Advertisement

ಅಧಿಕಾರಿಗಳ ಕಿರುಕುಳ: ಆತ್ಮಹತ್ಯೆಗೆ ರೈತರ ನಿರ್ಧಾರ

04:32 PM May 15, 2022 | Team Udayavani |

ಬಂಗಾರಪೇಟೆ: ತಾಲೂಕಿನ ಗಡಿಭಾಗದಲ್ಲಿ ಹಲವಾರು ವರ್ಷಗಳಿಂದಲೂ ಕಾಡಾನೆಗಳ ಹಾವಳಿಯಿಂದ ತತ್ತರಿಸಿ ಕಂಗಾಲಾಗಿರುವ ರೈತರಿಗೆ ವಲಯ ಅರಣ್ಯಾಧಿಕಾರಿಗಳ ಪ್ರತಿನಿತ್ಯದ ಕಿರುಕುಳಕ್ಕೆ ಅಲ್ಲಿನ ರೈತರು ರೋಸಿ ಹೋಗಿ ಜೀವನವೇ ಬೇಡ ಎಂದು ಸಾಮೂಹಿಕ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುತ್ತಿರುವ ಮಟ್ಟಿಗೆ ಅರಣ್ಯಾಧಿಕಾರಿಗಳ ದೌರ್ಜನ್ಯ ಹೆಚ್ಚಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

Advertisement

ಗಡಿಭಾಗದ ರೈತರ ಮೇಲೆ ವಲಯ ಅರಣ್ಯಾಧಿಕಾರಿಗಳ ದೌರ್ಜನ್ಯ ಖಂಡಿಸಿ ಹಾಗೂ ಅರಣ್ಯ ಗೋಮಾಳ ಗಡಿ ಗುರುತಿಸಲು ಸರ್ವೇ ಮಾಡಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ ಮೇ.18 ರಂದು ಪಟ್ಟಣದ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ತಳೂರು ಗೋಮಾಳ ಜಮೀನಿನಲ್ಲಿ ಸೇರಿದ್ದ ರೈತಸಂಘದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ತಾಲೂಕಿನ ಕಾಮಸಮುದ್ರ ಹೋಬಳಿಯ ಅರಣ್ಯ ರಕ್ಷಕ ಚಲಪತಿ ಹಾಗೂ ಸುಬ್ರಮಣಿ ಮತ್ತಿತರರು ನಾಲ್ವರ ದಬ್ಟಾಳಿಕೆಗೆ ಕಡಿವಾಣ ಇಲ್ಲದಂತಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಮ್ಮ ಕೈ ಕೆಳಗೆ ಕೆಲಸ ಮಾಡುವ ರೀತಿ ವರ್ತನೆ ಮಾಡುವ ಜತೆಗೆ ತಳೂರು ಸರ್ವೆ ನಂ. 11ರಲ್ಲಿ ಗುಡಿಸಲು ಹಾಕಿಕೊಂಡು ಪ್ರತಿನಿತ್ಯ ತಳೂರು ಮತ್ತು ಮಲ್ಲೇಶಪಾಳ್ಯಂ ರೈತರ ಮೇಲೆ ದೌರ್ಜನ್ಯ ಮಾಡಿ ಯಾರಿಗಾದರೂ ದೂರು ಮಾಡಿಕೊಳ್ಳಿ ನಮ್ಮನ್ನು ಏನೂ ಮಾಡಲಾಗುವುದಿಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ದೂರಿದರು.

ಹಿರಿಯ ಅಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳಿಗೆ ಕಾಡಿನಲ್ಲಿ ಬೆಲೆಬಾಳುವ ಮರಗಳನ್ನು ರಾತ್ರೋರಾತ್ರಿ ಕಟಾವು ಮಾಡಿ ತಮಿಳುನಾಡಿಗೆ ಸಾಗಾಣಿಕೆ ಮಾಡಿ ಹಣವನ್ನು ನೀಡುತ್ತೇವೆ. ಜತೆಗೆ ನಾವು ಸಿಕ್ಕಿ ಹಾಕಿಕೊಳ್ಳುವ ಸಮಯದಲ್ಲಿ ಮಲ್ಲೇಶಪಾಳ್ಯಂ ಅಮಾಯಕ ರೈತರನ್ನು ಉಪಾಯವಾಗಿ ಸ್ಥಳಕ್ಕೆ ಕರೆಯಿಸಿ ಅವರ ಮೇಲೆಯೇ ಮರಗಳ್ಳತನ ಕೇಸು ದಾಖಲಿಸುತ್ತೇವೆ. ನಮಗೆ ವಲಯ ಅರಣ್ಯಾಧಿಕಾರಿಗಳ ಆಶೀರ್ವಾದವಿದೆ ಎಂದು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆಂದು ಆರೋಪಿಸಿದರು.

