Advertisement

ಮಹಾರಾಷ್ಟ್ರಕ್ಕೆ ಕಬ್ಬು ಸಾಗಿಸಲು ರೈತರು ಸಿದ್ಧ

11:39 AM Nov 19, 2018 | |

ಬೀದರ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬೆಲೆ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಇಲ್ಲಿನ ರೈತರು ನೆರೆ ರಾಜ್ಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಮುಂದಾಗಿದ್ದಾರೆ.

Advertisement

ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಮಹಾರಾಷ್ಟ್ರದಲ್ಲಿ ಕೂಡ ಕಬ್ಬಿನ ಇಳುವರಿ ಕಡಿಮೆ ಇದ್ದು, ವಿವಿಧ ಕಾರ್ಖಾನೆಗಳು ಗಡಿ ಜಿಲ್ಲೆಯ ಕಡೆಗೆ ಮುಖ ಮಾಡಿವೆ. ಈಗಾಗಲೇ ಒಂದು ಸುತ್ತು ರೈತರೊಂದಿಗೆ ಮಾತುಕತೆ ನಡೆಸಿರುವ ಕಾರ್ಖಾನೆಯ ಅಧಿಕಾರಿಗಳು ಕನಿಷ್ಠ 2700 ರಿಂದ 3,000 ರೂ. ಹಣ ಪಾವತಿಸುವ ಭರವಸೆ ರೈತರಿಗೆ ನೀಡುತ್ತಿದ್ದಾರೆ. ಅಲ್ಲದೆ, ಜಿಲ್ಲೆಯ ವಿವಿಧ ಭಾಗದ ರೈತರು ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವ ಭರವಸೆ ಕೂಡ ನೀಡುತ್ತಿದ್ದಾರೆ.
 
ಬೆಲೆ ನಿಗದಿ ಇಲ್ಲ: ಕಾರಣ ಇಲ್ಲಿನ ವಿವಿಧ ಸಕ್ಕರೆ ಕಾರ್ಖಾನೆಗಳು ಇಂದಿಗೂ ಕಬ್ಬಿನ ಬೆಲೆ ನಿಗದಿ ಮಾಡಿಲ್ಲ. ಎಷ್ಟು ಬೆಲೆ ನೀಡುತ್ತಿರಿ ಎಂದು ರೈತರು ಪ್ರಶ್ನಿಸಿದರೂ ಕೂಡ ಕಾರ್ಖಾನೆಗಳ ಅಧಿಕಾರಿಗಳು ಯಾವುದೇ ಸೂಕ್ತ ಮಾಹಿತಿ ನೀಡುತ್ತಿಲ್ಲ. ಎಲ್ಲ ಕಾರ್ಖಾನೆಗಳು ಎಷ್ಟು ನೀಡುತ್ತಾರೊ ಅಷ್ಟು ಪ್ರಮಾಣದ ಹಣ ನಾವು ನೀಡುತ್ತೇವೆ ಎಂದು ಉತ್ತರಿಸುತ್ತಿದ್ದಾರೆ. ಅಲ್ಲದೆ, ಯಾವಾಗ ಪೂರ್ಣ ಹಣ ಪಾವತಿ ಮಾಡುತ್ತಾರೆ ಎಂಬುದನ್ನು ಕೂಡ ತಿಳಿಸುತ್ತಿಲ್ಲ ಎಂದು ರೈತ ಮುಖಂಡ ಸತೀಶ ನನ್ನೂರೆ ತಿಳಿಸಿದ್ದಾರೆ. 

ನಗದು ಹಣ ಭರವಸೆ: ಮಹಾರಾಷ್ಟ್ರದ ಕಾರ್ಖಾನೆಗಳಿಗೆ ರೈತರು ಕಬ್ಬು ಪೂರೈಕೆ ಮಾಡಿದ ನಂತರ ನಗದು ಹಣ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಕಬ್ಬು ಸಾಗಿಸಿದ ನಂತರ ನಿಗದಿತ ಹಣ ಪಾವತಿ ಮಾಡಿ, ಇನ್ನುಳಿದ ಹಣ ನಿಗದಿತ ಅವಧಿಯಲ್ಲಿ ಪಾವತಿಸುವುದಾಗಿ ರೈತರಿಗೆ ಹೇಳುತ್ತಿರುವ ಬಗ್ಗೆ ತಿಳಿದುಬಂದಿದೆ. ಸಧ್ಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ವಿವಿಧೆಡೆ ಸಂಚರಿಸಿ ಜಿಲ್ಲೆಯಲ್ಲಿನ ಕಾರ್ಖಾಗಳು ನೀಡುವ ಬೆಲೆಗಿಂತ ಹೆಚ್ಚು ಬೆಲೆ ನೀಡುತ್ತೇವೆ. ಅಲ್ಲದೆ, ಸೂಕ್ತ ಸಮಯಕ್ಕೆ ಹಣ ಪಾವತಿ ಮಾಡುತ್ತೇವೆ ಎಂದು ರೈತರಿಗೆ ಭರವಸೆ ನೀಡುತ್ತಿದ್ದಾರೆ. ಅಲ್ಲದೆ, ಕಳೆದ ವರ್ಷ ಕೂಡ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು 2,200 ರಿಂದ 2,500 ರೂ. ವರೆಗೆ ಬೆಲೆ ನೀಡಿವೆ ಎಂದು ರೈತರಿಗೆ ಮನವರಿಕೆ ಮಾಡುವ ಕೆಲಸ ನಡೆಯುತ್ತಿದೆ.

