ಮುದ್ದೇಬಿಹಾಳ: ಹೂವಿನಹಿಪ್ಪರಗಿ ಶಾಖಾ ಕಾಲುವೆಗೆ ನೀರು ಹರಿಸಬೇಕೆನ್ನುವ ಬೇಡಿಕೆ ಈಡೇರಿದ್ದರಿಂದ ಈ ಕುರಿತು ನ. 2ರಿಂದ ನಡೆಸಲು ಉದ್ದೇಶಿಸಿದ್ದ ಆಮರಣ ಉಪವಾಸ ಸತ್ಯಾಗ್ರಹವನ್ನು ಕೈ ಬಿಟ್ಟು ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಹೋರಾಟಕ್ಕೆ ಅಣಿಯಾಗಿದ್ದ ರೈತ ಮುಖಂಡರು ಮಂಗಳವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಮಾಹಿತಿ ನೀಡಿದರು.
ಹೋರಾಟ ನಡೆಸುವ ಕುರಿತು ಕೆಲ ದಿನಗಳ ಹಿಂದೆ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿತ್ತು. ಮನವಿಯಲ್ಲಿನ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ಕೆಬಿಜೆಎನ್ನೆಲ್‌ನ ಮುಖ್ಯ ಅಭಿಯಂತರ ಸುರೇಶ ಅವರು ಹೋರಾಟದ ಮುಖಂಡರಿಗೆ ಕರೆ ಮಾಡಿ ಕೆಬಿಜೆಎನ್ನೆಲ್ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಸಚಿವ ಉಮೇಶ ಕತ್ತಿ ಅವರೊಂದಿಗೆ ಚರ್ಚಿಸಿ ಅನುಮತಿ ಪಡೆದುಕೊಂಡು ಇಂದಿನಿಂದಲೇ ಕಾಲುವೆಯಲ್ಲಿ ನೀರು ಹರಿಸಲು ಆರಂಭಿಸುವ ಭರವಸೆ ನೀಡಿ ಹೋರಾಟ ಕೈಬಿಡುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸಲಾಗಿದೆ.
ರೈತಪರ ಕಾಳಜಿ ಇಟ್ಟುಕೊಂಡು ಹೋರಾಟಕ್ಕೆ ಅವಕಾಶವಾಗದಂತೆ ಸಂಬಂಧಿ ಸಿದ ಇಲಾಖೆ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟು ನೀರು ಹರಿಸಲು ಅಗತ್ಯ ಕ್ರಮ ವಹಿಸಿದ ತಹಶೀಲ್ದಾರ್ ಅವರ ಸೇವೆಯನ್ನೂ ಮನವಿಯಲ್ಲಿ ಸ್ಮರಿಸಲಾಗಿದೆ.
ಅರವಿಂದ ಕೊಪ್ಪ, ಸೋಮಶೇಖರ, ಬಸವರಾಜ ನರಸಣಗಿ, ಶೇಖರಗೌಡ ಬಿರಾದಾರ, ತಿಮ್ಮಣ್ಣ ಬಂಡಿವಡ್ಡರ, ಕೆ.ಬಿ.ವಡವಡಗಿ, ಎಸ್.ಜಿ.ಗಸ್ತಿಗಾರ, ಎಸ್.ಪಿ.ಬಿರಾದಾರ, ಬಿ.ಎಂ.ಪಾಟೀಲ, ಆರ್.ಜಿ.ಸಜ್ಜನ ಮತ್ತಿತರರು ಇದ್ದರು. ಗ್ರೇಡ್-2 ತಹಶೀಲ್ದಾರ್ ಡಿ.ಜಿ.ಕಳ್ಳಿಮನಿ ಮನವಿ ಸ್ವೀಕರಿಸಿದರು.