Advertisement

ಒಂದು ಘಟನೆಯ ಹಲವು ಆಯಾಮ

12:23 AM Jan 28, 2021 | Team Udayavani |

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳಿಂದ ನಡೆದಿದ್ದ ಪ್ರತಿಭಟನೆಗಳು ಬುಧವಾರ ಹಿಂಸಾರೂಪ ತಾಳಿಬಿಟ್ಟವು. ಕೆಂಪುಕೋಟೆಯೆದುರು ಪ್ರತಿಭಟನಕಾರರು ಸಿಕ್ಖ್ ಧರ್ಮ ಧ್ವಜವನ್ನು ಹಾರಿಸಿದ್ದು, ಪೊಲೀಸರ ಮೇಲೆ ಖಡ್ಗಧಾರಿಗಳು ದಾಳಿ ಮಾಡಲು ಪ್ರಯತ್ನಿಸಿದ್ದು, ಬ್ಯಾರಿಕೇಡ್‌ಗಳನ್ನು ಉರುಳಿಸಿ ತಮ್ಮ ಪರೇಡ್‌ ಪಥವನ್ನು ಬದಲಿಸಿದ್ದೆಲ್ಲ ಟೀಕೆಗೆ ಗುರಿಯಾಗುತ್ತಿವೆ. ಹಿಂಸಾಚಾರದಲ್ಲಿ ಬಾಹ್ಯ ಶಕ್ತಿಗಳ ಕುತಂತ್ರವಿದೆ ಎಂದು ಆರೋಪಿಸಿದ್ದ ರೈತ ಸಂಘಟನೆಗಳ ನಡುವೆಯೇ ಈಗ ಬಿರುಕು ಮೂಡಿದೆ. ಎರಡು ರೈತ ಸಂಘಟನೆಗಳೀಗ ಪ್ರತಿಭಟನೆಯಿಂದ ಹೊರಬಂದಿವೆ. ಕೇಂದ್ರ ಸರಕಾರವೇ ಕಿಸಾನ್‌ ಮಜ್ದೂರ್‌ ಸಂಘದ ಜತೆ ಪಿತೂರಿ ನಡೆಸಿದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಆರೋಪಿಸುತ್ತಿದೆ. ಇನ್ನೊಂದೆಡೆ ಈ ಹಿಂಸಾಚಾರದಲ್ಲಿ ಖಲಿಸ್ಥಾನಿ ಪರ ಒಲವಿರುವವರ ಕೈವಾಡವಿದೆ ಎನ್ನುವುದು ಇನ್ನೊಂದು ವರ್ಗದ ಆರೋಪ.

Advertisement

 

  1. ಟಿಕಾಯತ್‌ ವಿರುದ್ಧ ರೈತ ಸಂಘಟನೆ ಅಸಮಾಧಾನ :

ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಸಂಘಟನ್‌ ರೈತ ಪ್ರತಿಭಟನೆಗಳಿಂದ ದೂರ ಸರಿದಿದೆ. ಈ ಸಂಘಟನೆಯ ಅಧ್ಯಕ್ಷ ವಿ.ಎಂ.ಸಿಂಗ್‌ ಅವರು ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌ ನೇತೃತ್ವದ ಪ್ರತಿಭಟನೆಗಳಿಗೂ ತಮಗೂ ಸಂಬಂಧವಿಲ್ಲವೆಂದೂ, ನಮಗಿಂತ ಭಿನ್ನ ದಿಕ್ಕು ಹೊಂದಿರುವ ವ್ಯಕ್ತಿಯೊಂದಿಗೆ ತಾವು ಮುಂದುವರಿಯುವುದಿಲ್ಲವೆಂದು ಹೇಳಿದ್ದಾರೆ. ರೈತ ನಾಯಕ ರಾಕೇಶ್‌ ಟಿಕಾಯತ್‌ ರೈತ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈಗಿನ ಹಿಂಸಾಚಾರದಿಂದ ಅವರು ಅಂತರ ಕಾಯ್ದುಕೊಂಡಿದ್ದರಾದರೂ ಹಿಂಸಾಚಾರದಲ್ಲಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಪ್ರತಿಭಟನೆಗಳಿಗೆ ಲಾಠಿ ತೆಗೆದುಕೊಂಡು ಬನ್ನಿ. ಸರ ಕಾರ ನಿಮ್ಮ ಜಮೀನುಗಳನ್ನು ಕಸಿದುಕೊಂಡುಬಿಡುತ್ತದೆ ಎಂದು ತಮ್ಮ ಬೆಂಬ ಲಿಗರಿಗೆ ಟಿಕಾಯತ್‌ ಹೇಳುತ್ತಿರುವ ವೀಡಿಯೋವನ್ನು ಟೈಮ್ಸ್‌ ನೌ ಹಾಗೂ ನ್ಯೂಸ್‌ 18 ಚಾನೆಲ್‌ಗಳು ಬಿತ್ತರಿಸಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಆದರೆ ಈ ವೀಡಿಯೋ ಯಾವಾಗ ರೆಕಾರ್ಡ್‌ ಆಗಿತ್ತು ಎನ್ನುವುದು ಸ್ಪಷ್ಟವಾಗಿಲ್ಲ.

