ನವದೆಹಲಿ:ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಪಟ್ಟು ಹಿಡಿದು ಕಳೆದ ಹಲವು ದಿನಗಳಿಂದ ದೆಹಲಿಯ ಗಡಿಯಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಕೇಂದ್ರದ ಲಿಖಿತ ಭರವಸೆಯ ಕರಡು ಪ್ರಸ್ತಾವನೆಯನ್ನು ಬುಧವಾರ(ಡಿಸೆಂಬರ್ 09, 2020) ತಿರಸ್ಕರಿಸುವ ಮೂಲಕ ರೈತರ ಹಾಗೂ ಕೇಂದ್ರದ ನಡುವಿನ ಬಿಕ್ಕಟ್ಟು ಉಲ್ಬಣಗೊಂಡಂತಾಗಿದೆ.
ರೈತರ ಬೇಡಿಕೆಯನ್ನು ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಘೋಷಿಸಿವೆ. ಇದರಲ್ಲಿ ಮುಖ್ಯವಾಗಿ ದೆಹಲಿ-ಜೈಪುರ್ ಹೆದ್ದಾರಿ ಬಂದ್, ರಿಲಯನ್ಸ್ ಮಾಲ್ ಗಳ ಬಹಿಷ್ಕಾರ ಹಾಗೂ ಟೋಲ್ ಪ್ಲಜಾ ಮುತ್ತಿಗೆ ಹಾಕುವುದಾಗಿ ತಿಳಿಸಿದೆ.
ಡಿಸೆಂಬರ್ 14ರಂದು ದೇಶಾದ್ಯಂತ ರೈತರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದೆ. ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸರಣಿಯಾಗಿ ತಿದ್ದುಪಡಿ ಮಾಡುವ ಲಿಖಿತ ಪ್ರಸ್ತಾಪವನ್ನು ಕಳುಹಿಸಿದ್ದು, ಇದನ್ನು ತಿರಸ್ಕರಿಸಿದ ನಂತರ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧಾರ ತೆಗೆದುಕೊಂಡಿರುವುದಾಗಿ ರೈತ ಸಂಘಟನೆಗಳು ತಿಳಿಸಿವೆ.
ಇದನ್ನೂ ಓದಿ:ಹಗಲು ಹೊತ್ತಿನಲ್ಲಿ ಹೆದ್ದಾರಿ ಹಂಪ್ಸ್ ಗೆ ಬಣ್ಣ! ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್
ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ, ವ್ಯಾಜ್ಯಗಳಿದ್ದರೆ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹೋಗಲು ರೈತರಿಗೆ ಅವಕಾಶ ಹಾಗೂ ಇಲೆಕ್ಟ್ರಿಸಿಟಿ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸುವುದು ಸೇರಿದಂತೆ ಕೇಂದ್ರ ಹಲವು ತಿದ್ದುಪಡಿ ಮಾಡುವುದಾಗಿ ಕರಡು ಪ್ರಸ್ತಾವನೆಯಲ್ಲಿ ತಿಳಿಸಿತ್ತು.
ತಿದ್ದುಪಡಿ ಕರಡು ಪ್ರಸ್ತಾಪವನ್ನು ಪ್ರತಿಭಟನಾ ನಿರತ 13 ರೈತ ಸಂಘಟನೆಗಳ ಮುಖಂಡರಿಗೆ ಕೇಂದ್ರ ಕಳುಹಿಸಿದ್ದು, ನೂತನ ಕಾಯ್ದೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸ್ಪಷ್ಟನೆ ನೀಡಲು ಸರ್ಕಾರ ಸಿದ್ದವಿರುವುದಾಗಿ ತಿಳಿಸಿತ್ತು. ಅಲ್ಲದೇ ರೈತರಿಗೆ ಅಸಮಾಧಾನ ಇರುವ ಕಡೆಗಳಲ್ಲಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಭರವಸೆಯನ್ನೂ ನೀಡಿತ್ತು. ಆದರೆ ರೈತ ಸಂಘಟನೆಗಳು ತಿದ್ದುಪಡಿ ಪ್ರಸ್ತಾವನೆ ತಿರಸ್ಕರಿಸಿ, ಕಾಯ್ದೆ ರದ್ದುಪಡಿಸಲು ಬಿಗಿ ಪಟ್ಟು ಹಿಡಿದಿರುವುದಾಗಿ ವರದಿ ತಿಳಿಸಿದೆ.