ವಾಡಿ: ಅನ್ನ ಬೆಳೆದು ದೇಶದ ಜನತೆ ಹಸಿವು ನೀಗಿಸುವ ರೈತರು ಉಳಿಯದಿದ್ದರೆ ಮನುಕುಲಕ್ಕೆ ಗಂಡಾಂತರ ಎದುರಾಗಲಿದೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ ಯುಸಿಐ) ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ವೀರಭದ್ರಪ್ಪ ಆರ್.ಕೆ ಆತಂಕ ವ್ಯಕ್ತಪಡಿಸಿದರು.
ಹಳಕರ್ಟಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ರೈತ-ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಸ್) ಗ್ರಾಮೀಣ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ದೇಶ ತಾಂತ್ರಿಕವಾಗಿ ಪ್ರಗತಿ ಕಂಡರೂ, ಕೈಗಾರೀಕರಣ ಕ್ಷೇತ್ರದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಬೇಸಾಯ ಪದ್ಧತಿ ಉಳಿಯದಿದ್ದರೆ ಬದುಕಲು ಮಣ್ಣು ತಿನ್ನಬೇಕಾಗುತ್ತದೆ. ಭೂಮಿಯ ಕೃಷಿ ಧಿಕ್ಕರಿಸಿ ಹಣದ ಬೆನ್ನಟ್ಟಿದವರು ಮರಳಿ ರೈತ ಬೆಳೆದ ಅನ್ನವನ್ನೇ ತಿನ್ನಬೇಕು. ಆದರೆ ಕೃಷಿ ಕಾಯಕದಲ್ಲಿ ತೊಡಗಿರುವ ನೇಗಿಲ ಯೋಗಿಗಳನ್ನು ಸರ್ಕಾರ ನೆಮ್ಮದಿಯಾಗಿರಲು ಬಿಡುತ್ತಿಲ್ಲ. ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಸಾವಿಗೆ ಶರಣಾಗುವ ಪರಿಸ್ಥಿತಿ ಸೃಷ್ಟಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತರು ಜಾಗೃತರಾಗಿ ಕರಾಳ ಕಾನೂನುಗಳ ವಿರುದ್ಧ ಹೋರಾಟ ಕಟ್ಟಲು ಮುಂದಾಗಬೇಕು. ದೆಹಲಿಯಲ್ಲಿ ರೈತರು ನಡೆಸಿದ ಐತಿಹಾಸಿಕ ಹೋರಾಟ ಕೇಂದ್ರ ಸರ್ಕಾರವನ್ನೇ ನಡುಗಿಸಿತು. ಮೂರು ಮರಣ ಶಾಸನಗಳನ್ನು ವಾಪಸ್ ಪಡೆಯುವುದಾಗಿ ಹೋರಾಟ ನಿಲ್ಲಿಸಿದ ಪ್ರಧಾನಿ ಮೋದಿ ಈಗ ಮತ್ತೆ ಉಲ್ಟಾ ಹೊಡೆದಿದ್ದಾರೆ. ರೈತರನ್ನು ಒಕ್ಕಲೆಬ್ಬಿಸುವ ಉದ್ಯಮಿಪತಿಗಳ ಪರವಾದ ಕೃಷಿ ಕಾನೂನುಗಳನ್ನು ಜಾರಿಗೆ ತರಲು ತಂತ್ರ ರೂಪಿಸುತ್ತಿದ್ದಾರೆ ಎಂದು ಆಪಾದಿಸಿದರು.
ಆರ್‌ಕೆಎಸ್ ಚಿತ್ತಾಪುರ ತಾಲೂಕು ಕಾರ್ಯದರ್ಶಿ ಮಲ್ಲಣ್ಣ ದಂಡಬಾ, ಮುಖಂಡರಾದ ಶಿವುಕುಮಾರ ಆಂದೋಲಾ, ಚೌಡಪ್ಪ ಗಂಜಿ ಇತರರು ಪಾಲ್ಗೊಂಡಿದ್ದರು.
ಇದೇ ವೇಳೆ ಆರ್ ಕೆಎಸ್ ಸಂಘಟನೆಯ ಹಳಕರ್ಟಿ ಗ್ರಾಮ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚೌಡಪ್ಪ ಗಂಜಿ (ಅಧ್ಯಕ್ಷ), ದೊಡ್ಡಪ್ಪ ಹೊಸೂರ, ಅಯ್ಯಪ್ಪ ಹುಳಗೋಳ, ಭೀಮಾಶಂಕರ ಇಸಬಾ (ಉಪಾಧ್ಯಕ್ಷರು), ಶಿವುಕುಮಾರ ಆಂದೋಲಾ (ಕಾರ್ಯದರ್ಶಿ), ಭೀಮಪ್ಪ ಮಾಟ್ನಳ್ಳಿ (ಸಹ ಕಾರ್ಯದರ್ಶಿ), ರೈತರಾದ ಈರಪ್ಪ ಜೈನಾಪುರ, ವೀರೇಶ ನಾಲವಾರ, ಮಹಾಂತೇಶ ಹುಳಗೋಳ, ಮಂಜುನಾಥ ಹಿಟ್ಟಿನ್, ನಾಗರಾಜ ಇಸಬಾ, ಮುನೀಂದ್ರ ಕೊಟ್ಟಿಗೆ, ಬಸಪ್ಪ ಇಸಬಾ, ವೀರಭದ್ರ ಹಿಟ್ಟಿನ್, ವಿರೂಪಾಕ್ಷಿ ಛತ್ರಿಕಿ, ಶಶಿಕುಮಾರ ಇಸಬಾ, ಮಹೆಬೂಬ್, ಲಕ್ಷ್ಮಣ ಇಸಬಾ, ಸಾಬಣ್ಣ ಹೊಸೂರ, ಗಿರಿಯಪ್ಪ, ಸಿವಯೋಗಿ ಬಳ್ಳಾ ಸಮಿತಿ ಸದಸ್ಯರಾಗಿ ಆಯ್ಕೆಯಾದರು.