Advertisement

“ಶುಂಠಿಗೆ ತಗಲುವ ರೋಗದ ಬಗ್ಗೆ ರೈತರು ಎಚ್ಚರವಹಿಸಿ”

12:36 PM Aug 26, 2017 | |

ಬೇಲೂರು: ರೈತರು ಬೆಳೆಯುವ ಶುಂಠಿ ಬೆಳೆಯಲ್ಲಿ ಕೊಳೆ ಹಾಗೂ ಎಲೆ ಚುಕ್ಕಿ ರೋಗಗಳು ಇತ್ತೀಚಿಗೆ ಹೆಚ್ಚಾಗಿ ಕಂಡು ಬರುತ್ತಿದ್ದು ರೈತರು ಇದನ್ನು ಗಮನಹರಿಸಬೇಕು ಎಂದು ಕೃಷಿ ಮಹಾವಿದ್ಯಾಲಯ ತೋಟಗಾರಿಕೆ ವಿಭಾಗದ ವಿಜ್ಞಾನಿ ಡಾ.ಸುನೀತಾ ಹೇಳಿದರು. ತಾಲೂಕಿನ ಗೊರೂರು ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ, ಕಾರೆಕೆರೆ ವತಿಯಿಂದ ಆಯೋಜಿಸಿದ ಕೃಷಿ ಕಾರ್ಯನುಭವ ಶಿಬಿರದಡಿ ಕ್ಷೇತ್ರ ಭೇಟಿ ನಡೆಸಿ ಮಾತನಾಡಿ, ಶುಂಠಿ ಬೆಳೆಯಲ್ಲಿ ಕಂಡುಬರುವ ಕೊಳೆರೋಗ ಹತೋಟಿಗಾಗಿ ಎತ್ತರದ ಮಡಿಗಳನ್ನು ಮಾಡಬೇಕು ಹಾಗೂ ಆಳವಾದ ಬಸುಕಾಲುವೆ ತೆಗೆದು ಸುಲಭವಾಗಿ ನೀರು ಹರಿಯುವಂತೆ ನೋಡಿಕೊಳ್ಳಬೇಕು ಎಂದರು. ಶಿಲೀಂಧ್ರಗಳನ್ನು ಸಾಯಿಸಿ: ಬಿತ್ತನೆ ಮಾಡುವ ಮೊದಲು ಮ್ಯಾಂಕೋಜೆಬ್‌ ಅನ್ನು 4ಗ್ರಾಂ/ ಲೀ ನೀರಿಗೆ ಬೆರಸಿ ಬಿತ್ತನೆ ಶುಂಠಿಯನ್ನು ಅದ್ದಿ ತೆಗೆಯಬೇಕು. ರೋಗ ಕಂಡು ಬಂದಲ್ಲಿ ರೋಗದಿಂದ ಕೂಡಿರುವ ಶುಂಠಿಯನ್ನು ಬುಡದಿಂದ ಕಿತ್ತು, ಸುಡಬೇಕು, ಕಿತ್ತ ಜಾಗಕ್ಕೆ ತಾಮ್ರದ ಆಕ್ಸಿ ಕ್ಲೋರೈಡ್‌ 3ಗ್ರಾಂ ಮತ್ತು ರೆಡೋಮಿಲ್‌ 2ಗ್ರಾಂ/ ಲೀಟರ್‌ ನೀರಿಗೆ ಬೆರಸಿ ಬಸಿಯುವಂತೆ ಹುಯ್ಯಬೇಕು ಅಥವಾ ಬ್ಲೀಚಿಂಗ್‌ ಹುಡಿ ಚೆಲ್ಲುವುದರಿಂದ ಶಿಲೀಂಧ್ರಗಳು ಸತ್ತು ಹೋಗುತ್ತದೆ ಎಂದು ತಿಳಿಸಿದರು. ರೋಗ ಹತೋಟಿಗೆ ಕ್ರಮ: ಡಾ. ಉಮಾಶಂಕರ್‌
ಮಾತನಾಡಿ, ಶುಂಠಿಯಲ್ಲಿ ಬರುವ ಎಲೆಚುಕ್ಕಿ ರೋಗಕ್ಕೆ ಕಾರ್ಬೆಂಡೇಜಿಯಮ್‌ 2ಗ್ರಾಂ/ ಲೀಟರ್‌ ನೀರಿಗೆ ಬೆರಸಿ ಸಿಂಪಡಿಸುದಲ್ಲದೆ ಇತ್ತೀಚಿನ ದಿನಗಳಲ್ಲಿ ರೈತರು ಶುಂಠಿಯಲ್ಲಿ ಮಡಿ ಮುಚ್ಚಲು ಜೋಳದ ಕಾಂಡ ಬಳಸುತ್ತಿದ್ದು ಅದು ಒಳ್ಳೆಯದಲ್ಲ. ಜೋಳದ ಕಾಂಡವು ತಾನು ಕರಗಲು ಮಣ್ಣಿನಿಂದ ಹೆಚ್ಚು ಸಾರಜನಕವನ್ನು ಹೀರಿಕೊಳ್ಳುವುದರಿಂದ ಶುಂಠಿಯ ಬೆಳವಣಿಗೆ ಕುಂಟಿತವಾಗುತ್ತದೆ. ಆದರಿಂದ ಭತ್ತ, ರಾಗಿಯ ಹುಲ್ಲು, ಮರದ ಎಲೆ, ಕೊಂಬೆಯನ್ನು ಬಳಸುವುದರಿಂದ ಅದು ಕರಗಿದ ನಂತರ ಉತ್ತಮ ಗೊಬ್ಬರವಾಗುವುದಲ್ಲದೇ, ಕಳೆಗಳ ಹತೋಟಿಯಲ್ಲೂ ಯಶಸ್ವಿಯಾಗಬಹುದು ಎಂದರು. ಎಲೆ ಚುಕ್ಕಿ ರೋಗ: ಡಾ.