ರಾಣಿಬೆನ್ನೂರ: ಬೆಳ್ಳುಳ್ಳಿ ಬೆಲೆ ದಿಢೀರನೆ ಕುಸಿದ ಕಾರಣ ಆಕ್ರೋಶಗೊಂಡ ರೈತರು, ಇಲ್ಲಿನ ಎಪಿಎಂಸಿ ನೆಹರು ಮಾರುಕಟ್ಟೆಯಲ್ಲಿ ರವಿವಾರ ಬೆಳ್ಳುಳ್ಳಿ ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಟಾರ ಮಾತನಾಡಿ, ನೆರೆಹಾವಳಿಯಿಂದ ತಾಲೂಕಿನ ರೈತರು ಸಾಕಷ್ಟು ಹಾನಿ ಅನುಭವಿಸಿ ಅಳಿದುಳಿದ ಬೆಳ್ಳುಳ್ಳಿ ಮಾರಿ ಬದುಕು ಕಟ್ಟಿಕೊಳ್ಳುತ್ತಿದ್ದ ಅನ್ನದಾತನಿಗೆ ಬೆಳ್ಳುಳ್ಳಿ ಬೆಲೆ ಇಳಿಸಿ ಗಾಯದ ಮೇಲೆ ಬರೆ ಎಳೆದಿದ್ದಾರೆ. ಪರಿಸ್ಥಿತಿ ಹೀಗಾದರೆ ರೈತ ಬದುಕುವುದಾದರೂ ಹೇಗೆ? ಕಷ್ಟದಲ್ಲಿರುವ ಅನ್ನದಾತನ ಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ದಲಾಲರ ಕುಮ್ಮಕ್ಕಿನಿಂದ ವ್ಯಾಪಾರಸ್ಥರು ಬೆಳಗಾವಿ, ಬೈಲಹೊಂಗಲ್, ಬಾಗಲಕೋಟೆ ಸೇರಿದಂತೆ ಹೊರಗಡೆಯಿಂದ ಇಲ್ಲಿನ ಎಪಿಎಂಸಿ ನೆಹರು ಮಾರುಕಟ್ಟೆಗೆ ಬೆಳ್ಳುಳ್ಳಿ ಆವಕ ಮಾಡಿಕೊಂಡು ದಿಢೀರನೆ ಬೆಲೆ ಕುಸಿತ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಕಳೆದ ವಾರ ಮಾರುಕಟ್ಟೆಯಲ್ಲಿ 8.5 ಸಾವಿರ ರೂ. ವರೆಗೆ ಇದ್ದ ಬೆಲೆ ಇಂದು 6.5 ಸಾವಿರಕ್ಕೆ ಕುಸಿದಿದೆ. ಅದೂ ಸಹ ಸ್ಥಳೀಯ ರೈತರ ಬೆಳ್ಳುಳ್ಳಿಯನ್ನುಖರೀದಿದಾರರು ಬೇಡಿಕೆ ಇಲ್ಲದಾಗ ರೈತರು ಪ್ರತಿಭಟನೆಗೆ ಮುಂದಾಗಬೇಕಾಯಿತು. ಯಾವುದೇ ಕಾರಣಕ್ಕೂ ಬೆರೆಡೆಯಿಂದ ದಲಾಲರು ಮಾರುಕಟ್ಟೆಗೆ ಬೆಳ್ಳುಳ್ಳಿ ತರಲು ಮುಂದಾಗಬಾರದು ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಕಳಸದ, ಮಾಜಿ ಅಧ್ಯಕ್ಷ ಬಸವರಾಜ ಸವಣೂರ, ಸದಸ್ಯ ಬಸವರಾಜ ಹುಲ್ಲತ್ತಿ, ರಮೇಶ ಲಮಾಣಿ, ಎಪಿಎಂಸಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಎ.ಕೆ, ಪರಮೇಶ್ವರ ನಾಯಕ, ಮಂಜುನಾಥ ಎನ್. ರೈತರು ಮತ್ತು ದಲಾಲರ ನಡುವೆ ಸಂಧಾನ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲು ಸಫಲರಾದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ಬೀರೇಶ ಬುಳ್ಳಪ್ಪನವರ, ಪರುಶುರಾಮ ಹಲವಾಗಲ, ಗಣೇಶ ಬುಳ್ಳಪ್ಪನವರ, ನಾಗಪ್ಪ ಗೌಡ್ರ, ಗುಡ್ಡಪ್ಪ ಬಾತಪ್ಪನವರ ಸೇರಿದಂತೆ ನೂರಾರು ರೈರತರು ಪ್ರತಿಭಟನೆಯಲ್ಲಿ ಇದ್ದರು.