ಸಾಗರ: ರೈತರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ನಡೆಸುವ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅಕ್ರಮ ಕೂಟ ಎಂದು ಕರೆದಿರುವುದು ಅತ್ಯಂತ ಬೇಸರದ ಸಂಗತಿ. ರೈತ ಹೋರಾಟವನ್ನು ಅಕ್ರಮ ಕೂಟ ಎಂದು ಕರೆದರೆ ರೈತ ಸಂಘವನ್ನೇ ಅಕ್ರಮ ಕೂಟ ಎಂದು ಕರೆದಂತೆ ಆಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಈ ಕ್ರಮವನ್ನು ಖಂಡಿಸಿ ರೈತ ಸಂಘ ಖಂಡನಾ ಸಭೆಯನ್ನು ನಡೆಸಲಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ರೈತ ಸಂಘ ವಿವಿಧ ಬೇಡಿಕೆ ಇರಿಸಿಕೊಂಡು ಹೋರಾಟ ನಡೆಸುತ್ತಾ ಬರುತ್ತಿದೆ. ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮಾ. 12ರಂದು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅಹೋರಾತ್ರಿ ಧರಣಿ ಪ್ರಮುಖ ಉದ್ದೇಶ ಮಾ. 13ರಂದು ನೂತನ ಆಡಳಿತ ಸೌಧ ಉದ್ಘಾಟನೆಗೆ ಬರುವ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ನಮ್ಮ ಬೇಡಿಕೆ ಆಲಿಸುತ್ತಾರೆ ಎನ್ನುವುದಾಗಿತ್ತೇ ವಿನಾ ಗೊಂದಲ ಸೃಷ್ಟಿ ಮಾಡುವುದು ಆಗಿರಲಿಲ್ಲ. ಆದರೆ ಪೊಲೀಸರು. ಮಾ. 13ರ ಬೆಳಿಗ್ಗೆ 5 ಗಂಟೆಗೆ ನಮ್ಮನ್ನೆಲ್ಲ ವಶಕ್ಕೆ ಪಡೆದಿದ್ದಾರೆ. ನಮ್ಮ ಬಂಧನದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ದೂರಿದರು.
ನನ್ನನ್ನು ಕಾರ್ಗಲ್ ಠಾಣೆಯಲ್ಲಿ ಬಂಧನದಲ್ಲಿ ಇರಿಸಲಾಗಿತ್ತು. ಜಿಲ್ಲಾಧಿಕಾರಿಗಳು ಕಾರ್ಗಲ್ ಠಾಣೆಗೆ ಬಂದು ನಮ್ಮ ಸಮಸ್ಯೆ ಕೇಳುವ ಬದಲು ಜೋಗ ಪ್ರವಾಸಿ ಮಂದಿರಕ್ಕೆ ಬರಲು ಹೇಳಿದ್ದಾರೆ. ಅದಕ್ಕೆ ನಾವು ಸಮ್ಮತಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಮ್ಮ ಸಮಸ್ಯೆ ಕೇಳದೆ ಸಾಗರಕ್ಕೆ ವಾಪಾಸ್ ಹೋಗಿದ್ದಾರೆ. ಮಧ್ಯಾಹ್ನ 3ಕ್ಕೆ ನಾವು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪ್ರತಿಭಟನೆ ಮಾಡಿದಾಗ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರೈತ ಸಂಘವನ್ನು ಅಕ್ರಮ ಕೂಟ ಎಂದು ಎಫ್‌ಐಆರ್‌ನಲ್ಲಿ ನಮೂದಿಸಿದ್ದಾರೆ. ಇದನ್ನು ರೈತ ಸಂಘ ಗಂಭೀರವಾಗಿ ಪರಿಗಣಿಸಿದ್ದು, ಖಂಡನಾ ಸಭೆ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಖಂಡನಾ ಸಭೆ ನಡೆಸಲು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ನೀತಿ ಸಂಹಿತೆ ಇದೆ ಎಂದು ಹೇಳುತ್ತಾರೆ. ಆದರೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಶಾಂತಿಯುತವಾಗಿ ಸಭೆ ನಡೆಸಬಹುದು ಎಂದು ಹೇಳುತ್ತಾರೆ. ಚುನಾವಣೆ ಅಧಿಕಾರಿಗಳಿಗೆ, ಸಹಾಯಕ ಚುನಾವಣೆ ಅಧಿಕಾರಿಗಳಿಗೆ ನೀತಿ ಸಂಹಿತೆ ಕುರಿತು ಸರಿಯಾಗಿ ಮಾಹಿತಿ ಇಲ್ಲ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸೇವೆ ಮತ್ತು ರೈತ ಸಂಘವನ್ನು ಅಕ್ರಮ ಕೂಟ ಎಂದು ಕರೆದಿರುವುದರ ವಿರುದ್ಧ ಹೋರಾಟ ಹಮ್ಮಿಕೊಳ್ಳುವ ಚಿಂತನೆ ನಡೆಸಲಾಗಿದೆ. ತಾಲೂಕಿನಲ್ಲಿ ಸುಮಾರು 18 ಸಾವಿರ ಮೆವ್ಯಾ ವಿದ್ಯುತ್ ಬಳಕೆ ಮಾಡಲಾಗುತ್ತಿದ್ದು, ಕೇವಲ ಐದು ಉಪಕೇಂದ್ರಗಳು ಮಾತ್ರ ಕೆಲಸ ಮಾಡುತ್ತಿದೆ. ತ್ಯಾಗರ್ತಿಯಲ್ಲಿ ಉಪ ಕೇಂದ್ರ ಸಿದ್ದವಾಗಿದ್ದರೂ ಅರಣ್ಯ ಇಲಾಖೆ ತಕರಾರಿನಿಂದ ಕಾರ್ಯನಿರ್ವಹಿಸುತ್ತಿಲ್ಲ. ಕಾಗೋಡಿನಲ್ಲಿ ಸಹ ಇಂತಹದ್ದೇ ಸ್ಥಿತಿ ಇದೆ.
ವಿದ್ಯುತ್ ಗ್ರಿಡ್ ಸ್ಥಾಪಿಸಲು ರೈತರ ಭೂಮಿಯನ್ನು ಪಡೆಯಲಾಗುತ್ತಿದೆ. ಆದರೆ ರೈತರಿಗೆ ಪರಿಹಾರದ ಜೊತೆಗೆ ಸಮರ್ಪಕ ವಿದ್ಯುತ್ ಸಹ ಕೊಡುತ್ತಿಲ್ಲ. ಗುಣಮಟ್ಟದ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತ ಸಂಘ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಭದ್ರೇಶ್ ಬಾಳಗೋಡು, ಜಿನಿಸ್ ಕುಮಾರ್, ಡಾ. ರಾಮಚಂದ್ರಪ್ಪ ಮನೆಘಟ್ಟ, ಚಂದ್ರಪ್ಪ ಆಲಳ್ಳಿ ಹಾಜರಿದ್ದರು.
ಇದನ್ನೂ ಓದಿ: Yuva Trailer: ಕೆಣಕಿದರೆ ಕೆಂಡ.. ಪಕ್ಕಾ ಲೋಕಲ್ ಆಗಿ ಆ್ಯಕ್ಷನ್ ಅವತಾರ ತಾಳಿದ ʼಯುವʼ