ಅನಂತ್‌ ಕುಮಾರ್‌ ಮಾತನಾಡಿ, ಶುಂಠಿ ಬೆಳೆಯಲ್ಲಿ ಕೊಳೆ ರೋಗವು ಬಾರದಂತೆ ಎಲ್ಲಾ ಮುನ್ನೆಚ್ಚರಿಕೆಗಳು ತೆಗೆದುಕೊಂಡಿದ್ದು ಅಲ್ಲಲ್ಲಿ ಕೆಲವು ಕಬ್ಬಿಣದ ಕೊರತೆ ಮತ್ತು ಎಲೆ ಚುಕ್ಕಿ ರೋಗವು ಕಂಡುಬಂದಿದ್ದು ಮಾರುಕಟ್ಟೆಯಲ್ಲಿ ದೊರೆಯುವ ಜಿಂಜರ್‌ ಮಿಕ್ಸ್‌ ಪೋಷಕಾಂಶಗಳ ಮಿಶ್ರಣ ಅಥವಾ ಕಬ್ಬಿಣದ ಸಲ್ಫೇಟ್‌ 10-15 ಕೆ.ಜಿ./ಎಕರೆಗೆ ಬಳಸಬೇಕು ಎಂದು ಮಾಹಿತಿ ನೀಡಿದರು. ಡಾ.ಬಸವರಾಜು ಮಾತನಾಡಿ, ಮೆಣಸಿನಕಾಯಿಯಲ್ಲಿ ಎಲೆಚುಕ್ಕಿ ರೋಗ ಹಾಗೂ ಬೂದುರೋಗ ಹೆಚ್ಚಿನ ಹೊಲಗಳಲ್ಲಿ ಕಂಡುಬಂದಿದ್ದು ಈಗಾಗಲೇ ಕೊಯ್ಲು ಮುಗಿದಿದ್ದರಿಂದ ರೈತರಿಗೆ ಅವುಗಳ ತಡೆಗಟ್ಟುವಿಕೆ ಬಗ್ಗೆ ಮಾಹಿತಿ ನೀಡಲಾಯಿತು. ಈಶ್ವರ್‌ ಎಂಬವರ ಕಬ್ಬಿನ ಹೊಲದಲ್ಲಿ ಬಿಳಿ ಉಣ್ಣೆ ಕಂಡು ಬಂದಿದ್ದು ಇದು ಎಲೆಯಿಂದ ರಸ ಹೀರುವುದರಿಂದ ಎಲೆ ಅರಿಶಿಣ ಬಣ್ಣಕ್ಕೆ ತಿರುಗಿ, ಒಣಗುತ್ತದೆ. ಅಲ್ಲದೇ ಇವುಗಳು ಅಂಟು ದ್ರಾವಣ ಬಿಡುಗಡೆ ಮಾಡುವುದರಿಂದ ಅದರಲ್ಲಿ ಕಪ್ಪು ಬಣ್ಣದ ಶಿಲೀಂಧ್ರಗಳುಳೆದು ಗಿಡದ ದ್ವಿತಿಸಂಶ್ಲೇಷಣೆ ಕ್ರಿಯೆ ಕಡಿಮೆ ಮಾಡುತ್ತದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ಇದನ್ನು ಹತೋಟಿಗೆ ತರಲು ಕ್ಲೋರೋಪೈರಿಪಾಸ್‌ 2 ಮಿ.ಲೀ/ ಲೀಟರ್‌ ನೀರಿಗೆ ಅಥವಾ ಡೈಮೀಥೋವೇಟ್‌ 1.7 ಮಿ.ಲೀ/ ಲೀಟರ್‌ ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕೆಂದು ತಿಳಿಸಿದರು. ರೈತರು ಹಾಗೂ ಶಿಬಿರಾರ್ಥಿಗಳಾದ ಅಜಿತ್‌, ಕೀರ್ತಿರಾಜ್‌, ಸಿಬಾನಂದ್‌, ಶಿವಪ್ಪ, ವೀರೇಶ್‌, ಮಧು, ಶಫಾ°ಸ್‌, ಸುಷ್ಮಾ, ರಂಜಿತ, ಚೈತ್ರಾ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next