ತೇರದಾಳ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್‌ಗಳಿಗೆ ಸಾಲ ಮನ್ನಾಕ್ಕೆ ಅಗತ್ಯ ದಾಖಲಾತಿ ಸಲ್ಲಿಸಲು ರೈತರು ಸರದಿಯಲ್ಲಿ ನಿಂತು ಪರದಾಡುತ್ತ, ದುಂಬಾಲು ಬಿದ್ದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದಾರೆ. ಆದರೆ ಹಲವಾರು ಕಾಗದ ಪತ್ರಗಳನ್ನು ನಿಗದಿತ ಅವಧಿಯೊಳಗೆ ಫಲಾನುಭವಿ ರೈತರು ಪಿಕೆಪಿಎಸ್ ಗಳಿಗೆ ತಲುಪಿಸಬೇಕು. ಅದಕ್ಕಾಗಿ ಪಟ್ಟಣದ ಮೂರು ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಗಳಿಗೆ ಸಾಲ ಮನ್ನಾಕ್ಕೆ ಬೇಕಾದ ದಾಖಲಾತಿ ಕೊಟ್ಟು, ನಿಗದಿತ ನಮೂನೆಯ ಫಾರಂಗೆ ಸಹಿ ಮಾಡಲು ರೈತರು ಮುಗಿಬಿದ್ದಿದ್ದಾರೆ.
ಬಸ್ ನಿಲ್ದಾಣ ಸಮೀಪದ ಪಿಕೆಪಿಎಸ್ ನಲ್ಲಿ 1400ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಸಾಲಗಾರರಿದ್ದಾರೆ. ಅವರಲ್ಲಿ 1,039 ರೈತರು ಸಾಲ ಮನ್ನಾ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಅವರ ಒಟ್ಟು 5.78ಕೋಟಿ ರೂ.ಗಿಂತ ಹೆಚ್ಚು ಸಾಲ ಮನ್ನಾ ಆಗಲಿದೆ.
ಪಶ್ಚಿಮ ಭಾಗದ ಪಿಕೆಪಿಎಸ್‌ನಲ್ಲಿ ಒಟ್ಟು ಸಾಲಗಾರರ ರೈತರು 304 ಇದ್ದಾರೆ. ಅವರಲ್ಲಿ 221 ರೈತರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೆ ಒಟ್ಟು 1.09 ಕೋಟಿಯಷ್ಟು ಹಣ ಮನ್ನಾ ಆಗಲಿದೆ. ಕಲ್ಲಟ್ಟಿ ಗಲ್ಲಿಯ ಪಿಕೆಪಿಎಸ್‌ನಲ್ಲಿ 734 ರೈತರಿಗೆ ಸಾಲ ಮನ್ನಾದ ಲಾಭ ದೊರಕಲಿದೆ. ಇನ್ನುಳಿದ 192 ರೈತರಿಗೆ ಸಾಲ ಮನ್ನಾದ ಲಾಭ ಬರುವುದಿಲ್ಲ. ಹೀಗಾಗಿ ಒಟ್ಟು 4.18 ಕೋಟಿ ರೂ. ಸಾಲ ಮನ್ನಾ ರೈತರಿಗೆ ಸಿಗಲಿದೆ. ದಾಖಲೆ ಪಡೆದುಕೊಳ್ಳಲು ಹರಸಾಹಸ ಪಡುವಂತಾಗಿದೆ.
ಸಾಲಗಾರ ರೈತರು ಅವಶ್ಯಕ ಎಲ್ಲ ದಾಖಲಾತಿ ಕೊಡುತ್ತಿದ್ದಾರೆ. ನಮ್ಮ ಸಿಬ್ಬಂದಿಯೂ ಚಾಕಚಕ್ಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾಖಲಾತಿ ಸ್ವೀಕಾರಕ್ಕೆ ನಮಗೆ ಅಧಿಕೃತ ಆದೇಶ ಬಂದಿಲ್ಲವಾದರೂ ಅ.15 ಕೊನೆಯ ದಿನವಾಗಬಹುದು. ಅರ್ಹ ರೈತರಿಗೆ ಫೋನ್ ಮಾಡಿ ಬೇಗ ದಾಖಲಾತಿ ಒಪ್ಪಿಸುವಂತೆ ಸೂಚಿಸಲಾಗುತ್ತಿದೆ.
ಭರಮಪ್ಪ ಕಾಲತಿಪ್ಪಿ
ವ್ಯವಸ್ಥಾಪಕ, ಪಿಕೆಪಿಎಸ್ ಕಲ್ಲಟ್ಟಿ
ಸಾಲ ಮನ್ನಾದ ಅರ್ಹ ಫಲಾನುಭವಿ ರೈತರು ಪಡಿತರ ಕಾರ್ಡಿನ ಛಾಯಾಪ್ರತಿಯೊಂದಿಗೆ ಕಾರ್ಡಿನಲ್ಲಿರುವ ಎಲ್ಲ ಸದಸ್ಯರ ಆಧಾರ್ ಕಾರ್ಡ್, ಜಮೀನು ಉತಾರ, ಪಾನ್‌ಕಾರ್ಡ್ ಪ್ರತಿ, ಮತದಾನ ಗುರುತಿನ ಪತ್ರ, ಭಾವಚಿತ್ರ ಪ್ರತಿಗಳು ಸೇರಿ ಅವಶ್ಯಕ ದಾಖಲೆಗಳೊಂದಿಗೆ ನಿಗದಿತ ಫಾರ್ಮ್ ತುಂಬಿ ಸಹಿ ಮಾಡುವುದಿದೆ. ಕೊನೆಯ ದಿನಾಂಕದ ಬಗ್ಗೆ ಗೊಂದಲವಿದ್ದು, ಪತ್ರಿಕೆಗಳ ಸುದ್ದಿ ಪ್ರಕಾರ ಅ.15 ಎಂಬುದಾಗಿದೆ. ರೈತರು ಆದಷ್ಟು ಬೇಗ ದಾಖಲಾತಿ ಒಪ್ಪಿಸಬೇಕು.
ವಿಜಯ ಕಡಹಟ್ಟಿ
ಅಧ್ಯಕ್ಷರು, ಪಿಕೆಪಿಎಸ್ ತೇರದಾಳ