ಮಾಗಡಿ: ರಾಗಿ ಖರೀದಿಸಲು ಸರ್ಕಾರ ಆದೇಶ ಜಾರಿಗೊಳಿಸಿದ್ದರೂ, ಸರ್ವರ್ ಸಮಸ್ಯೆ ನೆಪಹೊಡ್ಡಿ ರಾಗಿ ಖರೀದಿಸದೇ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸೋಮೇಶ್ವರ ದೇವಾಲಯದ ಬಳಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಗಿ ಖರೀದಿಯನ್ನು ಕೇಂದ್ರದಲ್ಲಿ ಸ್ಥಗಿತಗೊಳಿಸಿದ ನಂತರ ರಾಗಿ ಖರೀದಿ ಮಾಡುವಂತೆ ರಾಜ್ಯ ರೈತ ಸಂಘ ಹೋರಾಟ ನಡೆಸಿದ್ದು, ಈ ಸಂಬಂಧ ಸರ್ಕಾರ ಖರೀದಿಗೆ ಆದೇಶ ಜಾರಿಗೊಳಿಸಿದೆ. ಕಾಟಾಚಾರಕ್ಕೆ ಒಂದು ದಿನ ರಾಗಿ ಖರೀದಿ ಮಾಡಿ ಮರುದಿನ ಸರ್ವರ್ ಸಮಸ್ಯೆ ಎಂದು ಸರ್ಕಾರವೇ ನಿಲ್ಲಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಅಧಿಕಾರಿಗಳು ರೈತರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಅಥವಾ ಸರ್ಕಾರವೇ ರಾಗಿ ಖರೀದಿಯನ್ನು ಸ್ಥಗಿತಗೊಳಿಸಿದೀಯಾ ಎಂದು ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್ ತಿಳಿಸಬೇಕು ಎಂದು ಒತ್ತಾಯಿಸಿದರು.
ಮಾಗಡಿಯಿಂದ ತಾಳೇಕೆರೆ ಹ್ಯಾಂಡ್ ಪೋಸ್ಟ್ ವರೆಗೂ ಕೆಶಿಫ್ ರಸ್ತೆ ನಿರ್ಮಿಸುತ್ತಿದ್ದು, ರಸ್ತೆ ಬದಿ ಎತ್ತರವಾಗಿ ಚರಂಡಿ ನಿರ್ಮಾಣ ಮಾಡುತ್ತಿರು ವುದರಿಂದ ಮನೆಗಳಿಗೆ ತೆರಳು ಸಾಧ್ಯವಾಗದೆ, ಮನೆ ಬಾಗಿಲ ಎತ್ತರಕ್ಕೆ ರೈತರು ಮಣ್ಣು ಹಾಕಿಕೊಳ್ಳುತ್ತಿರುವುದರಿಂದ ರಸ್ತೆ ಅಪಘಾತಗಳು ನಡೆದು ಪ್ರಾಣ ಹಾನಿ ಸಂಭವಿಸುತ್ತಿವೆ. ಸರ್ಕಾರ ಕೆಶಿಫ್ ಅಧಿಕಾರಿಗಳಿಗೆ ತಿಳುವಳಿಕೆ ನೀಡಿ, ಚರಂಡಿ ಸ್ಲಾಬ್ ಕತ್ತರಿಸಿ ರೈತರಿಗೆ ಅನುಕೂಲ ಮಾಡಿಕೊ ಡಬೇಕು ಎಂದು ಮನವಿ ಮಾಡಿದರು.
ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ: ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಸುಂತೆ ಕಳೆದ 2 ವರ್ಷದ ಹಿಂದೆಯೇ ಬೆಸ್ಕಾಂಗೆ ಹಣ ಪಾವತಿಸಿದ್ದರೂ, ಆಳವಡಿಸದೇ ಬೇಸಿಗೆಯಲ್ಲಿ ರೈತರು ತೋಟಗಳಿಗೆ ನೀರು ಹಾಯಿಸಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ 2 ತಿಂಗಳ ಹಿಂದೆ ಬೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದ ವೇಳೆ ಶೀಘ್ರವೇ ವಿದ್ಯುತ್ ಪರಿವರ್ತಕ ಅಳವಡಿಸುವ ಭರವಸೆ ನೀಡಿದ್ದರು. ಆದರೂ, ಇಲ್ಲಿಯವರೆಗೂ ಅಳವಡಿಸಿಲ್ಲ. ತಾಲೂಕಿನಲ್ಲಿ ನಿರಂತರವಾಗಿ ಎಇಇ ಅಧಿಕಾರಿಗಳು ವರ್ಗಾ ವಣೆಯಾಗುತ್ತಿದ್ದಾರೆ. ಈ ರೀತಿಯಾದರೆ ರೈತರು ಯಾರ ಬಳಿ ತಮ್ಮ ನೋವು ಹೇಳಿಕೊಳ್ಳುವುದು ಎಂದು ಪ್ರಶ್ನಿಸಿದ ಅವರು, ಬೇಸಿಗೆಯಾಗಿದ್ದು ಸಮರ್ಪಕ ವಿದ್ಯುತ್ ಇಲ್ಲದೆ ರೈತರು ಬೆಳೆದ ಬೆಳೆಗಳು ಒಣಗುತ್ತಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಇತ್ತ ಗಮನಹರಿಸಿ, ವಿದ್ಯುತ್ ಪರಿವರ್ತಕ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಣ ನೀಡಿದರೆ ಮಾತ್ರ ಕೆಲಸ: ಹಣ ಕೊಟ್ಟರೆ ಮಾತ್ರ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗುವುದು. ಸರ್ವೆ ಇಲಾಖೆಯ ಸರ್ವೇಯರ್‌ಗಳು ಯಾರದ್ದೊ, ಭೂಮಿಯನ್ನು ಇನ್ಯಾರಧ್ದೋ ಹೆಸರಿಗೆ ಕೂರಿಸುತ್ತಾರೆ. ಕೇಳಿದರೆ ಹಣ ಕಟ್ಟಿ ಅಳತೆ ಮಾಡಿಕೊಡುತ್ತೇವೆ ಎನ್ನುತ್ತಾರೆ. ಸರ್ವೇಯರ್ ಮಾಡಿದ ತಪ್ಪಿಗೆ ರೈತರು ಏಕೆ ಹಣ ಕಟ್ಟಬೇಕು. ಸರ್ವೇಯರ್ ಅವರಿಂದಲೇ ಸರ್ಕಾರ ಹಣ ಕಟ್ಟಿಸಲಿ ಆಗ ಹಣದ ಬೆಲೆ ಗೊತ್ತಾಗುತ್ತದೆ. ಈ ಸಂಬಂಧ ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು ಜಿಲ್ಲಾಧಿಕಾರಿ, ನ್ಯಾಯಾಲಯಕ್ಕೆ ಅಲೆಯುವ ಹೋರಾಟ ಮಾಡಬೇಕಿದೆ. ಸರ್ಕಾರ ಮಾತ್ರ ಮನೆ ಬಾಗಿಲಿಗೆ ಪಹಣಿ, ಸರ್ವೆ ಸ್ಕೇಚ್ ತಂದುಕೊಡುತ್ತೇವೆ ಎಂದು ಸುಳ್ಳಿನ ಕಂತೆ ಹರಿದುಬಿಡುತ್ತಿದೆ ಎನ್ನುವಂತಾಗಿದೆ.
ಸರ್ಕಾರ ಇನ್ನಾದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಈ ಸಂಬಂಧ 3 ದಿನಗಳ ಒಳಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ರೈತ ಮುಖಂಡರ ಸಭೆ ನಡೆಸಿ ಚರ್ಚಿಸಿ, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಸೋಮೇಶ್ವರ ಕಾಲೋನಿ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು. ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಸಮಸ್ಯೆ ಆಲಿಸಲು ಡೀಸಿ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಟ್ಟಣದ ಒಳಚರಂಡಿ ತ್ಯಾಜ್ಯ ಭರ್ಗಾವತಿ ಕೆರೆಗೆ ಸೇರಿ, ಕೆರೆ ಕಲುಷಿತವಾಗಿ ಸುತ್ತಮುತ್ತಲ ಗ್ರಾಮಸ್ಥರು ಕಲುಷಿತ ನೀರು ಕುಡಿದು ಹಲವಾರು ರೋಗಗಳಿಂದ ಬಳಲುತ್ತಿದ್ದಾರೆ. ಸರಿಪಡಿಸಲು ಯಾರೂ ಮುಂದಾಗಿಲ್ಲ. ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನಗೊಳಿಸುವ ಕೆಲಸ ಸ್ಥಗಿತಗೊಂಡಿದ್ದು, 15 ದಿನಗಳ ಒಳಗೆ ಜಲಾಶಯ ದ ಬಳಿ ಪ್ರತಿಭಟನೆ ಮಾಡಲಾಗುವುದು. ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿಗೆ ನಿರಂತರ ಹೋರಾಟ ನಡೆಸುತ್ತಿದ್ದರೂ, ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿ ಬಗೆಹರಿಯುತ್ತಿಲ್ಲ. ಇಂಥಹವರಿಗೆ ರೈತ ಸಂಘ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುವುದು. ಎಂದು ಹೇಳಿದರು.
ರೈತ ಮುಖಂಡರಾದ ಚನ್ನರಾಯಪ್ಪ, ಪಟೇಲ್ ಹನುಮಂತಯ್ಯ, ಶಿವರುದ್ರಯ್ಯ, ನಿಂಗಪ್ಪ, ರಂಗಪ್ಪ, ಹನುಮಂತಯ್ಯ, ನಾಗರಾಜು, ಷಡಾಕ್ಷರಿ, ಚಿಕ್ಕಣ್ಣ, ಮಂಜುನಾಥ್, ಶಂಕರಯ್ಯ, ನಾರಾಯಣಪ್ಪ, ರಮೇಶ್ ಹಾಜರಿದ್ದರು.