ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ನೂತನ ಕೃಷಿ ಕಾಯ್ದೆಗೆ ಸುಪ್ರೀಂಕೋರ್ಟ್ ತಾತ್ಕಾಲಿಕವಾಗಿ ಮಂಗಳವಾರ(ಜನವರಿ 12, 2021) ತಡೆ ನೀಡಿದ ಬೆನ್ನಲ್ಲೇ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಮೇಶ್ ಅವರು ಸುದ್ದಿಗಾರರ ಜತೆ ಮಾತನಾಡಿ, ನಮಗೆ ಇದರಿಂದ ಸಮಾಧಾನವಾಗಿಲ್ಲ, ನಾವು ಗಡಿಯಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ. ಮತ್ತು ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ರದ್ದುಪಡಿಸುವವರೆಗೆ ಮನೆಗೆ ತೆರಳುವುದಿಲ್ಲ ಎಂದು ಹೇಳಿದರು.
ಕೇಂದ್ರದ ಮೂರು ಕಾಯ್ದೆ ಜಾರಿಗೆ ತಾತ್ಕಾಲಿಕ ತಡೆ ನೀಡಿ ಸುಪ್ರೀಂಕೋರ್ಟ್ ವಿವಾದ ಬಗೆಹರಿಸಲು ಸಮಿತಿಯೊಂದನ್ನು ರಚಿಸಿದೆ. ಮತ್ತೊಂದೆಡೆ ಸಂಯುಕ್ತ್ ಕಿಸಾನ್ ಮೋರ್ಚಾ(40 ರೈತ ಸಂಘಟನೆಗಳು) ಮುಂದಿನ ಹೋರಾಟದ ರೂಪರೇಷೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇಂದು ಸಂಜೆ ಸಭೆಯನ್ನು ಕರೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ಪತ್ನಿಯೊಂದಿಗೆ ಅನೈತಿಕ ಸಂಬಂಧದ ಶಂಕೆ: ಸುಪಾರಿ ಹತ್ಯೆ, ನಾಲ್ವರು ಆರೋಪಿಗಳ ಬಂಧನ
ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಮಿತಿ ಮುಂದೆ ಹಾಜರಾಗಲು ರೈತರು ಸಿದ್ದರಿಲ್ಲ, ಆದರೆ ಈ ಬಗ್ಗೆ ಮೋರ್ಚಾ ಪ್ರಾಥಮಿಕ ನಿರ್ಧಾರವನ್ನು ಕೈಗೊಳ್ಳಲಿದೆ. ಕೃಷಿ ಕಾಯ್ದೆಗೆ ತಡೆ ನೀಡಿರುವ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸುವುದಾಗಿ ತಿಳಿಸಿರುವ ರೈತ ಸಂಘಟನೆ, ನಮಗೆ ಮೂರು ಕಾಯ್ದೆಗಳು ಸಂಪೂರ್ಣವಾಗಿ ರದ್ದುಗೊಳ್ಳಬೇಕು ಎಂದು ತಿಳಿಸಿವೆ.