  1. ನವ್‌ದೀಪ್‌ ಸಿಂಗ್‌ ಸಾವು ವರದಿಯಲ್ಲಿ ಎಡವಟ್ಟು :

ದೆಹಲಿ ಹಿಂಸಾಚಾರದ ವೇಳೆ ಬ್ಯಾರಿಕೇಡ್‌ ಅನ್ನು ಬೀಳಿಸಲು ಮುಂದಾದ ಟ್ರ್ಯಾಕ್ಟರ್‌ ಮಗುಚಿ, ಅದರ ಚಾಲನೆ ಮಾಡುತ್ತಿದ್ದ ನವದೀಪ್‌ ಸಿಂಗ್‌ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದರೆ ಪೊಲೀಸರು ಆತನ ಹಣೆಗೆ ಗುಂಡು ಹಾರಿಸಿ ಸಾಯಿಸಿದ್ದಾರೆ, ಈ ಕಾರಣದಿಂದಲೇ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು ಎಂದು ಆರಂಭಿಕ ಸಮಯದಲ್ಲಿ ಪ್ರತಿಭಟನಕಾರರು ಆರೋಪಿಸಿದರು. ಅನೇಕ ಪತ್ರಕರ್ತರು, ಕೆಲವು ಮಾಧ್ಯಮಗಳು, ಟ್ವೀಟಿಗರು ನವದೀಪ್‌ ಪೊಲೀಸರ ಫೈರಿಂಗ್‌ನಿಂದ ಸತ್ತಿರುವ ಸಾಧ್ಯತೆ ಇದೆ, ರೈತರು, ನವದೀಪ್‌ನ ಈ ತ್ಯಾಗವನ್ನು ತಾವು ವ್ಯರ್ಥವಾಗಲು ಬಿಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಟ್ವೀಟ್‌ ಮಾಡಿದರು. ಆದರೆ ಪೊಲೀಸರು ನವದೀಪ್‌ನ ಮೇಲೆ ಫೈರಿಂಗ್‌ ಮಾಡಿಲ್ಲ, ಟ್ರ್ಯಾಕ್ಟರ್‌ ಮಗುಚಿದ್ದರಿಂದಲೇ ಆತ ಸತ್ತಿದ್ದಾನೆ ಎನ್ನುವ ವರದಿಗಳು ಬರುತ್ತಿದ್ದಂತೆಯೇ ಅನೇಕರು ತಮ್ಮ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿದರು. ಈಗ ನವದೀಪ್‌ನ ಮರಣೋತ್ತರ ಪರೀಕ್ಷೆಯ ವರದಿ ಬಿಡುಗಡೆ ಮಾಡಿರುವ ಪೊಲೀಸರು ಅಪಘಾತದಿಂದಲೇ ಮೃತಪಟ್ಟಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.

