Advertisement

ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

09:46 PM Feb 05, 2020 | Team Udayavani |

ಕೊಳ್ಳೇಗಾಲ: ತಾಲೂಕಿನಲ್ಲಿರುವ ಎಲ್ಲಾ ಕೆರೆಗಳಲ್ಲಿ ಹೂಳೆತ್ತಿ, ಕೆರೆಗಳಿಗೆ ನೀರು ತುಂಬಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ಕ್ಷೇತ್ರದ ಶಾಸಕರು ಮತ್ತು ಸಂಸದರು ವಿಫ‌ಲರಾಗಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಪುಟ್ಟರಾಜು ಆರೋಪಿಸಿದರು.

Advertisement

ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ ವೃತ್ತದಲ್ಲಿ ರೈತರು ಮತ್ತು ವಿವಿಧ ಸಂಘಟನೆ ಮುಖಂಡರು, ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೂಡಲೇ ರೈತರಿಗೆ ಮತ್ತು ಗ್ರಾಮಸ್ಥರಿಗೆ ಎದುರಾಗಿರುವ ಸಮಸ್ಯೆಗಳನ್ನು ಈಡೇರಿಸುವಲ್ಲಿ ಜನಪ್ರತಿನಿಧಿಗಳು ವಿಫ‌ಲರಾದರೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ: ಅರಣ್ಯವನ್ನು ನಾಶ ಮಾಡಿ, ಕಾಡುಪ್ರಾಣಿಗಳ ಭೇಟೆ ನಿರಂತರವಾಗಿ ನಡೆಯುತ್ತಿದೆ. ಕೂಡಲೇ ಅರಣ್ಯ ರಕ್ಷಣೆ ಮಾಡಬೇಕು. ಅರಣ್ಯದಲ್ಲಿರುವ ಪ್ರಾಣಿಗಳ ರಕ್ಷಣೆ ಮಾಡಿ, ತಾಲೂಕು ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಮಾಡಬೇಕು. ಗ್ರಾಮಸ್ಥರು ಪಡೆದಿರುವ ಸಾಲಕ್ಕೆ ಶೇ.60ರಷ್ಟು ಮರು ಪಾವತಿಸಲು ಆಗದಿದ್ದ ಮುಖಂಡರಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕ್‌ಗಳು ಮೀನಮೇಷ ಎಸಗುತ್ತಿದೆ. ರೈತರ ಬೆಳವಣಿಗೆಗೆ ಹೊಸ ಸಾಲವನ್ನು ನೀಡಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಖರೀದಿಯ ವೇಳೆ ದಲ್ಲಾಳಿಗಳ ಕಾಟವನ್ನು ತಪ್ಪಿಸಬೇಕು. ಬೆಳೆಗಳನ್ನು ನೇರವಾಗಿ ರೈತ ಮಾರಾಟ ಮಾಡಿ, ಅದರಿಂದ ರೈತನಿಗೆ ನೇರವಾಗಿ ಹಣ ದೊರೆಯುವಂತೆ ಮಾಡಬೇಕು. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ವೇಳೆ ತೂಕದಲ್ಲಿ ಅನ್ಯಾಯ ಮಾಡುತ್ತಿರುವುದರಿಂದ ರೈತರು ಸಾಲಗಾರರಾಗಿ ಉಳಿಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಸರ್ಕಾರ ನ್ಯಾಯ ಕಲ್ಪಿಸಲಿ: ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬನ್ನು ಅವಧಿಗೂ ಮುನ್ನ ಕಟಾವು ಮಾಡುವಂತೆ ಅನುಮತಿ ಕೊಡಬೇಕು. ಎರಡು ವರ್ಷ ಕಳೆದರೂ ಕಬ್ಬು ಕಟಾವು ಮಾಡಲು ಅನುಮತಿ ನೀಡುತ್ತಿಲ್ಲ. ಕೆಲವರಿಗೆ ಅನುಮತಿ ನೀಡಿದ ಬಳಿಕವೂ ಕಬ್ಬು ತೂಕ ಮಾಡುವಾಗ ರೈತರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಿ, ರೈತರಿಗೆ ಉಂಟಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದರು.

