ಮದ್ದೂರು: ದಿನ ಬಳಕೆ ವಸ್ತು ಹಾಗೂ ರಸಗೊಬ್ಬರದ ಬೆಲೆ ಏರಿಕೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಶಿವಪುರದ ಕೊಪ್ಪ ವೃತ್ತದ ಬಳಿ ಜಮಾವಣೆಗೊಂಡ ನೂರಾರು ಸಂಖ್ಯೆಯ ಸಂಘಟನೆ ಕಾರ್ಯಕರ್ತರು, ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ, ಕೂಡಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಿ ಸಾಮಾನ್ಯ ವರ್ಗದವರ ಹಿತ ಕಾಪಾಡಬೇಕೆಂದು ಆಗ್ರಹಿಸಿದರು. ಸಾಲುಗಟ್ಟಿ ನಿಂತ ವಾಹನಗಳು: ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮೈಸೂರು, ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಹಿನ್ನೆಲೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತಲ್ಲದೇ ರಸ್ತೆಯುದ್ದಕ್ಕೂ ವಾಹನ ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂದಿತು.
ಕಷ್ಟ ಸಾಧ್ಯ: ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಹಾಗೂ ರಸಗೊಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕೂಲಿ ಕಾರ್ಮಿಕರು, ಕೆಳ ವರ್ಗದ ಜನ ಜೀವನ ನಡೆಸುವುದೇ ಕಷ್ಟ ಸಾಧ್ಯವಾಗಿದೆ ಎಂದು ಆರೋಪಿಸಿದರು.
ಜನ ವಿರೋಧಿ ನೀತಿ: ಕಳೆದ ಐದು ವರ್ಷಗಳಿಂದಲೂ ಕಬ್ಬಿಗೆ ದರ ನಿಗದಿ ಮಾಡದೆ ರೈತರನ್ನು ಸಂಕಷ್ಟಕ್ಕೆ ದೂಡಿದ್ದು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೂ ಕಬ್ಬಿನ ಬಾಕಿ ಹಣ ಪಾವತಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗಿದೆ. ಜತೆಗೆ ಆಡಳಿತ ನಡೆಸುವ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತದೆ ಎಂದು ದೂರಿದರು.
ಪೊಲೀಸರ ಮಧ್ಯ ಪ್ರವೇಶದಿಂದ ಪ್ರತಿಭಟನೆ ಹಿಂಪಡೆದ ಪ್ರತಿಭಟನಾಕಾರರು, ವಾರದೊಳಗಾಗಿ ಸರ್ಕಾರ ಅಗತ್ಯ ಕ್ರಮವಹಿಸದಿದ್ದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ಸಂಘಟನೆ ಪದಾಧಿಕಾರಿಗಳಾದ ಲಿಂಗಪ್ಪಾಜಿ, ಜಿ.ಎ.ಶಂಕರ್, ವರದರಾಜು, ಗೊಲ್ಲರ ದೊಡ್ಡಿ ಅಶೋಕ್, ರವಿಕುಮಾರ್, ಪುಟ್ಟಸ್ವಾಮಿ, ಕುಮಾರ್, ದಯಾನಂದ್, ವೆಂಕಟೇಶ್, ರವಿ, ಈರಪ್ಪ, ಸೋಮು, ನಾತಪ್ಪ ನೇತೃತ್ವ ವಹಿಸಿದ್ದರು.