ಮಾಗಡಿ: ನಾರಸಂದ್ರ ಮತ್ತು ಶಿವನಸಂದ್ರ ಬಳಿ ಕೈಗಾರಿಕೆ ಸ್ಥಾಪನೆಗೆ ಕೆಐಎಡಿಬಿಗೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಭೂಮಿ ಕಳೆದುಕೊಳ್ಳುತ್ತಿರುವ ನೂರಾರು ರೈತರು, ಜಿಲ್ಲಾ ಉಸ್ತವಾರಿ ಸಚಿವರ ಡಾ.ಸಿ.ಎನ್.ಅಶ್ವತ್ಥ್ನಾರಾಯಣ ಅವರ ಕಾಲಿಗೆ ಬಿದ್ದು ಕಣ್ಣೀರಿಟ್ಟು ಮನವಿ ಮಾಡಿದರೂ, ಭರವಸೆಯಷ್ಟೆ ನೀಡಿ ಸಚಿವರು ಮುನ್ನಡೆದರು.
ತಾಲೂಕಿನ ಮರೂರು ಹ್ಯಾಂಡ್ ಫೋಸ್ಟ್ ಬಳಿ ಜಿಲ್ಲಾ ಉಸ್ತವಾರಿ ಸಚಿವರು ಕುದೂರಿಗೆ ತೆರಳಲು ಮರೂರು ಹ್ಯಾಂಡ್ ಫೋಸ್ಟ್ ಬಳಿ ಬರುತ್ತಿದ್ದಂತೆ ನೂರಾರು ರೈತರು ಸಚಿವರ ಕಾಲಿಗೆ ಬಿದ್ದು, ಕಣ್ಣೀರಿಟ್ಟು ಕೆಐಎಡಿಬಿಗೆ ಭೂಸ್ವಾಧೀನ ಕೈಬಿಡುವಂತೆ ಮನವಿ ಮಾಡಿ ಅಂಗಲಾಚಿದರು. ಈ ವೇಳೆ ಮಾತನಾಡಿದ ಸಚಿವರು, ನಿಮ್ಮ ಬಗ್ಗೆ ಮಾತ್ರವಲ್ಲ, ನಿರುದ್ಯೊಗಿಗಳ ಬಗ್ಗೆಯು ಚಿಂತಿಸಬೇಕಿದೆ. ಸಭೆ ಕರೆಯುತ್ತೇನೆ ಚರ್ಚಿಸೋಣ ಎಂದು ಕಾರು ಏರಿದರು. ಕಾರಿಗೆ ಮುತ್ತಿಗೆ ಹಾಕಿ ರೈತರು ಮನವಿ ಮಾಡಿದರೂ ಸಚಿವರು ಕ್ಯಾರೆ ಎನ್ನದೆ ಮುನ್ನಡೆದರು.
ರೈತ ಜಯರಾಮಯ್ಯ(ಬಾಬಣ್ಣ)ಮಾತನಾಡಿ, ಈ ದೇಶದಲ್ಲಿ ರೈತರಿಗೆ ಕಣ್ಣೀರು ಬರಿಸಿ ಯಾವ ರಾಜಕಾರಿಣಿಯೂ ಉದ್ಧಾರವಾದ ಉದಾಹರಣೆಯಿಲ್ಲ. ಕೈಗಾರಿಕೆ ಸ್ಥಾಪನೆ ಮಾಡಿದ್ದೆ ಆದರೆ ರೈತರ ಕಣ್ಣೀರಿನ ಶಾಪ ಶಾಸಕರಿಗೆ ತಟ್ಟೆ ತಟ್ಟುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ ಕೇಂದ್ರದ ಬಳಿ ಟೇಬಲ್ ಹಾಕಲು ಬಿಡುವುದಿಲ್ಲ, ಎಂದು ಎಚ್ಚರಿಸಿದರು.
ಶಾಸಕರ ಬೆಂಬಲ ಅಗತ್ಯ: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇವರು ರೈತರ ಪರವಾಗಿದ್ದಾರೆ. ಆದ್ದರಿಂದಲೇ ಈ ಭಾಗದಲ್ಲಿ ರೈತರು ಜೆಡಿಎಸ್‌ಗೆ ಹೆಚ್ಚು ಮತ ನೀಡಿ ಗೆಲ್ಲಿಸಿಕೊಳ್ಳುತ್ತಿರುವುದು. ಅಲ್ಲದೆ, ಮೈಸೂರು ಭಾಗದಲ್ಲಿಯೂ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಎ. ಮಂಜುನಾಥ್ ಅವರನ್ನು ಗೆಲ್ಲಿಸಿಕೊಂಡಿದ್ದೇವೆ. ರೈತರ ಹೋರಾಟಕ್ಕೆ ಶಾಸಕ ಎ.ಮಂಜುನಾಥ್ ಬೆಂಬಲ ನೀಡಬೇಕಿದೆ ಎಂದರು.
ನಮಗೆ ಉದ್ಯೋಗದ ಅವಶ್ಯಕತೆಯಿಲ್ಲ: ರೈತ ಕುಟುಂಬಗಳು ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಬಂದಿರುವುದು ದುರಾದುಷ್ಟಕರ. ನಾರಸಂದ್ರ ಮತ್ತು ಶಿವನಸಂದ್ರದ ಸುತ್ತಮುತ್ತಲಿನ ಫಲವತ್ತಾದ ಭೂಮಿಯಿದ್ದು, ಯಾವುದೇ ಕಾರಣಕ್ಕೂ ಕೈಗಾರಿಕೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ನಮ್ಮ ಫಲವತ್ತಾದ ಭೂಮಿಯಿಂದ ಬದುಕು ಕಟ್ಟಿಕೊಂಡಿದ್ದೇವೆ. ಮಕ್ಕಳನ್ನು ಉನ್ನತ ವಿದ್ಯಾಧ್ಯಾಸ ಕೊಡಿಸಿದ್ದೇವೆ. ಅಡಕೆ, ತೆಂಗು, ಶುಂಠಿ, ಏಲಕ್ಕಿ ಬೆಳೆದು ಲಕ್ಷಾಂತರ ರೂ. ಸಂಪಾದಿಸುತ್ತಿದ್ದೇವೆ. ನಮಗೆ ಉದ್ಯೋಗದ ಅವಶ್ಯಕತೆಯಿಲ್ಲ ಎಂದರು.
ಯುವ ಮುಖಂಡ ಕುಮಾರ್, ಸಾಗರ್‌ಗೌಡ, ಮುನಿರಾಜು, ಶಂಕರ್, ರಾಜಣ್ಣ ರಮೇಶ್ ಹಾಗೂ ರೈತರು ಇದ್ದರು.