಚಪ್ಪ ಇತರರು ಇದ್ದರು.

ಎರಡು ದಿನಗಳ ಮೇಳದಲ್ಲಿ 42 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, 4 ಸಿರಿಧಾನ್ಯ ಆಹಾರ ಮಳಿಗೆ, 39 ವಿವಿಧ ಸಿರಿಧಾನ್ಯ ಖಾದ್ಯಗಳ ಪ್ರದರ್ಶನ ಮಳಿಗೆ ಇವೆ.

Advertisement

Udayavani is now on Telegram. Click here to join our channel and stay updated with the latest news.

Next