Advertisement

ರೈತ ಫಲಾನುಭವಿಗಳಿಗೆ ಸ್ಪಷ್ಟ ಮಾಹಿತಿ ನೀಡಿ: ಕೂರ್ಮಾರಾವ್‌

12:53 PM Nov 22, 2018 | Team Udayavani |

ಯಾದಗಿರಿ: ಸಹಕಾರ ಸಂಘ, ಸಹಕಾರ ಬ್ಯಾಂಕ್‌ಗಳಿಂದ ರೈತರು ಪಡೆದಿರುವ ಅಲ್ಪಾವ ಧಿ ಬೆಳೆಸಾಲ 2018ರ ಜುಲೈ 10ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಗರಿಷ್ಠ 1 ಲಕ್ಷ ರೂ. ವರೆಗಿನ ಸಾಲಮನ್ನಾ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಈ ಬಗ್ಗೆ ರೈತ ಫಲಾನುಭವಿಗಳಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಹಕಾರ ಸಂಘ, ಸಹಕಾರ ಬ್ಯಾಂಕ್‌ಗಳಿಂದ ಜಿಲ್ಲೆಯ ರೈತರು ಪಡೆದಿರುವ ಅಲ್ಪಾವ ಧಿ ಬೆಳೆ ಸಾಲ ಮನ್ನಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಸಂಘ, ಸಹಕಾರ ಬ್ಯಾಂಕ್‌ಗಳಿಂದ ಅಲ್ಪಾವ ಧಿ ಬೆಳೆಸಾಲ ಪಡೆದಿರುವ ಜಿಲ್ಲೆಯ ರೈತರು ಗರಿಷ್ಠ 1 ಲಕ್ಷ ರೂ. ವರೆಗಿನ ಸಾಲಮನ್ನಾ ಯೋಜನೆಯ ಸೌಲಭ್ಯವನ್ನು ಪಡೆಯಲು ಸಂಬಂಧಪಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅಗತ್ಯ ದಾಖಲೆಗಳೊಂದಿಗೆ ಸ್ವಯಂ ದೃಢೀಕರಣ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಬ್ಯಾಂಕ್‌ ಖಾತೆ ಸಂಖ್ಯೆ, ಆಧಾರ್‌ ಸಂಖ್ಯೆ, ಪಡಿತರ ಚೀಟಿ ಮತ್ತು ಇನ್ನಿತರ ದಾಖಲೆಗಳನ್ನು ಪಡೆದಾಗ ದಾಖಲೆಗಳಲ್ಲಿರುವ ಹಾಗೆಯೇ ಡಾಟಾ ನಮೂದು ಮಾಡಿಸಬೇಕು ಎಂದು
ತಿಳಿಸಿದರು. ರೈತರ ಅಗತ್ಯ ದಾಖಲೆಗಳ ಡಾಟಾ ನಮೂದು ಮಾಡುವಾಗ ಎದುರಾಗುವ ತಾಂತ್ರಿಕ ತೊಂದರೆಗಳನ್ನು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ, ಸರಿಪಡಿಸುವಂತೆ ನಾಡ ಕಚೇರಿ ಸಮಾಲೋಚಕ ಮಧುಸೂಧನ್‌, ಭೂಮಿ ಸಮಾಲೋಚಕ ಮಹಾಂತೇಶ ಅವರಿಗೆ ಸೂಚಿಸಿದರು. ಸರ್ಕಾರ ರೈತರ ಪ್ರಗತಿಗೆ ಹೆಚ್ಚಿನ ಕಾಳಜಿ ತೋರಿಸುತ್ತದೆ.

ರೈತರ ಆತ್ಮಹತ್ಯೆ ತಡೆಗಟ್ಟಲು ಮತ್ತು ಅವರ ನೆರವಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇವುಗಳಲ್ಲಿ ಸಾಲಮನ್ನಾ ಸೌಲಭ್ಯವು ವಿಶೇಷವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಅರ್ಹ ರೈತ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಲ್ಲಿ ನಿರ್ಲಕ್ಷ್ಯ ವಹಿಸಬಾರದು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.

ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೂಡ ಮಾತನಾಡಿ, ಈ ಬಾರಿ ಘೋಷಿಸಿದ ಸಾಲಮನ್ನಾ ಯೋಜನೆಯ ವ್ಯಾಪ್ತಿಗೆ ಜಿಲ್ಲೆಯ 66 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬರುತ್ತವೆ. ಈ ಸಂಘಗಳಲ್ಲಿ 13,466 ರೈತ ಸದಸ್ಯರು ಸಾಲಮನ್ನಾ ಯೋಜನೆಯ ಸುತ್ತೋಲೆಯಂತೆ ಹೊರಬಾಕಿ ಹೊಂದಿರುತ್ತಾರೆ. ಇವರಲ್ಲಿ ಈಗಾಗಲೇ ಯಾದಗಿರಿಯ 1544 ಶಹಾಪುರದ 5117 ಹಾಗೂ ಸುರಪುರದ 2987 ರೈತರ ಡಾಟಾ ನಮೂದು ಮಾಡಲಾಗಿದ್ದು, ಒಟ್ಟು 6111 ರೈತರ ಡಾಟಾ ನಮೂದಿಗೆ ಬಾಕಿ ಉಳಿದಿದೆ ಎಂದು ತಿಳಿಸಿದರು.

13,466 ರೈತರಲ್ಲಿ 8,821 ಜನ ಸ್ವಯಂ ದೃಢೀಕರಣ ಪತ್ರ ಸಲ್ಲಿಸಿದ್ದು, 4,645 ಬಾಕಿ ಉಳಿದಿದೆ. ಆದರೆ, ಕೆಲವರು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವುದರಿಂದ ಸ್ವಯಂ ದೃಢೀಕರಣ ಪತ್ರ ಸಲ್ಲಿಸುತ್ತಿಲ್ಲ ಮತ್ತು ಇನ್ನು ಕೆಲವರು ದೃಢೀಕರಣ ಪತ್ರ ಮರಳಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ನಂತರ ಸಭೆಯಲ್ಲಿ ರುಪೆ ಕಾರ್ಡ್‌ ವಿತರಣೆ, 2015ರಿಂದ 2018ರ ವರೆಗೆ ಡಿಸಿಸಿ ಬ್ಯಾಂಕ್‌ನಿಂದ ಸಂಘಕ್ಕೆ ಸಂದಾಯವಾಗಬೇಕಿದ್ದ ಶೇ 2.5 ಬಡ್ಡಿ ಸಹಾಯಧನ, ಸಿಬ್ಬಂದಿಗಳ ಬಾಕಿ ಸಂಬಳ ಪಾವತಿ ಹಾಗೂ ಕೆಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಿರುದ್ಧ ದೂರುಗಳ ಕುರಿತು ಚರ್ಚೆ ನಡೆಯಿತು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎಂ. ಪೂಜಾರಿ, ಸಹಕಾರ ಬ್ಯಾಂಕ್‌ ಅಧಿಕಾರಿಗಳಾದ ಬಸವರಾಜ, ಮಧ್ವರಾಜ್‌, ಮಲ್ಲಿಕಾರ್ಜುನರೆಡ್ಡಿ ಹಾಗೂ ಅನಿಲಕುಮಾರ, ಸಿದ್ದಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next