ಚಿಕ್ಕಮಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಚಳುವಳಿಗೆ ನ.26ರಂದು 1ವರ್ಷ ತುಂಬಿದ್ದು, ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಮೇರೆಗೆ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ನಗರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಶುಕ್ರವಾರ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಆರ್. ದುಗ್ಗಪ್ಪಗೌಡ ನೇತೃತ್ವದಲ್ಲಿ ನಗರದ ಜಿಪಂ ಎದುರು ಜಮಾವಣೆಗೊಂಡ ಕಾರ್ಯಕರ್ತರು ಮತ್ತು ಮುಖಂಡರು ಕಡೂರು ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಕೆಲಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಆರ್. ದುಗ್ಗಪ್ಪಗೌಡ ಮಾತನಾಡಿ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಶಕ್ತಿ ಕಾಯ್ದೆ ತಿದ್ದುಪಡಿ ಈ ಮೂರು ಕಾಯ್ದೆಗಳು ಮೇಲ್ನೋಟಕ್ಕೆ ರೈತರಿಗೆ ಪೂರಕವಾದಂತಹ ಕಾಯ್ದೆಗಳಂತೆ ಕಂಡರೂ ಈ ಕಾಯ್ದೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾಗ ಇವು ರೈತರಿಗೆ ಎಷ್ಟು ಮಾರಕವಾಗಿವೆ ಮತ್ತು ಕಾರ್ಪೋರೇಟ್ ಕಂಪನಿಗಳ ಹಿತ ಕಾಯುತ್ತವೆ ಎಂಬುದರ ಅರಿವಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ದಯಾಕರ, ಕಡೂರು ತಾಲೂಕು ಅಧ್ಯಕ್ಷ ನಿರಂಜನಮೂರ್ತಿ, ಮೂಡಿಗೆರೆ ತಾಲೂಕು ಅಧ್ಯಕ್ಷ ವಸಂತ ಹೆಗ್ಡೆ, ಉದ್ದೇಗೌಡ, ಓಂಕಾರಪ್ಪ, ತುಳಸೇಗೌಡ ಇತರರು ಇದ್ದರು