ಮೂಗೂರು: ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆ ಆಡಳಿತ ವರ್ಗ ಕಬ್ಬು ಕಟಾವು ಹಾಗೂ ಬೆಲೆ ನಿಗದಿಪಡಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಚಳವಳಿನಡೆಸುವುದಾಗಿ ರೈತ ಮುಖಂಡರು ಎಚ್ಚರಿಸಿದರು.
ಮೂಗೂರಿನ ಬಣ್ಣಾರಿ ಅಮ್ಮನ್ ಶುಗರ್‌ಕಾರ್ಖಾನೆಯ ಉಪ ಕಚೇರಿ ಎದುರು ರಾಜ್ಯ ರೈತಸಂಘದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿಹಲವು ರೈತ ಮುಖಂಡರು ಕಾರ್ಖಾನೆ ಹಾಗೂಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಆಕ್ರೋಶ: ಸರ್ಕಾರ ರೈತರ ಹಿತ ಮರೆತು ಕಾರ್ಖಾನೆ ಮಾಲೀಕರ ಜೊತೆಗೂಡಿಅನ್ಯಾಯವೆಸಗುತ್ತಾ ರೈತರ ಪಾಲಿಗೆ ಕಂಟಕ ಪ್ರಾಯವಾಗಿದ್ದಾರೆ. ನಮ್ಮ ಸಮಸ್ಯೆ ಆಲಿಸಲು ಜಿಲ್ಲಾಧಿಧಿಕಾರಿ ಅಥವಾ ತಹಶೀಲ್ದಾರ್ ಸ್ಥಳಕ್ಕೆ ಬರಬೇಕು. ಬೆಳಗ್ಗೆಯಿಂದ ಯಾವುದೇ ಅಧಿಕಾರಿಗಳು ಬಂದು ನಮ್ಮ ಮನವಿ ಆಲಿಸದ ಕಾರಣ ನಾವು ರಾಷ್ಟ್ರೀಯಹೆದ್ದಾರಿ ತಡೆ ನಡೆಸಬೇಕಾಗುತ್ತದೆ ಎಂದು ಎಜೆಎಂ ಮಹದೇವಪ್ಪ ಅವರಿಗೆ ಗಡುವು ನೀಡಿದರು.
ಹೋರಾಟ ಅನಿವಾರ್ಯವಾಗಿದೆ: ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಮಾತನಾಡಿ, ರೈತರ ಕಬ್ಬುಕಟಾವು ಹಾಗೂ ಬೆಲೆ ನಿಗದಿಗೆ ಮನವಿ ಮಾಡಿದ್ದಲ್ಲಿ ಸಮರ್ಪಕ ಉತ್ತರ ದೊರೆತ್ತಿಲ್ಲ. ಹೀಗಾಗಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮದ ರೈತ ಮುಖಂಡ ಚಂದ್ರಶೇಖರ್ ಮಾತನಾಡಿ, ಈಗಾಗಲೇ ಕಬ್ಬು ಕಟಾವು 18 ತಿಂಗಳು ಕಳೆದಿದೆ ಇದರ ಮಧ್ಯೆ ಚಿರತೆ ಹಾವಳಿಯಿಂದ ರೈತರು ಭಯಭೀತರಾಗಿ ಕಂಗಲಾಗಿದ್ದಾರೆ. ಕಟಾವು ದರವನ್ನು 400 ರಿಂದ 800 ರೂ.ಗೆ ಏರಿಸಿ ರೈತರನ್ನು ವ್ಯವಸ್ಥಿತವಾಗಿ ಶೋಷಣೆಗೆ ಒಳಪಡಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರೈತರಿಗೆ ಮಂಕುಬೂದಿ: ರೈತ ಮುಖಂಡ ಕುರುಬೂರು ವೀರೇಶ್ ಮಾತನಾಡಿ, 15 ದಿನಗಳಿಂದ ಕಬ್ಬು ಕಟಾವು ಯಂತ್ರ ಬರುತ್ತೆ ಎಂದು ಸುಳ್ಳುಗಳನ್ನೇ ಹೇಳುತ್ತಿದ್ದಾರೆ. ಈ ರೀತಿ ರೈತರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಸಮಸ್ಯೆ ಆಲಿಸಿ ಎಜೆಎಂ ಮಹದೇವಪ್ಪ ಮಾತನಾಡಿ, ಉತ್ತರ ಕರ್ನಾಟಕ ಭಾಗದಿಂದ ಕಬ್ಬು ಕಟಾವು ಮಾಡುವ ಕಾರ್ಮಿಕರು ಬರಬೇಕಿದ್ದು ಆ ಭಾಗದಲ್ಲಿ ಕಟಾವು ಮುಗಿದ ತಕ್ಷಣ ಇಲ್ಲಿಗೆ ಬರುತ್ತಾರೆ. ನಿಮ್ಮ ಭಾಗಕ್ಕೆ ಮೊದಲು ಆದ್ಯತೆನೀಡಿ ಕಟಾವು ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಜುಲೂರು ಜಯಸ್ವಾಮಿ,ವಾಟಾಳ್‌ಪುರ ಶಂಭಪ್ಪ, ಗೌಡಳ್ಳಿ ಸೋಮಣ್ಣ ಶಿವಕುಮಾರ, ಬೃಂಗೇಶ್, ವೀರೇಶ್ ಇತರರು ಉಪಸ್ಥಿತರಿದ್ದರು.