Advertisement

ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

12:39 PM Nov 27, 2021 | Team Udayavani |

ಹೊಸಪೇಟೆ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿ ಕಾಯ್ದೆಗಳನ್ನು ಸಾಂವಿಧಾನಾತ್ಮಕವಾಗಿ ವಾಪಾಸ್‌ ಪಡೆಯಬೇಕು ಹಾಗೂ ರಾಜ್ಯ ಸರ್ಕಾರ ಕೂಡ ಈ ಕಾಯ್ದೆಗಳನ್ನು ಮತ್ತು ಜಾನುವಾರು ಹತ್ಯೆ ಕಾಯ್ದೆಯನ್ನು ವಾಪಾಸ್‌ ಪಡೆಯಬೇಕು ಎಂದು ಆಗ್ರಹಿಸಿ ಸಂಯುಕ್ತ ರೈತ ಹೋರಾಟ ಸಮಿತಿ ಕರ್ನಾಟಕದ ವತಿಯಿಂದ ನಗರದ ಟಿಬಿಡ್ಯಾಂನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಚಾರ ತಡೆದು ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೃಷಿ ಕಾಯ್ದೆ, ಭೂಸುಧಾರಣಾ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಾಸ್‌ ಪಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾಯ್ದೆಗಳನ್ನು ವಾಪಾಸ್‌ ಪಡೆಯಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ಸಂಸತ್‌ನ ಅಧಿ ವೇಶನದಲ್ಲಿ ಮಂಡಿಸಿ ಕಾಯ್ದೆಯನ್ನು ಸಂವಿಧಾನಾತ್ಮಕವಾಗಿ ವಾಪಾಸ್‌ ಪಡೆಯಬೇಕು. ರಾಜ್ಯದಲ್ಲಿ ಈ ಕಾಯ್ದೆಗಳನ್ನು ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆ ಮಾಡಲಾಗಿದೆ. ಈ ಕಾಯ್ದೆಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ವಾಪಾಸ್‌ ಪಡೆಯಬೇಕು. ಜಾನುವಾರು ಹತ್ಯೆ ಕಾಯ್ದೆಯನ್ನೂ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರೈತರ ಉತ್ಪನ್ನಗಳಿಗೆ ಸಮರ್ಪಕ ಬೆಲೆ ನಿಗದಿಯಾಗುತ್ತಿಲ್ಲ. ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು. ರೈತರಿಗೆ ವಿಕೋಪದಲ್ಲಿ ಬೆಳೆ ಹಾನಿ ಪರಿಹಾರವನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಸಮರ್ಪಕ ಪರಿಹಾರ ಒದಗಿಸಬೇಕು. ರೈತ ವಿರೋಧಿ ನೀತಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಬಿಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಂಕಷ್ಟಕ್ಕೆ ಕಿವಿಗೊಡಬೇಕು. ಕೃಷಿ ಕಾಯ್ದೆ ವಿರೋಧಿ ಸಿ 700 ರೈತರು ಹುತಾತ್ಮರಾಗಿದ್ದಾರೆ. ಈ ಹುತಾತ್ಮ ರೈತರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಕಾರ್ಪೋರೇಟ್‌ ವಲಯ ಮೆಚ್ಚಿಸುವ ಧೋರಣೆಯನ್ನು ಆಳುವ ಸರ್ಕಾರಗಳು ಕೈಬಿಡಬೇಕು ಎಂದು ಒತ್ತಾಯಿಸಿದರು.

