ಹಾವೇರಿ: ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಅತಿವೃಷ್ಠಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಕಾಗಿನೆಲೆ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನೂರಾರು ರೈತರು, ಪಿ.ಬಿ. ರಸ್ತೆಯ ಮೂಲಕ ಪಾದಯಾತ್ರೆಯಲ್ಲಿ ಬಂದು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆ ವಾಹನ ಸಂಚಾರಕ್ಕೆ ತಡೆವೊಡ್ಡಿದರು. ಬಳಿಕ ಪಾದಯಾತ್ರೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರಾಜ್ಯ ಸರ್ಕಾರದ ಸಾಲಮನ್ನಾ ಘೋಷಣೆಯಿಂದ ರೈತರಿಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ನಾಲ್ಕು ವರ್ಷಗಳ ಬರಗಾಲದಿಂದಾಗಿ ರೈತರು ಸಮಸ್ಯೆ ಎದುರಿಸುತ್ತಿರುವುದರಿಂದ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈಗ ರಚನೆಯಾಗಿರುವ ಹೊಸ ಸರ್ಕಾರ ಕೂಡಲೇ ಸಾಲ ಮನ್ನಾ ಗೊಂದಲ ಬಗೆಹರಿಸಿ ರೈತರ ಎಲ್ಲ ಸಾಲಮನ್ನಾ ಮಾಡಬೇಕು. ಸಾಲಮನ್ನಾದ ಮಾಹಿತಿ ಯಾವ ಅಧಿಕಾರಿಗಳಿಂದಲೂ ಸಿಗುತ್ತಿಲ್ಲ, ಬ್ಯಾಂಕ್ ವ್ಯವಸ್ಥಾಪಕರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಬಳಿ ಸಿಗುತ್ತಿಲ್ಲ, ನಮ್ಮ ಸಾಲಮನ್ನಾ ಆಗುತ್ತದೆಯೋ ಇಲ್ಲವೋ ಎಂಬುದು ರೈತರಿಗೆ ಗೊತ್ತಾಗುತ್ತಿಲ್ಲ, ಅವರಿಗೆ ಹೊಸ ಸಾಲವೂ ಸಿಗುತ್ತಿಲ್ಲ, ಹೀಗಾಗಿ ರೈತರು ಮಾಹಿತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕೂಡಲೇ ರೈತರಿಗೆ ಸರಿಯಾದ ಮಾಹಿತಿ ನೀಡಿ ಗೊಂದಲ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಒಂದು ತಿಂಗಳು ತಡವಾಗಿ ಬಿತ್ತನೆಯಾಗಿತ್ತು. ಆದರೆ, ಆಗಸ್ಟ್‌ನಲ್ಲಿ ಆಗಿರುವ ಅತಿವೃಷ್ಠಿಗೆ ರೈತರ ಬೆಳೆ ಪೂರ್ಣ ಹಾಳಾಗಿದೆ. ಬೆಳೆ ಹಾನಿಯಾಗಿರುವ ಪ್ರತಿ ಎಕರೆಗೆ ಕನಿಷ್ಠ 25ಸಾವಿರ ರೂ. ಪರಿಹಾರ ನೀಡಬೇಕು. ಬಾಕಿ ಇರುವ ಬೆಳೆವಿಮೆ ಹಣವನ್ನು ಬಡ್ಡಿ ಸಮೇತ ರೈತರಿಗೆ ಪಾವತಿಸಬೇಕು. ಜಿಲ್ಲೆಯ ರೈತರು ಸತತ ಬರ, ಈ ವರ್ಷ ನೆರೆಯಿಂದ ತತ್ತರಿಸಿದ್ದು ಕೂಡಲೇ ದಬ್ಟಾಳಿಕೆಯ ಸಾಲ ವಸೂಲಾತಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳೆದ ವರ್ಷ ಬರದಿಂದ ತತ್ತರಿಸಿದ ರೈತರಿಗೆ ಇನ್ನೂ ಬೆಳೆನಷ್ಟ ಪರಿಹಾರ ತಲುಪಿಲ್ಲ. ತುಂಗಾ ಮೇಲ್ದಂಡೆ ಕಾಲುವೆಗೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಕೊಡಬೇಕು. ಜಿಲ್ಲೆಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್ ಹಾಗೂ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು. ಗ್ರಾಮೀಣ ಪ್ರದೇಶದ ರಸ್ತೆ ದುರಸ್ತಿ ಮಾಡಬೇಕು. ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಅಡಿವೆಪ್ಪ ಆಲದಕಟ್ಟಿ, ಶಿವಬಸಪ್ಪ ಭೋವಿ, ಎಸ್.ವಿ. ಚಪ್ಪರದಹಳ್ಳಿ, ಮಹಮದಗೌಸ್ ಪಾಟೀಲ, ರುದ್ರನಗೌಡ ಕಾಡನಗೌಡ್ರ, ಗಂಗಣ್ಣ ಎಲಿ, ಮರಿಗೌಡ ಪಾಟೀಲ, ಕರಿಬಸಪ್ಪ ಅಗಸಿಬಾಗಲದ, ಶಂಕರಗೌಡ ಶಿರಗಂಬಿ, ಪ್ರಭುಗೌಡ ಪ್ಯಾಟಿ, ಸುರೇಶ ಚಲವಾದಿ, ದಿಳ್ಳೆಪ್ಪ ಮಣ್ಣೂರು, ಬಸನಗೌಡ ಗಂಗಪ್ಪಳವರ, ಮಲ್ಲೇಶಪ್ಪ ಪರಪ್ಪನವರ, ಕಿರಣಕುಮಾರ ಗಡಿಗೋಳ, ಮಂಜುನಾಥ ಕದಂ ಇತರರರು ಇದ್ದರು.