ಆತಂಕದಲ್ಲಿ ರೈತ: ಮಳೆ ಕೊರತೆಯಿಂದ ಹೊಲದಲ್ಲಿನ ಕಬ್ಬು ಕೂಡಲೇ ಯಾವುದಾದರೂ ಕಾರ್ಖಾನೆಗೆ ಸಾಗಿಸುವ ಮೂಲಕ ತಲೆ ಮೇಲಿನ ಭಾರ ಇಳಿಸಿಕೊಳ್ಳಬೇಕೆಂಬ ಮನೋಭಾವವನ್ನು ರೈತರು ಹೊಂದಿದ್ದಾರೆ. ಕೊಳವೆ ಬಾವಿ ಹಾಗೂ ತೆರೆದ ಭಾವಿಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿರುವುದು ಇದಕ್ಕೆ ಕಾರಣ. 

ದಿನದಿಂದ ದಿನಕ್ಕೆ ಕಬ್ಬಿನ ಇಳುವರಿ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ಕಬ್ಬು ಒಣಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈತರು ಮೊದಲು ಬಂದ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಬೇಕು ಎಂಬ ಆಲೋಚನೆಯಲ್ಲಿದ್ದಾರೆ. ಜಿಲ್ಲೆಯಲ್ಲಿನ ವಿವಿಧ ಕಾರ್ಖಾನೆಗಳು ಕಳೆದ ಸಾಲಿನಲ್ಲಿ ಟನ್‌ ಕಬ್ಬಿಗೆ ರೂ. 1900 ಕೂಡ ಪಾವತಿ ಮಾಡದೇ ಇರುವುದು ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಬಾಕಿ ಇರಿಸಿಕೊಂಡಿರುವ ಕಾರ್ಖಾನೆಗಳು ಮೊದಲು ರೈತರಿಗೆ ಹಣ ಪಾವತಿ ಮಾಡಿ ಕಬ್ಬು ಕಟ್ಟಾವಿಗೆ ಬರಬೇಕು ಎಂದು ಅನೇಕ ರೈತರು ಆಗ್ರಹಿಸುತ್ತಿದ್ದಾರೆ.

Advertisement

ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರೆ, ಅವರನ್ನು ಬಂಧಿಸಿ ಪ್ರತಿಭಟನೆ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರೈತಪರ, ರೈತರ ಬೆನ್ನೆಲುಬು ಎಂದು ಹೇಳಿಕೊಲುವ ಸರ್ಕಾರ ರೈತರ ಪ್ರತಿಭಟನೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಮೊದಲು ಸರ್ಕಾರ ಸಕ್ಕರೆ ಕಾರ್ಖಾನೆಗಳ ನೀತಿ ಬದಲಾವಣೆ ಮಾಡಬೇಕು. ಚುನಾವಣೆಗೆ ಸ್ಪರ್ಧಿಸುವ ರಾಜಕಾರಣಿಗಳು ಯಾವುದೇ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದವರು ಇರಬಾರದು ಎಂಬ ನೀತಿ ಜಾರಿಗೊಳಿಸಿದರೆ, ರೈತರಿಗೆ ಉತ್ತಮ ಬೆಲೆ ದೊರೆಯುತ್ತದೆ. ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಕೈಯಲ್ಲಿದ್ದು, ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ರೈತರ ಮೇಲೆ ಕೇಸ್‌ ಹಾಕಿ ಸರ್ಕಾರ ತಪ್ಪು ಮಾಡುತ್ತಿದೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕೂಡ ಬಾಕಿ ಹಣ ಪಾವತಿ ಮಾಡಬೇಕು. ಅಲ್ಲದೆ, ಸರ್ಕಾರದ ಎಫ್‌ಆರ್‌ಪಿ ಪ್ರಕಾರ ಕಬ್ಬಿನ ಹಣ ಪಾವತಿ ಮಾಡಬೇಕು. ಅದು, ನಿಗದಿತ ಅವಧಿಯಲ್ಲಿ ಪಾವತಿ ಮಾಡುವ ಕೆಲಸವನ್ನು ಕಾರ್ಖಾನೆಗಳು ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಕುರಿತು ರೈತ ಸಂಘ ಹೋರಾಟಕ್ಕೆ ಇಳಿಯಬೇಕಾಗುತ್ತದೆ.
 ಮಲ್ಲಿಕಾರ್ಜುನ ಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next