ಚನ್ನಪಟ್ಟಣ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಎಸ್ಸಿ, ಎಸ್ಟಿ ರೈತರಿಗೆ ದುರಸ್ತಿ, ಹದ್ದುಬಸ್ತು ಪೋಡಿ ಆಗ್ರಹಿಸಿ, ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ನಡೆಯುತ್ತಿರುವ ಧರಣಿ 5ನೇ ದಿನಕ್ಕೆ ಕಾಲಿಟ್ಟಿದೆ.
ಈ ವೇಳೆ ರೈತ ಸಂಘದ ವಿ.ಎಸ್.ಸುಜೀವನ್ ಕುಮಾರ್ ಮಾತನಾಡಿ, 1942ರಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ದುರಸ್ತಿ, ಹದ್ದುಬಸ್ತು ಮತ್ತು ಪೋಡಿಯಾಗದೆ ತೊಂದರೆಯಾಗಿದ್ದು, ಅಧಿಕಾರಿಗಳಿಗೆ ಅರ್ಜಿ ನೀಡಿ ನಿರಂತರ ಹೋರಾಟ ಹಮ್ಮಿಕೊಂಡಿದ್ದೇವೆ. ನಮ್ಮ ಬೇಡಿಕೆ ಈಡೇರುವ ವರೆಗೆ ಈ ನಿರಂತರ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಸಣ್ಣ, ಅತಿ ಸಣ್ಣ ರೈತರು ಸೇರಿದಂತೆ 11 ಸಾವಿರ ಇದ್ದು, ಎಸ್ಸಿ, ಎಸ್ಟಿ 4 ಸಾವಿರ ರೈತರು ಇದ್ದು, ಇವರು ನಿರಂತರವಾಗಿ ಸಾಗುವಳಿಯನ್ನು ಮಾಡಿ ಕೊಂಡು ಬರುತ್ತಿದ್ದಾರೆ. ಆದರೆ, ಅವರಿಗೆ ದುರಸ್ತಿ, ಹದ್ದುಬಸ್ತು ಮತ್ತು ಪೋಡಿಯಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಸಣ್ಣ, ಅತಿ ಸಣ್ಣ ರೈತರ ಸಂಕಷ್ಟವನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಕ್ಷೇತ್ರದ ಶಾಸಕರು ಕೂಡಲೇ ಇಂತಹ ಸಮಸ್ಯೆಗಳಿಗೆ ಮುಕ್ತಿ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಸಣ್ಣ, ಅತಿ ಸಣ್ಣ, ಎಸ್ಸಿ-ಎಸ್ಟಿ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಬಲವುಳ್ಳವರಿಗೆ ಸರ್ಕಾರದ ಗೋಮಾಳ: ತಾಲೂಕಿ ನಲ್ಲಿ ಸುಮಾರು 10 ಸಾವಿರ ಎಕರೆ ಗೋಮಾಳವಿದ್ದು, ಅರ್ಹ ಫಲಾನುಭವಿಗಳಿಗೆ ದೊರಕದೆ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಾಗೂ ಹಣ ಬಲವುಳ್ಳವರಿಗೆ ಸರ್ಕಾರದ ಗೋಮಾಳವನ್ನು ಪರಾಭಾರೆ ಮಾಡುತ್ತಿದ್ದಾರೆ. ಈ ಹಿಂದೆ ಗೋಮಾಳ ಪರಾಭಾರೆ ಮಾಡಿರುವ ಪ್ರಕರಣಗಳು ತಾಲೂಕಿನಲ್ಲಿ ಎಷ್ಟೋ ನಡೆದ್ದಿವೆ. ಸರ್ಕಾರದ ಆಸ್ತಿ ಹಣವಂತರ ಹಾಗೂ ರಾಜಕಾರಣಿಗಳ, ಅಧಿಕಾರಿಗಳ ಪಾಲಾಗುತ್ತಿರುವುದು ದುರಂತವೇ ಸರಿ ಎಂದರು.
ಆಮಿಷಕ್ಕೆ ಬಲಿಯಾದ ಅಧಿಕಾರಿಗಳು: ತಮ್ಮ ಕೈಯಲ್ಲಿ ಅಧಿಕಾರ ಇದೆ ಎಂದು ಅಧಿಕಾರಿಗಳು ಅರ್ಹ ಪಲಾನುಭವಿಗಳನ್ನು ಗುರುತಿಸದೆ ಆಮಿಷಕ್ಕೆ ಬಲಿ ಯಾಗಿ ಗೋಮಾಳ ಪರಾಭಾರೆ ಮಾಡುತ್ತಿದ್ದಾರೆ. ಈ ಕೂಡಲೇ ಕ್ಷೇತ್ರದ ಶಾಸಕರು ಈ ಬಗ್ಗೆ ಗಮನಹರಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ದೊರಕಿಸಿ ಕೊಡಬೇಕು. ಇಲ್ಲವಾದಲ್ಲಿ ಈ ಹೋರಾಟ ಹೀಗೆ ಮುಂದುವರಿಯುತ್ತದೆ ಎಂದು ಹೇಳಿದರು.
ರಾಮನಗರ ಜಿಲ್ಲಾಧ್ಯಕ್ಷ ಶಿವಕುಮಾರ್, ಜೀವಿಕ ಸಂಘಟನೆಯ ಹುಲುವಾಡಿ ಸಿದ್ದಯ್ಯ, ನುಣ್ಣೂರಿನ ಶಿವಕುಮಾರ್ ಎನ್.ಎಂ., ಅಕ್ಕೂರು ಶಿವಕುಮಾರ್, ಕೃಷಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಸಿದ್ದರಾಮು ಚಕ್ಕಲೂರು ಹಾಗೂ ಇತರರು ಇದ್ದರು.