3. ಖಲಿಸ್ಥಾನ ಪರ ಶಕ್ತಿಗಳ ಕೈವಾಡವಿದೆಯೇ? :

Advertisement

ಈ ಇಡೀ ಪ್ರಕರಣದಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ಹೆಸರೆಂದರೆ, ನಟ ದೀಪ್‌ ಸಿಧು. ಈತ ರೈತ ಪ್ರತಿಭಟನೆಗಳ ವಿಚಾರದಲ್ಲಿ ಕಳೆದ ಕೆಲವು ತಿಂಗಳುಗಳಿಂದಲೂ ಸಕ್ರಿಯರಾಗಿದ್ದಾರೆ. ಕೆಲವು ತಿಂಗಳ ಹಿಂದೆ, ಅವರು ರೈತ ಪ್ರತಿಭಟನೆಗಳು ಕೇವಲ ಭಾರತದ ಭೂರಾಜಕೀಯವಷ್ಟೇ ಅಲ್ಲದೇ, ಇಡೀ ದಕ್ಷಿಣ ಏಷ್ಯಾದ ಭೂರಾಜಕೀಯದಲ್ಲೇ ನಿರ್ಣಾಯಕ ಘಟನೆಯಾಗಲಿದೆ ಎಂಬ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ದಿಲ್ಲಿಯ ಆಪ್‌ ಹಾಗೂ ಕಾಂಗ್ರೆಸ್‌ ಕೂಡ ತಮ್ಮ ಟ್ವೀಟ್‌ಗಳಲ್ಲಿ ಸಿಧುನನ್ನು ರೈತ ಹೋರಾಟಗಾರ ಎಂದು ಕರೆದಿದ್ದವು. ಕೆಂಪುಕೋಟೆಯಲ್ಲಿ ಗದ್ದಲ ನಡೆಯುವ ವೇಳೆ ಅವರೂ ಸಹ ಆ ಜಾಗದಲ್ಲಿದ್ದದ್ದು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಸಿಧು ಈ ಹಿಂದೆ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್‌ ಪರ ಪ್ರಚಾರ ಮಾಡಿದ್ದ ವ್ಯಕ್ತಿ, ಹೀಗಾಗಿ ಹಿಂಸಾಚಾರದಲ್ಲಿ ಕೇಂದ್ರದ ಕೈವಾಡವಿದೆ ಎನ್ನುವ ಆರೋಪ ಒಂದೆಡೆ ಭುಗಿಲೇಳುತ್ತಿದೆ. ಈ ವಿಚಾರದಲ್ಲಿ ಸಿಧು, ತಾನು ಸ್ನೇಹಕ್ಕಾಗಿ ಸನ್ನಿ ಪರ ಪ್ರಚಾರ ಮಾಡಿದ್ದೆನೆಂದು ಅದು ತಾನು ಮಾಡಿದ ತಪ್ಪೆಂದು ಈ ಹಿಂದೆ ಹೇಳಿರುವ ಸಂಗತಿಯೂ ಪ್ರಸ್ತಾವ‌ವಾಗುತ್ತಿದೆ. ಇನ್ನೊಂದೆಡೆ ಈ ಕುರಿತು ವರದಿ ಮಾಡಿರುವ ಓಪಿ ಇಂಡಿಯಾ, ಖಲಿಸ್ಥಾನಿ ಪರ ಹೋರಾಟಕ್ಕೂ ಸಿಧೂಗೂ ಸಂಬಂಧವಿರುವುದರ ಬಗ್ಗೆ ವರದಿ ಮಾಡಿದೆ. ಖಲಿಸ್ಥಾನ ಪರ ಘೋಷಣೆಗಳನ್ನು ಕೂಗುವುದು ತಪ್ಪಲ್ಲ ಎಂದು ಆತ ಹೇಳಿದ ವಿಚಾರವನ್ನು ಪ್ರಸ್ತಾವಿಸಿದೆ ಈ ವರದಿ. ಒಟ್ಟಲ್ಲಿ ಇವರೆಲ್ಲದರಿಂದಾಗಿ ಪ್ರತಿಭಟನಕಾರರಲ್ಲಿ ಖಲಿಸ್ಥಾನ ಪರ ಶಕ್ತಿಗಳಿವೆ ಎನ್ನುವ ಆರೋಪ ಮತ್ತೆ ಜೋರಾಗಿದ್ದರೆ, ಇನ್ನೊಂದೆಡೆ ಖುದ್ದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್‌ ಸ್ವಾಮಿ, “ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಆಪ್ತವಾಗಿರುವ ಬಿಜೆಪಿಯ ಸದಸ್ಯರೇ ಕೆಂಪುಕೋಟೆಯ ಗದ್ದಲದಲ್ಲಿ ಪ್ರಚೋದಕರಾಗಿರಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇದು ಸುಳ್ಳೂ ಆಗಿರಬಹುದು. ಆದರೂ ಪತ್ತೆ ಮಾಡಿ’ ಎಂದಿರುವುದು ಮತ್ತೂಂದು ವಿವಾದಕ್ಕೆ ಕಾರಣವಾಗಿದೆ.