Advertisement

ಚೆಸ್ಕಾಂ ಇಲಾಖೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಭಾಗ್ಯ ಜ್ಯೋತಿ ವಿದ್ಯುತ್‌ ಗ್ರಾಹಕರ ಬಾಕಿ ಹಣಕ್ಕೆ ಒತ್ತಾಯಿಸುತ್ತಿದ್ದು, ಕೂಡಲೇ ಬಾಕಿ ಹಣ ಮನ್ನಾ ಮಾಡಿ, ಉಚಿತ ವಿದ್ಯುತ್‌ ನೀಡುವ ಮೂಲಕ ಗ್ರಾಮಸ್ಥರಿಗೆ ವಿದ್ಯುತ್‌ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಾರಿಗೆ ದರದಲ್ಲಿ ತಾರತಮ್ಯ: ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಉಬೇದುಲ್ಲಾ ಮಾತನಾಡಿ, ಸಾರಿಗೆ ದರದಲ್ಲಿ ತಾರತಮ್ಯವಿದೆ. ಸರ್ಕಾರ ಕೂಡಲೇ ಇರುವ ತಾರತಮ್ಯವನ್ನು ಹೋಗಲಾಡಿಸಿ, ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು. ತಾಲೂಕಿನ ಶಿವನಸಮುದ್ರದ ಸಮೂಹ ದೇವಾಲಯ, ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳಿದ್ದು, ಇದೊಂದು ಪ್ರವಾಸಿ ತಾಣವಾಗಿದೆ. ಪ್ರವಾಸಿಗರಿಗೆ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ ಮತ್ತು ಪ್ರವಾಸಿ ಸ್ಥಳಗಳಲ್ಲಿ ಶೌಚಾಲಯ, ಶುದ್ಧ ನೀರಿನ ಘಟಕ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್‌ ಕೆ.ಕುನಾಲ್‌ ಅವರು ಆಗಮಿಸಿ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಕೂಡಲೇ ಸಮಸ್ಯೆಗಳನ್ನು ಈಡೇರಿಸಿಕೊಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು. ಈ ಸಂದರ್ಭದಲ್ಲಿ ಡಿಎಸ್‌ಎಸ್‌ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಮುಖಂಡರಾದ ರಾಜೇಂದ್ರ, ಬೆಂಕಿಮಹದೇವು, ಜಿಪಂ ಮಾಜಿ ಉಪಾಧ್ಯಕ್ಷ ಸೋಮಣ್ಣ, ಪುಟ್ಟಮ್ಮ, ಸಿದ್ದೇಗೌಡ, ನಾಗಣ್ಣ, ಜೇಮ್ಸ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ಅಶೋಕ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

ಗ್ರಾಮೀಣ ಜನರ ಆಸ್ತಿ ರಕ್ಷಣೆ ಮಾಡಿ: ಅರಣ್ಯ ಭೂಮಿಯನ್ನು ಹೊರಗಿನಿಂದ ಬಂದ ಶ್ರೀಮಂತ ಕುಟುಂಬದವರು ಅಕ್ರಮ ಒತ್ತುವರಿ ಮಾಡಿಕೊಂಡು ಉಗ್ರರ ತಾಣವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ತಾಲೂಕು ಆಡಳಿತ ಅಂತಹವರ ಮೇಲೆ ಕಣ್ಣಿಟ್ಟು, ಅಕ್ರಮ ಒತ್ತುವರಿಗೆ ಅವಕಾಶ ಕಲ್ಪಿಸಬಾರದು. ಗ್ರಾಮಸ್ಥರ ಭೂಮಿಗಳಿಗೆ ಇ-ಸ್ವತ್ತು ಮಾಡಲು ಉಂಟಾಗಿರುವ ನ್ಯೂನ್ಯತೆಗಳನ್ನು ಸರಿಪಡಿಸಿ, ಗ್ರಾಮೀಣ ಜನರ ಆಸ್ತಿ ರಕ್ಷಣೆ ಮಾಡಿಕೊಡಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಪುಟ್ಟರಾಜು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next