Advertisement

ಕಿವುಡು ಸರ್ಕಾರಗಳೆದುರು ಮೂಕ ವೇದನೆ

10:14 AM Jul 16, 2019 | Team Udayavani |

ನರಗುಂದ: ಕುಡಿಯುವ ನೀರಿಗಾಗಿ ನಡೆಯುತ್ತಿರುವ ಮಹದಾಯಿ ಮತ್ತು ಕಳಸಾ-ಬಂಡೂರಿ ಚಳವಳಿ ನಾಲ್ಕು ವರ್ಷ ಪೂರೈಸಿದೆ. ನ್ಯಾಯಾಧೀಕರಣ ಹಂಚಿಕೆ ಮಾಡಿದರೂ ಮಲಪ್ರಭೆಯ ಒಡಲು ತುಂಬದ ಮಹದಾಯಿ. ಕಿವುಡು ಸರ್ಕಾರಗಳೆದುರು ಮೂಕ ವೇದನೆಯೊಂದಿಗೆ ಮಲಪ್ರಭೆ ಮಕ್ಕಳ ಕೂಗು 5ನೇ ವರ್ಷಕ್ಕೆ ದಾಪುಗಾಲು ಇಡುತ್ತಿದೆ.

Advertisement

ಐದು ದಶಕಗಳ ಬೇಡಿಕೆಯ ಮಹದಾಯಿ ಮಲಪ್ರಭೆ ಜೋಡಣೆಗೆ 2015 ಜು.16ರಂದು ವಿವಿಧ ಸಂಘಟನೆಗಳೊಂದಿಗೆ ರೈತ ಸೇನಾ-ಕರ್ನಾಟಕ ಪಟ್ಟಣದ ಹೆದ್ದಾರಿ ಬದಿಗಿರುವ ಹುತಾತ್ಮ ರೈತ ದಿ.ಈರಪ್ಪ ಕಡ್ಲಿಕೊಪ್ಪರ ವೀರಗಲ್ಲಿನ ಎದುರು ವೇದಿಕೆ ನಿರ್ಮಿಸಿ ನಿರಂತರ ಚಳವಳಿ ಪ್ರಾರಂಭಿಸಿತು.

ಮಹದಾಯಿ ನದಿಯಲ್ಲಿ ರಾಜ್ಯದ ಪಾಲು, ಕಳಸಾ-ಬಂಡೂರಿ ನಾಲೆಗಳ 7.56 ಟಿಎಂಸಿ ಅಡಿ ನೀರಿನ ಬೇಡಿಕೆಯೊಂದಿಗೆ ಬೆರಳೆಣಿಕೆ ರೈತರಿಂದ ಚಾಲನೆ ಪಡೆದ ಈ ಹೋರಾಟದ ಮಹತ್ವ, ಉದ್ದೇಶ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಜಾಗೃತಿ ಮೂಡಿಸಿತು. ದಿನದಿಂದ ದಿನಕ್ಕೆ ಕಾವು ಪಡೆದು ದಿನ ಕಳೆದಂತೆ ಮಣ್ಣಿನ ಮಕ್ಕಳು ಸಮರೋಪಾದಿಯಲ್ಲಿ ಸಾಗಿಬಂದು ಹೋರಾಟದ ಸ್ವರೂಪವನ್ನೇ ಬದಲಿಸಿದ್ದು ದಾಖಲಾರ್ಹ ಚಳವಳಿ ಎನಿಸಿಕೊಂಡಿತು.

ಜನಾಂದೋಲನ ಸ್ವರೂಪ: ಚಳವಳಿ ಗಂಭೀರವಾದಂತೆ ರೈತರ ಕೂಗಿಗೆ ಎಚ್ಚೆತ್ತ ಕ್ಷೇತ್ರದ ಹಾಲಿ ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್‌.ಯಾವಗಲ್ಲ ಜಂಟಿಯಾಗಿ ವೇದಿಕೆಯೇರಿ ರೈತ ಸಮುದಾಯಕ್ಕೆ ನೈತಿಕ ಬೆಂಬಲ ನೀಡಿದ್ದರಿಂದ ಚಳವಳಿ ಜನಾಂದೋಲನ ಸ್ವರೂಪ ಪಡೆಯಿತು.

