Advertisement

ಕೆಎಂಎಫ್ ಹಾಲು ಮಾರಾಟದ ಹೆಚ್ಚು ಲಾಭ ರೈತರಿಗೆ ಸಿಗಬೇಕು: ಹಾಲಪ್ಪ

09:34 PM Jun 02, 2022 | Vishnudas Patil |

ಸಾಗರ: ರೈತರ ಬದುಕು ಮಾತ್ರ ಹಸನಾಗಿಲ್ಲ. ಈ ಬಗ್ಗೆ ಆತ್ಮಾವಲೋಕನದ ಅಗತ್ಯವಿದೆ. ರೈತರು ಹೈನುಗಾರಿಕೆ ಮೂಲಕ ಸೊಸೈಟಿಗೆ 21 ರೂ.ಗೆ ಹಾಲು ಕೊಡುತ್ತಾರೆ. ಆದರೆ ಅದನ್ನು ಗ್ರಾಹಕರಿಗೆ 46 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕೆಎಂಎಫ್, ಶಿಮುಲ್‌ನಂತಹ ಸಂಸ್ಥೆಗಳು ಆಡಳಿತಕ್ಕೆ ಹೆಚ್ಚು ವೆಚ್ಚ ಮಾಡುತ್ತಿದೆ. ಅಗತ್ಯವಿಲ್ಲದಿದ್ದರೂ ಹೆಚ್ಚು ಜನರನ್ನು ನೌಕರಿಗೆ ತೆಗೆದುಕೊಳ್ಳುತ್ತಿದೆ. ನೌಕರಿ ಹರಾಜಿಗೆ ಇದೆ ಎನ್ನುವ ಚರ್ಚೆ ಸಹ ಕೇಳಿ ಬಂದಿದೆ. ಸಂಸ್ಥೆಗಳು ಗಳಿಸಿದ ಲಾಭದ ಹೆಚ್ಚು ಭಾಗ ರೈತರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.

Advertisement

ಇಲ್ಲಿನ ಕೃಷಿ ಇಲಾಖೆ ಪ್ರಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ,ದೇಶದ ಇತರ ರಾಜ್ಯ, ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಮಲೆನಾಡು ಭಾಗದ ಕೃಷಿ ವಿಭಿನ್ನವಾಗಿದೆ. ಸವಾಲುಗಳ ನಡುವೆಯೂ ನಮ್ಮ ಕೃಷಿಕ ಕೃಷಿ ಕಾಯಕದಿಂದ ವಿಮುಖನಾಗದೆ ತನ್ನ ಕೆಲಸದಲ್ಲಿ ತೊಡಗಿದ್ದಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಕನಿಗೆ ಕಾಲಕಾಲಕ್ಕೆ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಅದನ್ನು ಕೃಷಿ ಇಲಾಖೆ ಮೂಲಕ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಒಂದು ಬಾರಿ ಅರ್ಜಿ ಸಲ್ಲಿಸಿದರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಸಹಕಾರ ರೈತರಿಗೆ ತಲುಪುತ್ತಿದೆ. ಈತನಕ 11 ಬಾರಿ ತಲಾ 2 ಸಾವಿರ ರೂಪಾಯಿಯಂತೆ ರೈತರ ಖಾತೆಗೆ ನೇರ ಹಣ ಜಮಾ ಆಗಿದೆ. ಇಂತಹ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತಪರವಾಗಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಮಲೆನಾಡಿನಲ್ಲಿ ಕೃಷಿ ಕಾಯಕ ಸವಾಲು. ಅತಿವೃಷ್ಟಿ ಅನಾವೃಷ್ಟಿ, ಮಳೆಹಾನಿ, ರೋಗಬಾಧೆ, ಪೋಷಕಾಂಶ ಕಡಿಮೆ ಆಗುವುದು ಸೇರಿದಂತೆ ಅನೇಕ ಸಮಸ್ಯೆಗಳ ನಡುವೆ ನಮ್ಮ ರೈತ ಕೃಷಿಕಾಯಕವನ್ನು ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾನೆ ಎಂದರು.

ಸ್ವಾತಂತ್ರ್ಯ ನಂತರ ನಮ್ಮ ದೇಶದ ಜನಸಂಖ್ಯೆ ೩೩ ಕೋಟಿ ಇತ್ತು. ಅಂದು ದೇಶವು ಆಹಾರ ಕ್ಷಾಮ ಅನುಭವಿಸುತ್ತಿತ್ತು. ಈಗ ದೇಶದ ಜನಸಂಖ್ಯೆ ೧೩೩ ಕೋಟಿ ದಾಟಿದೆ. ಆದರೆ ನಮ್ಮಲ್ಲಿ ಆಹಾರ ಸಮಸ್ಯೆ ಇಲ್ಲ. ನಾವು ಉಪಯೋಗಿಸಿ ಅಕ್ಕಪಕ್ಕದ ದೇಶಕ್ಕೆ ರಫ್ತು ಮಾಡುವಷ್ಟು ಆಹಾರ ನಮ್ಮ ರೈತರು ಉತ್ಪಾದನೆ ಮಾಡುತ್ತಿದ್ದಾರೆ ಎಂದರು.

ಇದೇ ವೇಳೆ ಶಾಸಕ ಹಾಲಪ್ಪ ಕೃಷಿ ಕುರಿತ ಕೈಪಿಡಿ ಬಿಡುಗಡೆ ಮಾಡಿದರು ಮತ್ತು ರೈತ ಸಂಜೀವಿನ ಮಹಿಳಾ ಒಕ್ಕೂಟಕ್ಕೆ ಟ್ಯಾಕ್ಟರ್ ಹಸ್ತಾಂತರಿಸಿದರು. ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಶಾಂತ್, ಪ್ರಮುಖರಾದ ಚೇತನರಾಜ್ ಕಣ್ಣೂರು, ಚಂದ್ರಶೇಖರ್ ಗೂರಲಕೆರೆ, ರಾಜಶೇಖರ ಹಂದಿಗೋಡು, ದೇವೇಂದ್ರಪ್ಪ ಯಲಕುಂದ್ಲಿ, ಬಿ.ಟಾಕಪ್ಪ, ಶಿವಪ್ರಕಾಶ್, ವಿನಾಯಕರಾವ್ ಬೇಳೂರು, ಹಾಪ್‌ಕಾಮ್ಸ್ ಮಾಜಿ ಸದಸ್ಯ ಎಲ್.ವಿ.ಸತೀಶ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next