ಶೃಂಗೇರಿ: ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯಡಿ ವಿಮೆ ಕಟ್ಟಿದ ತಾಲೂಕಿನ ರೈತರಿಗೆ ಇದುವರೆಗೂ ಬೆಳೆ ವಿಮೆ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ 17 ತಿಂಗಳ ಹಿಂದೆ ತಾಲೂಕಿನಲ್ಲಿ ರೈತರು ಫಸಲ್ ಬಿಮಾ ಯೋಜನೆಯಡಿ ವಿಮೆ ಕಂತು ಕಟ್ಟಿ ನೋಂದಾಯಿಸಿಕೊಂಡಿದ್ದರು. ಈ ಸಾಲಿನಲ್ಲಿ 2020 ರ ಮೇ ತಿಂಗಳಿನಲ್ಲಿಯೂ ರೈತರು ನೋಂದಾಯಿಸಿದ್ದು ಬೆಳೆ ಹಾನಿಯಾದಾಗ ಸರ್ಕಾರದಿಂದ ಪರಿಹಾರ ಧನ ದೊರಕುತ್ತದೆ ಎಂಬ ಭರವಸೆಯಿಂದ ಇದ್ದರು. ಆದರೆ ಇದುವರೆಗೂ ಸಹ ಆ ವಿಮೆ ರೈತರಿಗೆ ತಲುಪಿಲ್ಲ. ಸಮಸ್ಯೆ ವಿಚಾರಿಸಲುಹೋದರೆ ಸ್ಪಷ್ಟ ಮಾಹಿತಿ ದೊರಕುತ್ತಿಲ್ಲ. ಇದರಿಂದ ವಂಚಿತ ರೈತರು ಏನು ಮಾಡಬೇಕು ಎಂಬುದು ಅವರ ಚಿಂತೆಯಾಗಿದೆ. ವಿಮೆ ಹಣ ಬರದಿದ್ದರೆ ಯಾರಿಗೆ ಕೇಳಬೇಕು ಅಥವಾ ಯಾರ ಮೇಲೆ ರೈತರು ಕೇಸು ದಾಖಲಿಸಬೇಕು. ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ.
ಫಸಲ್ ಭಿಮಾ ಯೋಜನೆಯಡಿ 1 ಹೆಕ್ಟೇರ್ ಅಡಕೆ ತೋಟಕ್ಕೆ 19200/- ರೂ. ವಿಮೆ ಕಟ್ಟಬೇಕಾಗಿರುತ್ತದೆ. ಇದರಲ್ಲಿ ರೈತರಿಂದ1 ಹೆಕ್ಟೇರಿಗೆ 6400 ರೂ. ವಿಮೆ ಕಂತು ಕಟ್ಟಿಸಲಾಗುತ್ತದೆ. ಉಳಿದ ಕಂತನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಮೆ ಕಂತುತುಂಬಬೇಕಾಗುತ್ತದೆ. ತಾಲೂಕಿನಲ್ಲಿ ಈ ಬಾರಿ ಅತಿವೃಷ್ಟಿ ಪ್ರದೇಶ ಎಂದು ಈಗಾಗಲೇ ಸರ್ಕಾರ ಘೋಷಿಸಿದೆ. ಈ ಬಾರಿ 140 ಕ್ಕೂ ಹೆಚ್ಚು ಇಂಚು ಮಳೆ ದಾಖಲೆ ಪ್ರಮಾಣದಲ್ಲಾಗಿದೆ. ತೋಟಗಾರಿಕಾ ಬೆಳೆಗಳು ಅತಿವೃಷ್ಟಿಯಿಂದಾಗಿ ಸಂಪೂರ್ಣ ಹಾಳಾಗಿವೆ. ಅಡಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಕೊಳೆ ರೋಗ ತಗುಲಿ ಬೆಳೆ ಸಂಪೂರ್ಣ ನಾಶವಾಗಿ ರೈತರಿಗೆ ಬೆಳೆ ಕೈಗೆ ಸಿಗದಂತಾಗಿದೆ.
ಭತ್ತ, ಅಡಕೆಸಹಿತ ತೋಟಗಾರಿಕಾ ಬೆಳೆಗೆ ನೀಡಲಾಗುವ ಬೆಳೆ ವಿಮೆ ಯೋಜನೆ ಪರಿಹಾರ ಮೊತ್ತದ ಹಂಚಿಕೆ ಕಾರ್ಯ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರುವರೆಗೂ ರೈತರ ಖಾತೆಗೆ ಜಮೆ ಮಾಡಲು ಕ್ರಮ ಕೈಗೊಳ್ಳದಿರುವುದು ಬೇಜವಾಬ್ದಾರಿತನ ತೋರಿಸುತ್ತದೆ. ಜೂ.1 ರಿಂದ ಮುಂದಿನ ಜೂನ್ ಕೊನೆಯವರೆಗೆ ಈ ವಿಮೆಯ ಅವ ಧಿ ಇದ್ದು ದಾಖಲೆ, ಹವಾಮಾನ ಆಧಾರಿತ ಪರಿಶೀಲನೆ, ಲೆಕ್ಕಾಚಾರಗಳೆಲ್ಲ ಸೆಪ್ಟೆಂಬರ್ ಒಳಗೆ ವಿಮೆ ಹಣ ರೈತರ ಖಾತೆಗೆ ಜಮೆಯಾಗುತ್ತಿತ್ತು. ಆದರೆ ಈ ಬಾರಿ ನವೆಂಬರ್ ಕಳೆದು ಡಿಸೆಂಬರ್ ತಿಂಗಳು ಬಂದರೂ
ರೈತರ ಖಾತೆಗೆ ಪರಿಹಾರ ಮೊತ್ತ ಜಮೆಯಾಗಿಲ್ಲ. ಈಗಾಗಲೇ ಮಲೆನಾಡು ಭಾಗದಲ್ಲಿ ರೈತರು ಅತಿವೃಷ್ಟಿಯಿಂದ ಹೈರಾಣಾಗಿದ್ದು, ಇದ್ದ ಅಲ್ಪಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳದೆ ಪರದಾಡುವಂತಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಫಸಲ್ ಬಿಮಾ ಯೋಜನೆಯಡಿ ವಿಮೆ ಕಟ್ಟಿದ ರೈತರಿಗೆ ವಿಮೆ ಹಣ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒತ್ತಾಯವಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರದಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ವಿಮೆ ಕಟ್ಟಿದ್ದುಆದರೆ ಇದುವರೆಗೂ ಬೆಳೆ ವಿಮೆ ನೀಡಲಾಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಹಾಗೂ ಕೋವಿಡ್ -19 ಹಿನ್ನೆಲೆಯಲ್ಲಿ ದೇಶ ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ವಿಮೆ ಜಮಾ ಮಾಡಲು ತೊಡಕುಂಟಾಗಿದೆ. ಮುಂದಿನ ದಿನಗಳಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
-ಶೋಭಾ ಕರಂದ್ಲಾಂಜೆ, ಸಂಸದೆ
ಕಳೆದ 2 ವರ್ಷದಿಂದ ಫಸಲ್ ಬಿಮಾ ಯೋಜನೆಯಡಿ ತಾಲೂಕಿನಲ್ಲಿ ರೈತರಿಗೆ ಬೆಳೆ ವಿಮೆ ಜಮೆ ಆಗಿತ್ತು. ಈ ಬಾರಿ ಇನ್ನೂ ಬಂದಿಲ್ಲ. ಈ ಬಗ್ಗೆ ಸಂಸದರ ಹಾಗೂ ಮಾಜಿ ಸಚಿವರ ಗಮನಕ್ಕೆ ತರಲಾಗಿದೆ.
– ಎ. ಸುರೇಶ್ಚಂದ್ರ, ಮ್ಯಾಮ್ಕೋಸ್ ನಿರ್ದೇಶಕರು