ದಾವಣಗೆರೆ: ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಾಸ್ ಪಡೆಯುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ-ಕರ್ನಾಟಕ ರೂಪಿಸಿರುವ ಹೋರಾಟ ಬೆಂಬಲಿಸಿ ಮಾ.21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಅಧಿವೇಶನ, 22 ಮತ್ತು 23ರಂದು ರೈತರ ಪರ್ಯಾಯ ಅಧಿವೇಶನ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಶಂಕರಪ್ಪ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ಧುಪಡಿಸಿದೆ. ಆದರೆ, ರಾಜ್ಯ ಸರ್ಕಾರ ವಾಪಾಸ್ ಪಡೆದಿಲ್ಲ. ಸಾಕಷ್ಟು ಹೋರಾಟದ ನಂತರವೂ ಹಿಂಪಡೆದಿಲ್ಲ. ಹಾಗಾಗಿ ಬೃಹತ್ ಅಧಿವೇಶದ ಮೂಲಕ ಮತ್ತೆ ಒತ್ತಾಯ ಮಾಡಲಾಗುವುದು ಎಂದರು.
ರಾಜ್ಯದ 12 ಜಿಲ್ಲೆಯ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯುತ್ತಿರುವ ಮೆಕ್ಕೆಜೋಳವನ್ನ ರಾಜ್ಯ ಸರ್ಕಾರ ಕೂಡಲೇ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಬೇಕು. ಉತ್ತರ ಭಾರತದ ಮಾದರಿಯಲ್ಲಿ ಮೆಕ್ಕೆಜೋಳ ಮಾತ್ರವಲ್ಲ ಎಲ್ಲ ಬೆಳೆಗಳನ್ನು ಬೆಲೆ ಯೋಜನೆಯಡಿ ಖರೀದಿಸುವ ಮೂಲಕ ಕೃಷಿಕರಿಗೆ ಅನುಕೂಲ ಮಾಡಬೇಕು. ಬೆಲೆ ಯೋಜನೆಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿತ್ತು ರೈತರ ವಿರೋಧದಿಂದ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಸ್ಮಾರ್ಟ್ ಮೀಟರ್ ವಿಷಯ ಪ್ರಸ್ತಾಪ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಕೃಷಿ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡಬಾರದು ಎಂದು ಒತ್ತಾಯಿಸಿದರು.
ದಾವಣಗೆರೆ-ಚಿತ್ರದುರ್ಗ- ಬೆಂಗಳೂರು ನೇರ ರೈಲ್ವೆ ಯೋಜನೆಗೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಿಲ್ಲ. ಕೂಡಲೇ ಅನುದಾನ ನೀಡಬೇಕು. ಉತ್ತರ ಭಾರತದಲ್ಲಿ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರಗಳು 13,500 ಕೋಟಿ ಅನುದಾನ ನೀಡಿವೆ. ದಕ್ಷಿಣ ಭಾರತದಲ್ಲಿ ಅತೀ ಕಡಿಮೆ ಅನುದಾನ ನೀಡುತ್ತಿವೆ. ನೇರ ರೈಲು ಯೋಜನೆಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುಳ್ಳಾಪುರದ ಹನುಮಂತಪ್ಪ ಮಾತನಾಡಿ, ರೈತರ ಕೃಷಿ ಪಂಪ್‌ಸೆಟ್ ಗಳಿಗೆ ನಿರಂತರವಾಗಿ 8 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಆದರೆ, ಚನ್ನಗಿರಿ ಒಳಗೊಂಡಂತೆ ಅನೇಕ ಕಡೆ 3-4 ಗಂಟೆಯೂ ವಿದ್ಯುತ್ ಸರಬರಾಜು ಮಾಡದ ಕಾರಣಕ್ಕೆ ಅಡಕೆ ತೋಟ ಉಳಿಸಿಕೊಳ್ಳುವುದು, ತರಕಾರಿ ಬೆಳೆಯುವುದು ಕಷ್ಟ ಆಗುತ್ತಿದೆ. ಸಮರ್ಪಕ ಪ್ರಮಾಣದಲ್ಲಿ ವಿದ್ಯುತ್ ಪೂರೈಸಬೇಕು. ಟಿಸಿ ಸುಟ್ಟಲ್ಲಿ ತಕ್ಷಣವೇ ಕೊಡಬೇಕು ಇಲ್ಲವಾದಲ್ಲಿ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಸಾದ್, ಕೊಗ್ಗನೂರು ಹನುಮಂತಪ್ಪ, ಈಚಘಟ್ಟ ಚನ್ನಬಸಪ್ಪ, ಈಚಘಟ್ಟ ಕರಿಬಸಪ್ಪ, ಚನ್ನಗಿರಿ ಕರಿಬಸಪ್ಪ ಸುದ್ದಿಗೋಷ್ಠಿಯಲ್ಲಿದ್ದರು.