  1. ಎಂಎಸ್‌ಪಿ ವರ್ಸಸ್‌ ಪಿಎಂ ಕಿಸಾನ್‌ ಸಮ್ಮಾನ ನಿಧಿಯ ವಿಚಾರ :

ಒಂದೆಡೆ ದಿಲ್ಲಿಯಲ್ಲಿ ಹಿಂಸಾಚಾರ ನಡೆದ ಅನಂತರ ಇನ್ನೊಂದೆಡೆ ಮತ್ತೆ ಎಂಎಸ್‌ಪಿ ವಿಚಾರ ಚರ್ಚೆಗೆ ಬಂದಿದೆ. ಸರಕಾರ ಎಂಎಸ್‌ಪಿಯನ್ನು ಕಾನೂನಿನ ರೂಪದಲ್ಲಿ ಖಾತ್ರಿಪಡಿಸಬೇಕು ಎಂದು ಒಂದು ವರ್ಗ ವಾದಿಸಿದರೆ, ಪಂಜಾಬ್‌ನ ಸಿರಿವಂತ ರೈತರಿಗಷ್ಟೇ ಕನಿಷ್ಠ ಬೆಂಬಲ ಬೆಲೆ ಲಾಭದಾಯಕವಾಗಿದ್ದು, ಅವರು ಅತೀ ಹೆಚ್ಚು ಧಾನ್ಯಗಳನ್ನು ಉತ್ಪಾದಿಸಿ ಸರಕಾರದ ಬೊಕ್ಕಸಕ್ಕೆ ಹೊರೆ ಹಾಕುತ್ತಿದ್ದಾರೆ. ಬಡ ರೈತರಿಗೆ ಪಿಎಂ ಕಿಸಾನ್‌ ಯೋಜನೆಯೇ ನಿಜಕ್ಕೂ ಸಹಾಯ ಮಾಡುತ್ತಿದೆ ಎಂದು ಹೇಳುತ್ತಿದೆ ಸ್ವರಾಜ್ಯದ ವರದಿ. ಇನ್ನೊಂದೆಡೆ ಎಕನಾಮಿಕ್‌ ಟೈಮ್ಸ್‌ ಪತ್ರಿಕೆಯು ನೆರೆಯ ಹರಿಯಾಣದ ಸಾಮಾನ್ಯ ಜನರು ಪಂಜಾಬ್‌ನ ಜನರಿಗಿಂತ 1.5 ಪಟ್ಟು ಹೆಚ್ಚು ಸಿರಿವಂತರಾಗಿದ್ದಾರೆ ಎನ್ನುವ ಅರ್ಥಶಾಸ್ತ್ರಜ್ಞೆ ಶಮಿಕಾ ರವಿಯವರ ಹೇಳಿಕೆಯನ್ನು ಉಲ್ಲೇಖೀಸುತ್ತಾ, ಹೇಗೆ ಪಂಜಾಬ್‌ನ ಕೃಷಿ ಉತ್ಪಾದನ ವ್ಯವಸ್ಥೆಯು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಹಾಗೆಯೇ ಆ ರಾಜ್ಯದ ತರ್ಕಬಾಹಿರ ಉತ್ಪಾದನೆಯನ್ನೂ ಪ್ರಶ್ನಿಸಿದೆ.  ಪಂಜಾಬ್‌ನ ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗ‌ಳು ಸಿರಿವಂತ ರೈತರ ಮೇಲೆ ಒತ್ತಡ ಬೀರುತ್ತಿವೆ ಎನ್ನುವ ಬಗ್ಗೆ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next