ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಹವಾಮಾನ ವೈಪ ರೀತ್ಯ ಮೊದಲಾದ ಕಾರಣಗಳಿಂದ ಮಾವು ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ಮಾವು ಬೆಳೆಗಾರರ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಈ ಕೂಡಲೇ ಮಾವು ನಷ್ಟದ ಕುರಿತು ವ್ಯಾಪಕ ಸರ್ವೆ ನಡೆಸಿ, ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವ ದಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ವಿಜಯ ಕುಮಾರ್, ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ ಮಾತನಾಡಿ, ಈ ವರ್ಷ ಉತ್ತಮ ಮಾವು ಬೆಳೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತವಾಗಿದೆ. ಹವಾಮಾನ ವೈಪರೀತ್ಯ ಮೊದಲಾದ ಕಾರಣಗಳಿಂದ ಹೂವು ಬಂದಿದ್ದ ಗಿಡಗಳಲ್ಲಿ ಕಾಯಿ ಕಚ್ಚದೇ ಬೆಳೆ ಸಂಪೂರ್ಣ ಕೈಗೆ ಸಿಗದಂತಾಗಿದೆ. ಈ ನಡುವೆ ಗೊಬ್ಬರ, ಕೀಟನಾಶಕ, ಡೀಸೆಲ್ ಮೊದಲಾಗಿ ಕೃಷಿ ಚಟುವಟಿಕೆಗಳಿಗೆ ಬೇಕಾದ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಇಂತಹುದರ ನಡುವೆಯೂ ಉತ್ತಮ ಮಾವಿನ ಬೆಳೆ ನಿರೀಕ್ಷೆ ಮಾಡಿದ್ದ ರೈತರಿಗೆ ಬೆಳೆ ಬರದೇ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಅಗತ್ಯ ಪರಿಹಾರ ನೀಡಿ: ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶೇ.60ರಷ್ಟು ಬೆಳೆ ಬಂದಿದೆ ಎಂದು ವರದಿ ನೀಡಿ, ಇಲಾಖೆ ಇತ್ತ ಗಮನ ಹರಿಸದೇ ಇರುವುದು ಖಂಡನೀಯ. ಈ ಕೂಡಲೇ ಮಾವು ಬೆಳೆಗಾರರ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಹಾಗೂ ಸರ್ಕಾರ ಮಧ್ಯ ಪ್ರವೇಶಿಸಿ ಮಾವು ನಷ್ಟದ ಕುರಿತು ವ್ಯಾಪಕ ಸರ್ವೆ ನಡೆಸಿ ಬೆಳೆಗಾರರಿಗೆ ಅಗತ್ಯ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಉತ್ತಮ ಬೆಲೆ ದೊರೆಯಲಿದೆ: ರೈತರಿಂದ ಮನವಿ ಸ್ವೀಕರಿಸಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇ ಶಕ ಗುಣವಂತ ಮಾತನಾಡಿ, ಜಿಲ್ಲೆಯಲ್ಲಿ 7,587 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ದೊಡ್ಡ ಬಳ್ಳಾಪುರ ತಾಲೂಕಿನಲ್ಲಿ 1,261 ಎಕರೆ ಪ್ರದೇಶದಲ್ಲಿ ಮಾವು ಬೆಳೆ ಇದೆ. ಮಾವು ಅಭಿವೃದ್ಧಿ ನಿಗಮದ ಪ್ರಕಾರ ರಾಜ್ಯದಲ್ಲಿ ಅಂದಾಜು ಶೇ.30ರಿಂದ 50ರಷ್ಟು ಬೆಳೆ ಬಂದಿದೆ. ಇಳುವರಿ ಕಡಿಮೆ ಇರುವುದಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ. ರೈತರ ಮನವಿ ಯನ್ನು ಸರ್ಕಾರದ ಗಮ ನಕ್ಕೆ ತರಲಾಗುವುದು ಎಂದರು.
ತೋಟಗಾರಿಕೆ ಇಲಾಖೆ ತಾಲೂಕು ಸಹಾ ಯಕ ನಿರ್ದೇಶಕಿ ಎಂ.ಎಸ್.ದೀಪಾ, ಮಾರುತಿ ಇದ್ದರು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಎಲ್.ರಮೇಶ್, ಮುಖಂಡ ಸದಾಶಿವ ಮೂರ್ತಿ, ನಾರಾಯಣಸ್ವಾಮಿ, ಎಸ್.ಆರ್.ಕೃಷ್ಣಪ್ಪ, ಸಿ.ಆರ್. ಮುನಿರಾಜು, ರಾಜಣ್ಣ, ಗೋವಿಂದ ರಾಜು, ಹನುಮಂತರಾಜು, ಮಹೇಂದ್ರ, ಆನಂದ್ ಮತ್ತಿತರರು ಇದ್ದರು.