ಅಫಜಲಪುರ: ಮುಂಗಾರು ಮಳೆ ಬಾರದೆ ತಾಲೂಕಿನಾದ್ಯಂತ ರೈತರು ಹಣೆ ಮೇಲೆ ಕೈ ಹೊತ್ತು ಮುಗಿಲ
ಕಡೆ ಮುಖ ಮಾಡಿದ್ದರು. ಬೆಳೆಗಳೆಲ್ಲ ಬಾಡಿ ಕೃಷಿಕನ ಆಸೆಗೆ ತಣ್ಣೀರು ಎರಚಿದ್ದವು. ಆದರೆ ಹಿಂಗಾರು ಉತ್ತರಿ ಮಳೆ ಅಬ್ಬರಿಸಲಾರಂಭಿಸಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮಳೆ ಕೊರತೆಯಿಂದ ಹಾಳಾದ ಅಲ್ಪಾವಧಿ ಬೆಳೆ: ಮುಂಗಾರು ಬಿತ್ತನೆ ವೇಳೆ ಬಿತ್ತನೆಗೊಂಡ ಅಲ್ಪಾವಧಿ ಬೆಳೆಗಳಾದ ಹೆಸರು, ಎಳ್ಳು, ಉದ್ದು, ಸೋಯಾಬಿನ್ ಮಳೆ ಕೊರತೆಯಿಂದ ಹಾಳಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿತ್ತು. ಅಲ್ಲದೆ ತೊಗರಿ ಬೆಳೆಗೂ ಮಳೆ ಕೊರತೆ ತೀವ್ರ ಸಮಸ್ಯೆ ಮಾಡಿತ್ತು. ಅಲ್ಲಲ್ಲಿ ತೊಗರಿ ಬೆಳೆಯೂ ಹಾಳಾಗಿದ್ದು, ರೈತರ ಚಿಂತೆ ಹೆಚ್ಚಾಗುವಂತೆ ಮಾಡಿತ್ತು.
ಅಬ್ಬರಿಸುತ್ತಿರುವ ಹಿಂಗಾರು: ತಾಲೂಕಿನಾದ್ಯಂತ ಹಿಂಗಾರು ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಮಳೆಗಾಗಿ ಕಾಯ್ದಿದ್ದ ರೈತರು ಮಂದಹಾಸ ಬೀರಿದ್ದಾರೆ. ಅಲ್ಲದೆ ಹಿಂಗಾರು ಬಿತ್ತನೆಗೆ ಸಜ್ಜಾಗಿದ್ದಾರೆ. ತಾಲೂಕಿನಾದ್ಯಂತ ಹಿಂಗಾರು ಬಿತ್ತನೆ ಗುರಿ 45,660 ಹೆಕ್ಟೇರ್ ಇದೆ. ಇದರಲ್ಲಿ ಮಳೆಯಾಶ್ರಿತ 39,610 ಹೆಕ್ಟೇರ್ ಪ್ರದೇಶವಿದ್ದು, ಉಳಿದ 6,150 ಹೆಕ್ಟೇರ್ ನೀರಾವರಿ ಭೂಮಿ ಇದೆ. ಹಿಂಗಾರು ಹಂಗಾಮಿನಲ್ಲಿ ಕಡಲೆ, ಜೋಳ, ಗೋಧಿ, ಸೂರ್ಯಕಾಂತಿ, ಶೇಂಗಾ, ಕುಸುಬಿ ಬೆಳೆಗಳು ಬೆಳೆಯಲು ಸೂಕ್ತವಾಗಿವೆ.
ಬೀಜದ ದಾಸ್ತಾನು: ಅಫಜಲಪುರ, ಕರ್ಜಗಿ, ಅತನೂರ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಕಡಲೆ 1180 ಕ್ವಿಂಟಾಲ್, ಜೋಳ 34.5 ಕ್ವಿಂಟಾಲ್ ಬಂದಿದೆ. ಉಳಿದ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಆಗಲಿವೆ. ರಿಯಾಯ್ತಿ ದರದಲ್ಲಿ ಖರೀದಿ ಮಾಡಬಹುದಾಗಿದೆ
ಹಿಂಗಾರು ಮಳೆ ಬಂದಿದ್ದು ತೊಗರಿ ಬೆಳೆಗೆ ಅನುಕೂಲವಾಗಿದೆ. ಹಿಂಗಾರು ಬಿತ್ತನೆಗೆ ಸಂಪೂರ್ಣ ನೆಲ ಹಸಿಯಾಗಿಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಜೋಳ, ಕಡಲೆ ಬೀಜದ ದಾಸ್ತಾನು ಇದ್ದು, ಉಳಿದ ಹಿಂಗಾರು ಬಿತ್ತನೆ ಬೀಜಗಳು ಆದಷ್ಟು ಬೇಗ ಬರಲಿವೆ. ಕುಸುಬಿ ಬೀಜದ ಬೇಡಿಕೆ ಇಲ್ಲ.
ಮಹಮದ್ ಖಾಸಿಮ್, ಸಹಾಯಕ ಕೃಷಿ ನಿರ್ದೇಶಕ
ಮಲ್ಲಿಕಾರ್ಜುನ ಹಿರೇಮಠ