Advertisement

ನಿರ್ಣಾಯಕ ಹೋರಾಟ: ಭಾರೀ ಬೆಲೆ ತೆರಬೇಕಾಗುತ್ತದೆ: ರೈತರ ಎಚ್ಚರಿಕೆ

12:12 AM Dec 01, 2020 | mahesh |

ನವದೆಹಲಿ: “ನಾವು ಒಂದು ನಿರ್ಣಾಯಕ ಹೋರಾಟಕ್ಕಾಗಿಯೇ ದೆಹಲಿಗೆ ಬಂದಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ. ಪ್ರಧಾನಿ ಮೋದಿ ಅವರು ನಮ್ಮ “ಮನ್‌ ಕಿ ಬಾತ್‌’ ಅನ್ನು ಆಲಿಸ ಬೇಕು. ಇಲ್ಲದಿದ್ದರೆ, ಭಾರೀ ಬೆಲೆ ತೆರಬೇಕಾಗುತ್ತದೆ.’

Advertisement

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸತತ 5 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರ ಸರ್ಕಾರಕ್ಕೆ ಇಂಥದ್ದೊಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಸೋಮವಾರ ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಸಂಘಟನೆಗಳ ನಾಯಕರು, “ನಮ್ಮ ಪ್ರತಿಭಟನೆ ಹತ್ತಿಕ್ಕಲೆಂದು ಈವರೆಗೆ 31 ಕೇಸುಗಳನ್ನು ದಾಖಲಿಸ ಲಾಗಿದೆ. ಆದರೆ, ಇದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ದೆಹಲಿ ಪ್ರವೇಶಕ್ಕಿರುವ ಎಲ್ಲ ದಾರಿಗಳನ್ನೂ ಮುಚ್ಚುವುದಕ್ಕೂ ಮುನ್ನವೇ ಸರ್ಕಾರ ಮಾತುಕತೆಗೆ ಬರಲಿ. ಯಾವುದೇ ಷರತ್ತಿಲ್ಲದೆ ಮಾತುಕತೆ ನಡೆಸಲಿ’ ಎಂದು ಹೇಳಿದ್ದಾರೆ.

ಈ ನಡುವೆ, ಸೋಮವಾರ ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮಂಗಳವಾರ ಶಾ ಅವರು ರೈತರನ್ನು ಭೇಟಿಯಾಗುವ ಸಾಧ್ಯತೆಯಿದೆ.

ಸೋಂಕು ಹರಡುವ ಭೀತಿ: ಒಂದೇ ಸ್ಥಳದಲ್ಲಿ ಸಾವಿರಾರು ರೈತರು ಸೇರಿರುವ ಕಾರಣ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಿದ್ದು, ಪ್ರತಿಭಟನಾಕಾರ ರೈತರು ಸೋಂಕಿನ ಸೂಪರ್‌ಸ್ಪ್ರೆಡರ್‌ ಆಗಿ ಬದಲಾಗುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ದೆಹಲಿ ಚಲೋ ಪ್ರತಿಭಟನೆ ವೇಳೆ ಸಾಮಾಜಿಕ ಅಂತರವಿಲ್ಲದೇ ನೆರೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅನ್ನದಾತರು, “ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಕರಾಳ ಕಾನೂನುಗಳು ಕೊರೊನಾ ವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿ’ ಎಂದಿದ್ದಾರೆ.

ರೈತರನ್ನು ತಡೆಯಲು ಕಾಂಕ್ರೀಟ್‌ ತಡೆಗೋಡೆ
ದೆಹಲಿ-ಹರ್ಯಾಣ ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ದಿನಕಳೆದಂತೆ ಅನ್ನದಾತರಿಗೆ ಬೆಂಬಲ ಸೂಚಿಸಿ ಭಾರೀ ಸಂಖ್ಯೆಯ ಜನರು ಪ್ರತಿಭಟನೆಗೆ ಕೈಜೋಡಿಸುತ್ತಿದ್ದಾರೆ. ಹೀಗಾಗಿ, ಪೊಲೀಸರು ಭದ್ರತೆ ಹೆಚ್ಚಿಸುವ ಜೊತೆಗೆ ದೆಹಲಿ ಗಡಿಯಲ್ಲಿ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಿದ್ದಾರೆ.

Advertisement

ಎನ್‌ಡಿಎಯಿಂದ ಆರ್‌ಎಲ್‌ಪಿ ಹೊರಕ್ಕೆ?
ಕೃಷಿ ಕಾಯ್ದೆಯ ವಿಚಾರದಲ್ಲಿ ಎನ್‌ಡಿಎಯೊಳಗೇ ಭಿನ್ನಮತ ತೀವ್ರಗೊಳ್ಳುತ್ತಿದೆ. ಶಿರೋಮಣಿ ಅಕಾಲಿ ದಳದ ಬೆನ್ನಲ್ಲೇ ಈಗ ಎನ್‌ಡಿಎಯಿಂದ ಹೊರಬರಲು ಮತ್ತೂಂದು ಮಿತ್ರಪಕ್ಷ ಚಿಂತನೆ ನಡೆಸಿದೆ. ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್‌ ಪಡೆಯದೇ ಇದ್ದರೆ, ಎನ್‌ಡಿಎಗೆ ಗುಡ್‌ಬೈ ಹೇಳಬೇಕಾಗುತ್ತದೆ ಎಂದು ರಾಷ್ಟ್ರೀಯ ಲೋಕತಾಂತ್ರಿಕ್‌ ಪಾರ್ಟಿ(ಆರ್‌ಎಲ್‌ಪಿ) ಮುಖ್ಯಸ್ಥ ಹನುಮಾನ್‌ ಬೆನಿವಾಲ್‌ ಸೋಮವಾರ ಎಚ್ಚರಿಸಿದ್ದಾರೆ.

ಹೊಸ ಕೃಷಿ ಕಾಯ್ದೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಪಂಜಾಬ್‌ನ ರೈತರು ಕಳೆದ ಬಾರಿಗಿಂತ ಈ ಬಾರಿ ತಮ್ಮ ಭತ್ತವನ್ನು ಅತ್ಯಧಿಕ ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡಿದ್ದಾರೆ.
ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next