Advertisement

ಅಧಿಕಾರಿಗಳ ಭ್ರಷ್ಟಾಚಾರಕ್ಕೆ  ಕಡಿವಾಣ ಹಾಕಲು ಆಗ್ರಹ

03:33 PM Apr 12, 2022 | Team Udayavani |

ಬಂಗಾರಪೇಟೆ: ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಕಚೇರಿಯಲ್ಲಿ ಎಲ್‌ ಎನ್‌ಡಿ ಭಾಗ, ಕಂದಾಯ ಭಾಗ, ಭೂ ದಾಖಲೆಗಳ ಭಾಗ, ಆರ್‌ಆರ್‌ಟಿ ವಿಭಾಗಗಳಲ್ಲಿ ಲಂಚವಿಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್‌. ರಾಮೇಗೌಡ ಆರೋಪಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ತಾಲೂಕಿನ ರೈತರು ನಮೂನೆ-53 ಅರ್ಜಿ ಸಲ್ಲಿಸಿರುವ ರೈತರಿಗೆ ಕೂಡಲೇ ಸಾಗುವಳಿ ಚೀಟಿ ವಿತರಿಸಬೇಕು. ಈಗಾಗಲೇ ಸಾಗುವಳಿ ಚೀಟಿ ವಿತರಣೆಯಾಗಿರುವ ರೈತರ ಹೆಸರುಗಳನ್ನು ಪಹಣಿಯಲ್ಲಿ ನಮೂದಿಸಬೇಕು. ಈ ಕಚೇರಿಯಲ್ಲಿ ಪಹಣಿಗಳಲ್ಲಿ ರೈತರ ಹೆಸರುಗಳನ್ನು ನಮೂದು ಮಾಡಬೇಕಾದರೆ ಸುಮಾರು 1 ಎಕರೆಗೆ ಲಕ್ಷಾಂತರ ರೂ.ಗಳ ಲಂಚ ಕೊಡಬೇಕು. ಇಲ್ಲವಾದರೆ ಇಲ್ಲ ಸಲ್ಲದ ತಪ್ಪುಗಳನ್ನು ತೋರಿಸಿ ಕೆಲಸ ಮಾಡದೇ ರೈತ ರನ್ನು ಅಲೆದಾಡಿಸುತ್ತಿರುತ್ತಾರೆ ಎಂದು ದೂರಿದರು.

ಭೂ ದಾಖಲೆಗಳ ಭಾಗದಲ್ಲಿ ಬಹಳಷ್ಟು ಲೋಪದೋಷಗಳಿದ್ದು, ಇಲ್ಲಿ ಕೆಲಸ ನಿರ್ವಹಿಸು ವವರು ಒಬ್ಬರೇ ಆಗಿದ್ದು, ಬೇರೆ ಬೇರೆ ಇಲಾಖೆ ಗಳಿಗೆ ದಾಖಲೆಗಳ ಸ್ಪಷ್ಟೀಕರಣಕ್ಕಾಗಿ ಹೋದರೆ ಅಂತಹ ಸಮಯದಲ್ಲಿ ಬೇರೆ ಯಾರು ಕಚೇರಿ ಯಲ್ಲಿ ಇರುವುದಿಲ್ಲ. ಈಗಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ರೈತರು ಕಚೇರಿ ಬಳಿಯಲ್ಲಿಯೇ ಕಾದು ಕಾದು ಮನೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್‌ ಎಂ.ದಯಾನಂದ್‌ ಹಾಗೂ ಭೂ ದಾಖಲೆಗಳ ಅಧಿಕಾರಿಗಳಿಗೆ ಮನವಿಯನ್ನು ನೀಡಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ವೀರಭದ್ರಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ್‌, ವೀರೇಂದ್ರ ಪಾಟೀಲ್‌, ಕೋಲಾರ ಮಂಜು, ರವಿ, ಶ್ರೀನಿವಾಸ್‌, ಮುರಳಿ, ಚಂದ್ರು, ಆಟೋ ಶ್ರೀನಿವಾಸ್‌, ಜಗದೀಶ್‌, ಮುನಿವೆಂಕಟಪ್ಪ, ವೆಂಕಟಸ್ವಾಮಿ, ಪರವನಹಳ್ಳಿ ಬಾಲಕೃಷ್ಣಾರೆಡ್ಡಿ, ನಾರಾಯಣಸ್ವಾಮಿ, ಮಾಗೇರಿ ರಮೇಶ್‌, ಅಂಗಡಿ ಮಂಜುನಾಥ್‌ ಇತರರಿದ್ದರು.

ಲಂಚವಿಲ್ಲದೆ ಕೆಲಸ ಸಾಗದು : ಮುಟೇಷನ್‌ ಭಾಗದಲ್ಲಿ ಗೋಪಾಲ್‌ ಎಂಬು ವವರು ಕಚೇರಿಯಲ್ಲಿಯೇ ಇರುವುದಿಲ್ಲ. ಇವರನ್ನು ಸಂಪರ್ಕಿಸಬೇಕಾದರೆ 2-3 ದಿನ ಕಾಯಬೇಕು. ಸರ್ವೆ ಭಾಗದಲ್ಲಿ, ಸರ್ವೆಯರ್ ಗೆ ಲಂಚ ಕೊಡಬೇಕು, ಇಲ್ಲವಾದರೆ ಸ್ಥಳಕ್ಕೆ ಬರುವುದಿಲ್ಲ. ಸ್ಥಳಕ್ಕೆ ಸರ್ವೆ ಮಾಡಿದ ಮೇಲೆ ಮುಂದಿನ ಹಂತದ ಕೆಲಸಕ್ಕೆ ಮತ್ತೆ ಲಂಚ ಕೊಡಬೇಕು. ಮರಗಲ್‌, ಐತಾಂಡಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ಅಮರೇಶ್‌ ಅವರು ರೈತರ, ಬಡವರ ಬಳಿ ಸಾವಿರಾರು ರೂ.ಗಳ ಲಂಚದ ಬೇಡಿಕೆ ಇಟ್ಟು, ದಾಖಲೆಗಳನ್ನು ತಿದ್ದಿ, ಇವರ ಮೇಲೆ ಭ್ರಷ್ಟಾಚಾರದ ವಿರುದ್ದ ತನಿಖೆ ಕೈಗೊಂಡು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next