Advertisement

ರಾಜ್ಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

04:48 PM May 23, 2019 | Team Udayavani |

ಹುಕ್ಕೇರಿ: ತಾಲೂಕಿನಲ್ಲಿ ಹರಿದ ಹಿರಣ್ಯಕೇಶಿ ನದಿಗೆ ಹಿಡಕಲ್ ಜಲಾಶಯದಿಂದ ನೀರು ಹರಿಸುವಂತೆ ಒತ್ತಾಯಿಸಿ ರೈತರು ಬಡಕುಂದ್ರಿ ಕ್ರಾಸ್‌ ಬಳಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗೆ 9ಕ್ಕೆ ಬಡಕುಂದ್ರಿ ಕ್ರಾಸ್‌ ಬಳಿ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ರೈತರು ಜಮಾಯಿಸಿ ಕೂಡಲೇ ತಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಹುಕ್ಕೇರಿ ತಾಲೂಕಿನಲ್ಲಿಯೇ ಇರುವ ಹಿಡಕಲ್ ಜಲಾಶಯದಿಂದ ದೂರದವರೆಗೂ ನೀರು ಹರಿಬಿಡಲಾಗುತ್ತಿದೆ. ಅಲ್ಲದೇ ಕಳೆದೆರಡು ದಿನಗಳ ಹಿಂದೆಯೇ ಕೃಷ್ಣಾ ನದಿಗೂ ಈ ಜಲಾಶಯದಿಂದ 1 ಟಿಎಂಸಿ ನೀರು ಬಿಡಲಾಗಿದೆ. ಆದರೆ, ಪಕ್ಕದಲ್ಲಿಯೇ ಸುಮಾರು 5 ಕಿ.ಮೀ ಅಂತರದ ಹಿರಣ್ಯಕೇಶಿ ನದಿ ಬತ್ತಿ ಐದಾರು ತಿಂಗಳು ಕಳೆದರೂ ನೀರು ಬಿಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಗೆ ಎರಡು ದಿನಗಳಲ್ಲಿ ನೀರು ಹರಿಸುವಂತಾಗಬೇಕು. ನದಿ ಪಾತ್ರದ ಬಡಕುಂದ್ರಿ, ಯರನಾಳ, ಕೋಚರಿ, ಹೆಬ್ಟಾಳ ಸೇರಿದಂತೆ 6 ಬ್ಯಾರೇಜ್‌ಗಳಲ್ಲಿ ನೀರು ತುಂಬಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿಳಂಬವಾದಲ್ಲಿ ಶನಿವಾರ ಹೆಬ್ಟಾಳ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುವುದಾಗಿ ಎಚ್ಚರಿಸಿದರು.

ನೀರು-ಮೇವಿನ ಕೊರತೆ:

Advertisement

ಹಿರಣ್ಯಕೇಶಿ ನದಿ ಬತ್ತಿ ಸುಮಾರು ಐದಾರು ತಿಂಗಳು ಕಳೆದಿದ್ದು, ನದಿ ಪಾತ್ರದ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿವೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಕುಡಿಯುವ ನೀರು ಶೇಖರಿಸಲು ಜನ ಇಡೀ ದಿನ ಕಳೆಯಬೇಕಾಗಿದೆ. ಬೆಳೆದ ಬೆಳೆ ಒಣಗುತ್ತಿವೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಹಿರಣ್ಯಕೇಶಿ ನದಿ ಬತ್ತಿದರೂ ಈ ಭಾಗದ ಜನಪ್ರತಿನಿಧಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳೂ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸಮಸ್ಯೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಪ್ರತಿಭಟನಾನಿರತ ರೈತರು ಆಪಾದಿಸಿದರು.

ಹಿರಣ್ಯಕೇಶಿ ನದಿಗೆ ಪ್ರತಿ ವರ್ಷ ಬೇಸಿಗೆಯ 4 ತಿಂಗಳು ಕಾಲ ನೀರು ಹರಿಸಲು ವಿಶೇಷ ಅಧಿಸೂಚನೆ ಹೊರಡಿಸಬೇಕು. ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಚಿತ್ರಿ ಡ್ಯಾಮ್‌ನಿಂದ ನೀರು ಬಿಡುವಂತಾಗಬೇಕು. ಈ ಭಾಗದ ಕಾಲುವೆ ನವೀಕರಿಸಿ ಕಾಲುವೆಗಳ ಕೊನೆ ಪ್ರದೇಶಗಳಿಗೂ ನೀರು ಮುಟ್ಟುವಂತಾಗಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ರೈತರು ಜಗ್ಗಲಿಲ್ಲ. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೀರಾವರಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಫೋನ್‌ ಮೂಲಕ ಸಂಪರ್ಕಿಸಿದ್ದಾರೆನ್ನುವ ಸುದ್ದಿ ತಿಳಿದ ರೈತರು ಪ್ರತಿಭಟನೆ ಹಿಂಪಡೆದರು.

ಪಪ್ಪುಗೌಡ ಪಾಟೀಲ, ಈರಣ್ಣಾ ಕಡಲಗಿ, ಸುರೇಶ ಕೊಟಬಾಗಿ, ಕಾಡಪ್ಪಾ ಮಗದುಮ್‌, ಶಿವಲಿಂಗ ವಂಟಮೂರಿ, ರವಿ ಪಾಟೀಲ, ಶಾಂತಿನಾಥ ಮಗದುಮ್‌, ಆನಂದ ಲಕ್ಕುಂಡಿ, ಬಸಗೌಡ ಪಾಟೀಲ, ಬಸವರಾಜ ಗುಂಡಕಲ್ಲಿ, ಚಂದು ಗಂಡ್ರೋಳಿ, ಭೀಮಗೌಡ ಪಾಟೀಲ, ಅಡಿವೆಪ್ಪಾ ಚೌಗಲಾ, ಅಶೋಕ ಪಾಟೀಲ, ಗಂಗಾಧರ ದೇಸಾಯಿ, ಚಂದು ಗಂಗಣ್ಣವರ, ರಾಮಚಂದ್ರ ಜೋಶಿ, ಸುಭಾಶ ನಾಯಿಕ, ಪ್ರವೀಣ ದೇಸಾಯಿ ಇತರರಿದ್ದರು.

ಹೆಬ್ಟಾಳ, ಚಿಕ್ಕಾಲಗುಡ್ಡ, ಕೋಚರಿ, ಅರ್ಜುನವಾಡ, ಕುರಣಿ, ಕುರಣಿವಾಡಿ, ಹಂಚಿನಾಳ, ಬದಕುಂದ್ರಿ, ಯರಗಟ್ಟಿ, ಯರನಾಳ, ಹೊಸೂರ, ಗೌಡವಾಡ, ಬಸ್ತವಾಡ, ಮದಮಕ್ಕನಾಳ, ಬೆಣಿವಾಡ ಸೇರಿದಂತೆ ಇತರೆ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next