Advertisement

ಚಳವಳಿ ಬಿರುಗಾಳಿ: ಹೋರಾಟ ಕಾವು ಪಡೆಯುತ್ತಿದ್ದಂತೆ ಅತ್ತ ನವಲಗುಂದ, ರಾಮದುರ್ಗ, ಸವದತ್ತಿ, ಅಣ್ಣಿಗೇರಿ, ಬೈಲಹೊಂಗಲ, ಹುಬ್ಬಳ್ಳಿ, ಧಾರವಾಡಗಳಲ್ಲೂ ವೇದಿಕೆ ಹುಟ್ಟಿಕೊಂಡವು. ರಾಜ್ಯ, ಕೇಂದ್ರ ಸರ್ಕಾರಗಳಿಗೆ ಬಿಸಿ ತುಪ್ಪವಾದ ಹೋರಾಟ ವೇದಿಕೆಗಳು ಕೆಲವೆಡೆ ಸಂಪನ್ನವಾದರೂ ಬಂಡಾಯ ನಾಡು ಖ್ಯಾತಿಯ ನರಗುಂದ ವೇದಿಕೆ ಮಾತ್ರ 4 ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ ಹೋರಾಟದ ಹಾದಿ ಸ್ಮರಣೀಯ.

‘ಪಕ್ಷಾತೀತ ಹೋರಾಟ’ ಎಂಬ ಹಣೆಪಟ್ಟಿ ಕಟ್ಟಿಕೊಂಡು ನಾಡಿನ ಎಲ್ಲ ರಾಜಕೀಯ ಪಕ್ಷಗಳು, ಕನ್ನಡಪರ, ರೈತಪರ ನೂರಾರು ಸಂಘಟನೆಗಳು, ನಾಡಿನಾದ್ಯಂತ ಮಠಾಧಿಧೀ ಶರ ಬೆಂಬಲ ಪಡೆದು ಏಳು, ಬೀಳುಗಳ ಮಧ್ಯೆ ಚಳವಳಿ ನರಗುಂದ ಇತಿಹಾಸದಲ್ಲೇ ಕಂಡರಿಯದ ರೀತಿಯಲ್ಲಿ ಹೆಜ್ಜೆಯಿಟ್ಟಿದ್ದು ಗಮನಾರ್ಹ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳ ರೈತ ವಿರೋಧಿ ನೀತಿಗೆ ಈ ಹೋರಾಟ ಇಂದಿಗೂ ಸಾಕ್ಷಿಯಾಗಿ ನಿಂತಿದೆ.

ನೀರಿನ ಪ್ರತಿಪಾದನೆ: ಹೋರಾಟ ಬಲಗೊಳ್ಳುತ್ತಿದ್ದಂತೆ ಮಲಪ್ರಭೆ ಮಕ್ಕಳ ಕೂಗು ದೇಶವ್ಯಾಪಿ ಪಸರಿಸಿ ರಾಜಕೀಯ ಪಕ್ಷಗಳಿಗೆ ಮುಳುವಾಗತೊಡಗಿತು. ಹೋರಾಟ ಹತ್ತಿಕ್ಕುವ ಷಡ್ಯಂತ್ರಗಳನ್ನು ಮೆಟ್ಟಿನಿಂತು ಜೀವಜಲಕ್ಕಾಗಿ ನಡೆದ ಚಳವಳಿ ದೇಶದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದೆ.

ವರ್ಷದುದ್ದಕ್ಕೂ ನಿರಂತರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್‌, ಧರಣಿ, ಪ್ರತಿಭಟನೆ ಸೇರಿ ಒಂದು ಹೋರಾಟದಲ್ಲಿ ಏನೆಲ್ಲಾ ಮಾಡಬಹುದು ಎಂಬುದನ್ನು ಮೀರಿ ಎಲ್ಲ ಹಂತದ ಹೋರಾಟಕ್ಕೆ ಸಾಕ್ಷಿಯಾದ ಮಹದಾಯಿ ಚಳವಳಿಯನ್ನು ಬೆಂಬಲಿಸಿ ಹಿಂದೆ ಸರಿದ ರಾಜಕೀಯ ನಾಯಕರ ಭವಿಷ್ಯವನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ.

ಸನ್ಯಾಸ ದೀಕ್ಷೆ: ಹೋರಾಟ ಹುಟ್ಟುಹಾಕಿದ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಯೋಜನೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟು 2016 ಅ.17ರಂದು ಪೂಜ್ಯರ ಸಮ್ಮುಖದಲ್ಲಿ ಹೋರಾಟ-ಸನ್ಯಾಸ ದೀಕ್ಷೆ ಸ್ವೀಕರಿಸಿದ್ದು ಮಹತ್ವದ ಘಟ್ಟಗಳಲ್ಲಿ ಒಂದು. ಸುದೀರ್ಘ‌ 4 ವರ್ಷ ಕಳೆದರೂ ಹೋರಾಟಕ್ಕೆ ಜಯ ತಂದುಕೊಡುವಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಮಲಪ್ರಭಾ ನಾಡಿನ ಮಕ್ಕಳಲ್ಲಿ ಆಕ್ರೋಶದ ಅಲೆ ಹುಟ್ಟಿಸಿದೆ.