ಹೊಸಪೇಟೆ, ಕಂಪ್ಲಿ, ಮರಿಯಮ್ಮನಹಳ್ಳಿ, ಗಾದಿಗನೂರು, ಕಮಲಾಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದಿದ್ದ ರೈತರು ನಗರದ ಡ್ಯಾಂ ರಸ್ತೆಯ ಸಾಯಿಬಾಬಾ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿ 50ರವರೆಗೂ ಮೆರವಣಿಗೆ ನಡೆಸಿದರು. ಬಳಿಕ ಹೆದ್ದಾರಿ ಗಣೇಶ್‌ ದೇವಸ್ಥಾನದ ಬಳಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಮುಖಡರಾದ ಜೆ. ಕಾರ್ತಿಕ್‌, ಸಣ್ಣಕ್ಕಿ ರುದ್ರಪ್ಪ, ದೇವರಮನಿ ಮಹೇಶ, ಗಂಟೆ ಸೋಮು, ಜಂಬಯ್ಯ ನಾಯಕ, ಆರ್‌. ಭಾಸ್ಕರರೆಡ್ಡಿ, ಸಣ್ಣಮಾರೆಪ್ಪ, ನಾಗರತ್ನಮ್ಮ, ಕೆ.ಎಂ. ಸಂತೋಷ, ಕಾಳಿದಾಸ, ರುದ್ರಪ್ಪ ಇದ್ದರು. ಟ್ರಾಫಿಕ್‌ ಜಾಮ್‌, ಎನ್‌ಇಟಿ ಪರೀಕ್ಷೆ: ಪ್ರತಿಭಟನೆ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಆಸ್ಪತ್ರೆಗೆ ತೆರಳುತ್ತಿದ್ದ ರೋಗಿಗಳಿಗೆ ಪೊಲೀಸರು ನೆರವಾದರು. ಇನ್ನೂ ಎನ್‌ಇಟಿ ಪರೀಕ್ಷೆ ಬರೆಯಲು ಬಳ್ಳಾರಿಗೆ ತೆರಳುತ್ತಿದ್ದ ನಾಲ್ಕಾರು ವಿದ್ಯಾರ್ಥಿಗಳು ಟ್ರಾಫಿಕ್‌ ಜಾಮ್‌ನಿಂದಾಗಿ ಪರೀಕ್ಷೆ ಬರೆಯದೇ ಕೊಪ್ಪಳಕ್ಕೆ ವಾಪಾಸಾದರು.

ಪೊಲೀಸರ-ರೈತರ ವಾಗ್ವಾದ: ರೈತರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆ ಸ್ಥಗಿತಗೊಳಿಸಲು ಪೊಲೀಸರು ಹೇಳುತ್ತಿದ್ದಂತೆಯೇ ಪೊಲೀಸರು ಹಾಗೂ ಪ್ರತಿಭಟನಾನಿರತ ರೈತರ ನಡುವೆ ಮಾತಿನಚಕಮಕಿ ನಡೆಯಿತು. ಬಂಧನ ಮಾಡುತ್ತೇವೆ ಎಂದು ಪೊಲೀಸರು ಆವಾಜ್‌ ಕೂಡ ಹಾಕಿದರು.

Advertisement

ಈ ವೇಳೆ ರೈತ ಮುಖಂಡರು ಹಾಗೂ ಡಿವೈಎಸ್ಪಿ ವಿಶ್ವನಾಥರಾವ್‌ ಕುಲಕರ್ಣಿ ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು. ಬಳಿಕ ಪ್ರತಿಭಟನಾಕಾರರು ಹೋರಾಟ ಮುಗಿಸಿದರು. ಆನಂದ್‌ ಸಿಂಗ್‌ ಭೇಟಿ: ಹೊಸಪೇಟೆಯ ಸಾಯಿಬಾಬಾ ದೇಗುಲದ ಬಳಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರನ್ನು ಕಂಡ ಸಚಿವ ಆನಂದ್‌ ಸಿಂಗ್‌ ಅವರು ಅವರ ಬಳಿ ಆಗಮಿಸಿ ಮಾತನಾಡಿಸಿದರು. ಬಳಿಕ ಅವರು ಹಗರಿಬೊಮ್ಮನಹಳ್ಳಿಗೆ ಎಂಎಲ್ಸಿ ಎಲೆಕ್ಷನ್‌ ಪ್ರಚಾರಕ್ಕೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next