ಮೈಸೂರು: ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ರೈತರು ಘೇರಾವ್ ಹಾಕಿದ ಘಟನೆ ಶನಿವಾರ ಗನ್ ಹೌಸ್ ಬಳಿಯ ಶಂಕರಮಠದ ಬಳಿ ನಡೆದಿದೆ.
ಸಚಿವರು ಆಗಮಿಸುತ್ತಿದ್ದಂತೆ ಅವರ ಕಾರಿಗೆ ಮುತ್ತಿಗೆ ಹಾಕಿದ ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸುವ ವಿಚಾರದಲ್ಲಿ ಸರ್ಕಾರ ನಿರ್ಲಕ್ಷಿಸುತ್ತಿದೆ. ನಿರಂತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ರಸಗೊಬ್ಬರಗಳು ಸಿಗುತ್ತಿಲ್ಲ, ಸರ್ಕಾರ ರೈತವಿರೋಧಿ ಕಾಯ್ದೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ರಾಯಚೂರಿನಲ್ಲಿ ಮುಂದುವರಿದ ವರುಣಾರ್ಭಟ; ಬೆಳೆ ನಾಶ, ಬದುಕು ಅಸ್ತವ್ಯಸ್ತ
ಬಳಿಕ ಕಾರಿನಿಂದ ಕೆಳಗಿಳಿದು ಬಂದ ಸಚಿವರು, ರೈತರ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿದ ಅವರು, ರೈತರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಈಗಾಗಲೇ ರೈತರೊಂದಿಗೆ ಮಾತನಾಡಿದ್ದೇನೆ. ನಮ್ಮ ಸರ್ಕಾರ ರೈತರ ಪರ ಇದೆ. ಮುಂದಿನ ವಾರ ರೈತರೊಂದಿಗೆ ಸಭೆ ಮಾಡಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ರಾಜ್ಯದಲ್ಲಿ ರಸಗೋಬ್ಬರ ಹಾಗೂ ಬಿತ್ತನೆ ಬೀಜದ ಕೊರತೆ ಇಲ್ಲ. ರೈತರ ಬೇಡಿಕೆ ಏನೇ ಇದ್ದರೂ ಪೂರೈಸುವ ಕೆಲಸ ನಮ್ಮದು ಎಂದರು.
ವಿಧಾನಸಭಾ ಅಧಿವೇಶನಕ್ಕೆ ನಾವು ಸಿದ್ದವಾಗಿದ್ದೇವೆ. ವಿರೋಧ ಪಕ್ಷದವರು ಏನು ಸಿದ್ಧತೆ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ನಾವು ಅವರನ್ನು ಎದುರಿಸಲು ನಾವು ಸಿದ್ದವಾಗಿದ್ದೇವೆ. ಸಿದ್ದರಾಮಯ್ಯ ಮೈಸೂರಿನಲ್ಲಿ ವೀರಾವೇಷ ಮಾತುಗಳನ್ನಾಡುತ್ತಾರೆ. ಸದನಲ್ಲೂ ಅದೇ ವೀರಾವೇಶ ತೋರಿಸಲಿ. ಅಷ್ಟೇ ವೀರಾವೇಷದಿಂದ ಅವರನ್ನು ಎದುರಿಸಲು ದೇವರು ನಮಗೆ ಶಕ್ತಿ ನೀಡಿದ್ದಾನೆ ಎಂದು ಸೋಮಶೇಖರ್ ಹೇಳಿದರು.