ದಯಾಮರಣಕ್ಕೆ 223 ರೈತರ ಅರ್ಜಿ:

ಜೀವ ಜಲಕ್ಕಾಗಿ 2018,ಏ.25ರಂದು ದೆಹಲಿ ಚಲೋದಲ್ಲಿ 223 ರೈತ ಹೋರಾಟಗಾರರು ನೀರು ಕೊಡಿ ಇಲ್ಲಾ ದಯಾಮರಣಕ್ಕೆ ಅನುಮತಿ ಕೊಡಿ ಎಂದು ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದು, ಸ್ಪಂದನೆ ಸಿಗದಿದ್ದಾಗ ಸರ್ವೋಚ್ಛ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಿದ್ದು ಗಂಭೀರ ಹೆಜ್ಜೆಗಳಾಗಿವೆ
ಹಂಚಿಕೆಯಾದರೂ ಸಿಗದ ನೀರು!:

ಮಹದಾಯಿ ನ್ಯಾಯಾಧೀಕರಣ 3 ರಾಜ್ಯಗಳ ಮುಖ್ಯಮಂತ್ರಿಗಳು ಸೌಹಾರ್ದತೆಯಿಂದ ವಿವಾದ ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದರೂ ಉಭಯ ಸರ್ಕಾರಗಳು ಅದನ್ನು ಪಾಲಿಸದೇ ರೈತರ ಕೆಂಗಣ್ಣಿಗೆ ಗುರಿಯಾದವು. ಕೊನೆಗೆ 2018,ಆಗಷ್ಟನಲ್ಲಿ ನ್ಯಾಯಾಧೀಕರಣವೇ ನೀರಿನ ಹಂಚಿಕೆ ಮಾಡಿದರೂ ಮಹದಾಯಿ ಮಾತ್ರ ಇಂದಿಗೂ ಮಲಪ್ರಭೆ ಸೇರಿಲ್ಲವೆಂಬ ಕೂಗು ಹೋರಾಟದ ಹಾದಿಯನ್ನು ಬಲಿಷ್ಟಗೊಳಿಸುತ್ತಿದೆ.
ಹಿಂದೆಂದೂ ಕಂಡರಿಯದ ಚಳವಳಿ:

ಎತ್ತು, ಚಕ್ಕಡಿ ರೈತರ ಸಾಲುಸಾಲು ಮೆರವಣಿಗೆ, ಉಪವಾಸ ಸತ್ಯಾಗ್ರಹ, ರಕ್ತಪತ್ರ ಚಳವಳಿ, ಸರ್ಕಾರಗಳ ಪ್ರತಿಕೃತಿ ದಹನ, ಜನಪ್ರತಿನಿಧಿಗಳಿಗೆ ಘೇರಾವ್‌, ಕೂಡಲಸಂಗಮದಿಂದ ಕಣಕುಂಬಿವರೆಗೆ ಪಾದಯಾತ್ರೆ, ವಿದ್ಯಾರ್ಥಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ, ಬೆಂಗಳೂರು ಚಲೋ, ಉದ್ರಿಕ್ತರಿಂದ ಕಚೇರಿಗಳು ಧ್ವಂಸ, ಮಧ್ಯಂತರ ತೀರ್ಪು ಖಂಡಿಸಿ ಉಗ್ರ ಹೆಜ್ಜೆಗಳು, ಬಂಧನ-ಬಿಡುಗಡೆ, ರೈಲ್ವೆ ತಡೆ ಚಳವಳಿ, ಅಸಹಕಾರ ಮತ್ತು ಟ್ವೀಟರ್‌ ಚಳವಳಿ, ದೆಹಲಿ ಚಲೋ ಹೀಗೆ ಎಲ್ಲ ಹಂತದಲ್ಲಿ ಮಹದಾಯಿ ಚಳವಳಿ ವಿಸ್ತರಿಸಿದೆ.
•ಸಿದ್ಧಲಿಂಗಯ್ಯ ಮಣ್ಣೂರಮಠ
Advertisement

Udayavani is now on Telegram. Click here to join our channel and stay updated with the latest news.

Next