ಗಡಿಭಾಗದ ರೈತರ ಮೇಲಿನ ವಲಯ ಅರಣ್ಯಾಧಿಕಾರಿಗಳ ದೌರ್ಜನ್ಯ ಖಂಡಿಸಿ ಗೋಮಾಳ ಅರಣ್ಯ ಗಡಿ ಗುರುತಿಸಲು ಸರ್ವೆ ಮಾಡಿಸುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿ ಹಿರಿಯ ಅಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಅರಣ್ಯ ರಕ್ಷಕರಾದ ಸುಭ್ರಮಣಿ, ಚಲಪತಿ ರವರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು. ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌ ಮಾತನಾಡಿ, ನೂರಾರು ಎಕರೆ ಅರಣ್ಯವನ್ನು ಒತ್ತುವರಿ ಮಾಡಿಕೊಂಡಿರುವ ಶ್ರೀಮಂತರ ಗುಲಾಮರಾಗಿರುವ ವಲಯ ಅರಣ್ಯಾಧಿಕಾರಿ ಗಳು ತಮ್ಮ ಪೌರುಷವನ್ನು ತಳೂರು ಸರ್ವೆ ನಂ. 11ರ ವ್ಯಾಪ್ತಿಗೆ ಬರುವ ಅಮಾಯಕ ರೈತರ ಮೇಲೆ ಸುಳ್ಳು ಕೇಸುಗಳನ್ನು ದಾಖಲು ಮಾಡುವ ಮುಖಾಂತರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನಾ, ಮರಗಲ್‌ ಮುನಿಯಪ್ಪ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್‌, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಬಾಬಾ ಜಾನ್‌, ಮಲ್ಲೇಶಪಾಳ್ಯಂ ರಾಜಣ್ಣ, ತಳೂರು ಸಂಪಂಗಿ, ಬಸಪ್ಪ, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ನಾಗಯ್ಯ, ಮುನಿರಾಜು, ಸಂದೀಪ್‌ಗೌಡ, ಸುರೇಶ್‌ ಬಾಬು, ಸಂದೀಪ್‌ರೆಡ್ಡಿ ಇತರರಿದ್ದರು.

ಅಕ್ರಮ ನಡೆದಿದ್ದರೆ ಡೀಸಿಗೆ ದೂರು ನೀಡಲಿ : ಯಾವುದೇ ದಾಖಲೆಗಳಿಲ್ಲದೆ ರಾಜಕೀಯ ಒತ್ತಡಕ್ಕೆ ಮಣಿದು ಸರ್ವೆ ನಂ. 11ರ ಜಮೀನು ಅರಣ್ಯ ಭೂಮಿಗೆ ಸೇರಿದ್ದು ಎಂದು ಅಮಾಯಕ ರೈತರ ತಾಳ್ಮೆಯನ್ನು ಕೆಣಕುತ್ತಿದ್ದಾರೆ. ಆದರೆ, ಅಲ್ಲಿನ ರೈತರು ಅಕ್ರಮವಾಗಿ ಸಾಗುವಳಿ ಚೀಟಿ ಪಡೆದಿದ್ದಾರೆ ಎಂದು ಆರೋಪ ಮಾಡುವ ಮುಖಾಂತರ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಾಖಲೆಗಳು ಅಕ್ರಮವಾದರೆ ಅದನ್ನು ತನಿಖೆ ಮಾಡಲು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌ ಆಗ್ರಹಿಸಿದರು.

ಕಣ್ಣೀರು ಹಾಕಿದ ಮಹಿಳೆಯರು : ತಳೂರು ಗೋಮಾಳದಲ್ಲಿ ತಾಲೂಕು ಆಡಳಿತ ನೀಡಿರುವ ಸಾಗುವಳಿ ಚೀಟಿ ಅಕ್ರಮ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಿ, ಸಮಸ್ಯೆ ಬಗೆಹರಿಸುವುವವರೆಗೂ ಶಾಂತಿಯುತವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆದುಕೊಳ್ಳ ಬೇಕು. ಅದನ್ನು ಬಿಟ್ಟು ಕುರಿ ಮೇಯಿಸಲು ತಕರಾರು ಹಾಗೂ ಊರಿನ ಜನ ಓಡಾಡಿದರೆ ಅಲ್ಲಿನ ಗುತ್ತಿಗೆ ಸಿಬ್ಬಂದಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತೇವೆಂಬ ಬೆದರಿಕೆ ಮತ್ತು ದೌರ್ಜನ್ಯ ನಡೆಸುತ್ತಿದ್ದರು. ಹಿರಿಯ ಅಧಿಕಾರಿ ಗಳು ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಸಭೆಯಲ್ಲಿ ಮಹಿಳೆಯರು ಕಣ್ಣೀರು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next