Advertisement

ಅರೆಬೆತ್ತಲೆಯಾಗಿ ರೈತರ ಭಜನೆ

08:28 PM May 05, 2021 | Team Udayavani |

ರಾಣಿಬೆನ್ನೂರ: ರಸಾಯನಿಕ ಗೊಬ್ಬರ ಗಗನಕ್ಕೇರಿ, ಭತ್ತದ ಬೆಲೆ ಪಾತಾಳಕ್ಕೆ ಕುಸಿದು ರೈತರ ಬದುಕು ಡೋಲಾಯಮಾನವಾಗಿದೆ. ತಕ್ಷಣ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿ, ಮಂಗಳವಾರ ತಾಲೂಕಿನ ಮಾಕನೂರ ಗ್ರಾಮದ ರೈತರು ಭತ್ತದ ರಾಶಿ ಮುಂದೆ ಅರೆ ಬೆತ್ತಲೆಯಾಗಿ ಭಜನೆ ಮಾಡುವ ಮೂಲಕ ಧರಣಿ ನಡೆಸಿದರು.

Advertisement

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ಈರಣ್ಣ ಹಲಗೇರಿ ಮಾತನಾಡಿ, ರೈತರು ದೇಶದ ಬೆನ್ನೆಲಬು ಎಂದು ಪೊಳ್ಳು ಮಾತುಗಳನ್ನಾಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೊಸಳೆ ಕಣ್ಣೀರು ಸುರಿಸುವುದನ್ನು ನೋಡಿ ನೋಡಿ ಸಾಕಾಗಿದೆ. ರಸಾಯಿನಿಕ ಗೊಬ್ಬರ ಗಗನಕ್ಕೇರಿ, ಬತ್ತದ ಬೆಲೆ ಪಾತಾಳಕ್ಕೆ ಕುಸಿದು ರೈತರ ಬದುಕು ಡೋಲಾಯಮಾನವಾಗಿದೆ. ತಕ್ಷಣ ಸರ್ಕಾರ ಬತ್ತಕ್ಕೆ 2500 ರೂ. ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದರು.

ಕೃಷಿ ಚಟುವಟಿಕೆ ನಡೆಸಲು ಕೂಲಿ ಕೆಲಸಗಾರ ಅಭಾವದಿಂದಾಗಿ, ಉಳುಮೆಯಿಂದ ಹಿಡಿದು ಒಕ್ಕಲು ಮಾಡುವವರೆಗೆ ಟ್ರಾÂಕ್ಟರ್‌ ಮತ್ತು ಯಂತ್ರಗಳನ್ನು ಬಳಕೆ ಮಾಡಿಕೊಳ್ಳದೆ ರೈತಾಪಿ ಕೆಲಸಗಳು ನಡೆಯುವಂತಿಲ್ಲ. ನಡೆಸಿದರೆ ರೈತರ ಬದುಕು ಬೆತ್ತಲಾಗುತ್ತದೆ. ಇತ್ತ ಡೀಸೆಲ್‌, ಪೆಟ್ರೋಲ್‌, ಅಡುಗೆ ಅನಿಲ, ರಸಗೊಬ್ಬರ ಬೆಲೆ ಗಗನಕ್ಕೇರಿವೆ. ಕೇಂದ್ರ ಸರ್ಕಾರ ರಸಗೊಬ್ಬರದ ಸಬ್ಸಿಡಿ ಸಂಪೂರ್ಣ ತೆಗೆದು ಹಾಕಿದೆ. ಇದರಿಂದ ಒಂದು ಕ್ವಿಂಟಲ್‌ ಡಿಎಪಿ ಗೊಬ್ಬರಕ್ಕೆ 1,900 ರೂ.ಆಗಿದೆ. ರೈತ ಬೆಳೆದ ಕ್ವಿಂಟಲ್‌ ಭತ್ತದ ಬೆಲೆ 1,700 ರೂ. ಇಳಿಕೆಯಾಗಿದೆ. ಹಾಗಾಗಿ ಭತ್ತ ಬೆಳೆದ ರೈತ ಬೆತ್ತಲಾದ ಪರಿಸ್ಥಿತಿ ನಿಮಾಣವಾಗಿದೆ. ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು. ಇಲ್ಲವಾದಲ್ಲಿ ರೈತ ಕೃಷಿಯಿಂದ ವಿಮುಖನಾಗುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.

ಗ್ರಾಪಂ ಸದಸ್ಯ ಶಿವನಗೌಡ ನಂದಿಗಾವಿ ಮಾತನಾಡಿ, ತಕ್ಷಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಗತಿಯಿಲ್ಲದೆ ರೈತರು ತಮ್ಮ ಕುಟುಂಬದ ಹಸಿವು ನೀಗಿಸಿಕೊಳ್ಳಲು ಬೇಕಾಗುವಷ್ಟು ಜಮೀನಿನಲ್ಲಿ ದವಸ ಧಾನ್ಯಗಳನ್ನು ಬೆಳೆದುಕೊಂಡು ದೇವರ ನಾಮಸ್ಮರಣೆಯಲ್ಲಿ ಭಜನೆ ಮಾಡುವ ಮೂಲಕ ಕಾಲ ಕಳೆಯಬೇಕಾಗುತ್ತದೆ. ಉಳಿದವರು ಮಣ್ಣು ತಿನ್ನುವ ಪರಿಸ್ಥಿತಿ ನಿರ್ಮಾಣವಾದರೆ ಅಚ್ಚರಿ ಪಡಬೇಕಿಲ್ಲ ಎಂದರು.

ರೈತರಾದ ಚಂದ್ರಗೌಡ ಭರಮಗೌಡರ, ಹನುಮಂತಪ್ಪ ಕುಂಬಳೂರ, ಆಂಜನೆಪ್ಪ ಬೆಳವಿಗಿ, ಶರಣಪ್ಪ ಬಾತಿ, ಭೀಮಪ್ಪ ಪೂಜಾರ, ಮಲ್ಲೇಶಿ ಮಡಿವಾಳರ, ಕರಬಸಪ್ಪ ಬಾರ್ಕಿ, ಹುಚ್ಚಪ್ಪ ಬಾರ್ಕಿ, ಚಂದ್ರು ನಂದಿಗಾವಿ, ಬಸನಗೌಡ ನಂದಿಗಾವಿ, ಸಂತೋಷ ಹಲಗೇರಿ, ತಿಪ್ಪಣ್ಣ ಹಲಗೇರಿ, ಶಂಕ್ರಗೌಡ ಭರಮಗೌಡ್ರ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next