ಗಂಗಾವತಿ: ತಾಲ್ಲೂಕಿನ ಐತಿಹಾಸಿಕ ಕಿಷ್ಕಿಂದಾ ಅಂಜನಾದ್ರಿ ಯ ಸುತ್ತಲೂ ಅಭಿವೃದ್ಧಿ ಹೆಸರಿನಲ್ಲಿ ಭೂಮಿಯನ್ನು ರೈತರಿಂದ ಕಿತ್ತುಕೊಳ್ಳಲು ಸರ್ಕಾರ ಯೋಜಿಸಿದ್ದು ಇದಕ್ಕೆ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅಂಜನಾದ್ರಿಯ ಸುತ್ತಲೂ ಮೂಲಸೌಕರ್ಯ ಕಲ್ಪಿಸಲು ಪಂಪಾಸರೋವರದ ಭೂಮಿ ಮತ್ತು ಸರಕಾರದ ಭೂಮಿ ಸುಮಾರು 30 ಎಕರೆಯಷ್ಟಿದ್ದು ಆದರೂ ಅಧಿಕಾರಿಗಳು ಹೆಚ್ಚಿನ ಭೂಮಿ ವಶಪಡಿಸಿಕೊಳ್ಳಲು ಈಗಾಗಲೇ 64 ಎಕರೆ ಭೂಮಿಯನ್ನು ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳಲು ಪ್ರಸ್ತಾವನೆ ಕಳಿಸಿದ್ದಾರೆ. ಇದು ಅವೈಜ್ಞಾನಿಕವಾಗಿದೆ .ಕೂಡಲೇ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶ ಮಾಡಿ ಅವೈಜ್ಞಾನಿಕವಾಗಿ ಅಂಜನಾದ್ರಿಬೆಟ್ಟಕ್ಕಾಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದನ್ನು ತಪ್ಪಿಸುವಂತೆ ರೈತರು ಶಾಸಕ ಪರಣ್ಣ ಮನವಳ್ಳಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು .
ಜೂ.24 ರಂದು ಬೆಂಗಳೂರಿನಲ್ಲಿ ಅಂಜನಾದ್ರಿ ಅಭಿವೃದ್ಧಿ ಸೇರಿದಂತೆ ಪ್ರತ್ಯೇಕ ಪ್ರಾಧಿಕಾರ ಮತ್ತು ಸ್ಥಳೀಯವಾಗಿ ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಪ್ರತ್ಯೇಕಿಸುವ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಜಿಲ್ಲೆಯ ಶಾಸಕರು ಸಚಿವರು ಮತ್ತು ಸ್ಥಳೀಯರ ಸಭೆ ಕರೆದಿದ್ದು ಈ ಸಭೆಯಲ್ಲಿ ಹೆಚ್ಚುವರಿ ಭೂಮಿ ಸ್ವಾಧೀನ ಮಾಡಿಕೊಳ್ಳುವ ಅಧಿಕಾರಿಗಳ ನಿರ್ಧಾರವನ್ನ ಮುಖ್ಯಮಂತ್ರಿಗಳು ತಡೆಯಬೇಕು. ಪ್ರಮುಖವಾಗಿ ಆನೆಗೊಂದಿ ಭಾಗದ 4 ಗ್ರಾಮ ಪಂಚಾಯತ್ ಗಳ ಗಾಂವಠಾಣಾ ಭೂಮಿಯನ್ನು ಸರ್ವೆ ಮಾಡಿ ನಿಗದಿ ಮಾಡಬೇಕು ಮತ್ತು ಸ್ಥಳೀಯವಾಗಿ ಯುವಕರು ಉದ್ಯೋಗವನ್ನು ಕಂಡುಕೊಳ್ಳಲು ಪ್ರವಾಸೋದ್ಯಮ ಇಲಾಖೆ ಜಿಲ್ಲಾಡಳಿತ ಯೋಜನೆ ರೂಪಿಸಬೇಕು ಇದನ್ನು ಹೊರತಾಗಿ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರ ಕೈಬಿಡುವಂತೆ ರೈತ ಮುಖಂಡ ಸುದರ್ಶನ ವರ್ಮಾ, ರಾಮಕೃಷ್ಣಶೆಟ್ಟಿ, ನಂದ್ಯಾಲ ಚಂದ್ರಶೇಖರರೆಡ್ಡಿ ಬಸಪ್ಪನಾಯಕ, ಕೆ. ವೆಂಕಟೇಶ ಕೆ. ನಿಂಗಪ್ಪ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸರ್ಕಾರ ಅಮೂಲಾಗ್ರವಾಗಿ ಅಭಿವೃದ್ಧಿಪಡಿಸಲು ಭೂಸ್ವಾಧೀನ ಮಾಡಿಕೊಳ್ಳುವ ನಿರ್ಧಾರ ಮಾಡಿದೆ ಆದರೂ ರೈತರ ಹಿತವನ್ನು ಕಾಪಾಡಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ .ಯೋಜನೆಗೆ ಬೇಕಾಗಿರುವ ಭೂಮಿಯನ್ನು ಮಾತ್ರ ವಶಪಡಿಸಿಕೊಂಡು ಉಳಿದ ಭೂಮಿಯನ್ನು ರೈತರಿಗೆ ವಾಪಸ್ ನೀಡಲು ಸರ್ಕಾರ ಯೋಜನೆ ರೂಪಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ ರೈತರ ಹಿತವನ್ನು ಕಡೆಗಣಿಸಿ ಯಾವುದೇ ಯೋಜನೆ ಅನುಷ್ಠಾನ ಮಾಡುವುದಿಲ್ಲ ಎಂದು ರೈತರಿಗೆ ಭರವಸೆ ನೀಡಿದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಸಿದ್ದರಾಮ ಸ್ವಾಮಿ, ಡಿಎಸ್ ಪಿ ರುದ್ರೇಶ್ ಉಜ್ಜನಕೊಪ್ಪ, ತಹಸೀಲ್ದಾರ್ ಯು. ನಾಗರಾಜ ಸೇರಿದಂತೆ ಆನೆಗೊಂದಿ ಭಾಗದ ರೈತರು ಕೂಲಿ ಕಾರ್ಮಿಕರು ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು .