ಹಿರೇಕೆರೂರ: ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ರೈತರು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಈ ವರ್ಷ ಅತಿವೃಷ್ಟಿಯಿಂದ ಮೆಕ್ಕೆಜೋಳದ ಬೆಳೆ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಅಳಿದುಳಿದ ಬೆಳೆಗೆ ಬೆಲೆ ಇಲ್ಲದಂತಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 1830 ರೂ. ನಿಗದಿ ಮಾಡಿದ್ದು, ಖರೀದಿ ಕೇಂದ್ರವನ್ನು ಪ್ರಾರಂಭಿಸದೆ ಇರುವುದರಿಂದ ಬೆಲೆ ಕುಸಿತಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಶೇ.70 ರಷ್ಟು ರೈತರು ಮೆಕ್ಕೆಜೋಳ ಮಾರಾಟಮಾಡಿಲ್ಲ. ಇದರಿಂದ ರೈತರು ಆತಂಕಕಿಡಾಗಿದ್ದು, ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
2015-16ನೇ ಸಾಲಿನ ಬೆಳೆ ವಿಮೆಗೆ ಸಂಬಂಧಿಸಿದಂತೆ ಸರ್ಕಾರ ರೈತರಿಗೆ ನೀಡಬೇಕಾದ ಹಣ ಬ್ಯಾಂಕ್ ಖಾತೆಯಲ್ಲಿದೆ. ಇದನ್ನು ಅರ್ಹ ರೈತರ ಖಾತೆಗೆ ಜಮೆ ಮಾಡಬೇಕು. ಕಳೆದ ವರ್ಷ ಮಳೆಯಿಂದ ಬೆಳೆ, ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಪರಿಹಾರ ನೀಡಿಲ್ಲ. ಬೆಳೆಹಾನಿಯಾದ ರೈತರಿಗೆ ಬೆಳೆನಷ್ಟ ಪರಿಹಾರ ನೀಡಬೇಕು ಹಾಗೂ ಬೆಳೆ ಪರಿಹಾರದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಕೆಲವು ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದು, ಅಂತಹ ಅಧಿಕಾರಿಗಳಗೆ ಕಾನೂನು ಕ್ರಮ ಜರುಗಿಸಬೇಕು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸಮರ್ಪಕವಾಗಿ ಎಲ್ಲ ರೈತರ ಖಾತೆಗಳಿಗೆ ಜಮೆ ಮಾಡಿಲ್ಲ. ಶೇ.30ರಷ್ಟು ರೈತರು ಅವಕಾಶ ವಂಚಿತರಾಗಿದ್ದಾರೆ. ಕೊಡಲೇ ಕಿಸಾನ್ ಸಮ್ಮಾನ್ ಯೋಜನೆಯನ್ನು ತಕ್ಷಣ ರೈತರ ಖಾತೆಗೆ ಜಮೆ ಮಾಡಬೇಕು. 2019-20ರ ಬೆಳೆ ವಿಮಾ ತುಂಬಿದ ರೈತರಿಗೆ ಜಿಲ್ಲೆಯಲ್ಲಿ 59 ಕೋಟಿ ರೂ. ಮಂಜೂರಾಗಿದೆ. ಆದರೆ, ಈ ವರೆಗೂ ರೈತರ ಖಾತೆಗೆ ಹಣ ಜಮೆ ಮಾಡಿಲ್ಲ. ಕೊಡಲೆ ಬೆಳೆ ವಿಮೆ ಜಮಾ ಮಾಡಬೇಕು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಶಂಕ್ರಪ್ಪ ಶಿರಗಂಬಿ, ಶಂಭಣ್ಣ ಮುತ್ತಿಗಿ, ವಿರನಗೌಡ ಬಾಳಬೀಡ, ಲೋಕಪ್ಪ ಹುಲ್ಲತ್ತಿ, ಮೌನೇಶ ನರಸಪುರ, ಮಲ್ಲನಗೌಡ ಮಾಳಗಿ, ಈರಪ್ಪ ಮಳ್ಳುರು ಪುಟ್ಟಯ್ಯ ಮಳಲಿಮಠ, ಹನುಮಂತಪ್ಪ ಜೋಗೇರ, ವೀರುಪಾಕ್ಷಪ್ಪ ಎಸ್., ಕರಿಬಸಪ್ಪ ಬುಳ್ಳಜ್ಜಿ, ಲೋಕಪ್ಪ ಮುಚ್ಚಡಿ, ಮಲ್ಲೇಶಪ್ಪ ಶಿರಗಂಬಿ, ಮಹೇಂದ್ರಪ್ಪ ತಳವಾರ, ಕರಿಬಸಪ್ಪ ಬಣಕಾರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.