Advertisement
ಕೇಂದ್ರ ಸರಕಾರದ ಕಂಪೆನಿ ವ್ಯವಹಾರಗಳ ಮಂತ್ರಾಲಯದ ಪ್ರಕಾರ ನಮ್ಮ ದೇಶದಲ್ಲಿ ಸ್ಥಾಪನೆಯಾಗಿರುವ ರೈತ ಉತ್ಪಾದಕರ ಕಂಪೆನಿಗಳ ಸಂಖ್ಯೆ 5,000ಕ್ಕಿಂತ ಜಾಸ್ತಿ. ಇವು ಮಧ್ಯವರ್ತಿಗಳ ಪಾತ್ರ ವಹಿಸುತ್ತಿದ್ದು, ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರ ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿವೆ. ಯಾಕೆಂದರೆ, ಇವು ಸದಸ್ಯ ರೈತರಿಂದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿ ಮಾರುತ್ತವೆ. ಈ ಕಂಪೆನಿಗಳಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹ ದೊಡ್ಡ ಪರಿಮಾಣದಲ್ಲಿ ಇರುವ ಕಾರಣ ಇವು ಚೌಕಾಸಿ ಮಾಡಿ, ಹೆಚ್ಚಿನ ಬೆಲೆಗೆ ಮಾರಿ, ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತಿದೆ. ಈ ಲಾಭವೆಲ್ಲ ನೇರವಾಗಿ ಸದಸ್ಯ ರೈತರಿಗೇ ಸಿಗುತ್ತದೆ. ಯಾಕೆಂದರೆ, ಅವರೇ ಕಂಪೆನಿಯ ಮಾಲೀಕರು ಮತ್ತು ಅವರೇ ಅದನ್ನು ನಿರ್ವಹಿಸುತ್ತಾರೆ.
Related Articles
Advertisement
ಮಧ್ಯಪ್ರದೇಶದ ಮಂಡ್ಲಾ ಬುಡಕಟ್ಟು ರೈತ ಉತ್ಪಾದಕರ ಕಂಪೆನಿಯೂ ಅಲ್ಲಿನ 29 ಜಿಲ್ಲೆಗಳ ರೈತರಿಗೆ ಸಹಾಯ ಮಾಡುತ್ತಿದೆ. ಅದು ಅತ್ಯಂತ ಹಿಂದುಳಿದ ಪ್ರದೇಶ. ಮಂಡ್ಲಾದ ರೈತ ಸುನಿಲ್ ಪಟೇಲ್ ಬೇಸಾಯ ಮಾಡಿ ಬದುಕುವುದು ಕಷ್ಟವೆಂದು, ಬೇಸಾಯ ತೊರೆದು, ದಿನಗೂಲಿಗೆ ದುಡಿಯ ತೊಡಗಿದ್ದರು. ಆದರೆ, 2012ರಿಂದೀಚೆಗೆ ಭೋಪಾಲದ ಆಕÏನ್ ಫಾರ್ ಸೋಷಿಯಲ್ ಅಡ್ವಾನ್ಸ್-ಮೆಂಟ್ ಎಂಬ ಲಾಭ-ರಹಿತ ಸಂಸ್ಥೆ ಮಂಡ್ಲಾದ ರೈತರಿಗೆ ನೆರವು ನೀಡಲು ಮುಂದಾಯಿತು. 2015ರಲ್ಲಿ ಆ ಸಂಸ್ಥೆ ಪ್ರವರ್ತಿಸಿದ ರೈತ ಉತ್ಪಾದಕರ ಕಂಪೆನಿಗೆ ಸದಸ್ಯರಾಗಿ ಸೇರಿದ ಪಟೇಲ್ ಪುನಃ ಬೇಸಾಯದಲ್ಲಿ ತೊಡಗಿದರು. 2017ರಲ್ಲಿ ಅವರು ತನ್ನ ಒಂದು ಹೆಕ್ಟೇರ್ ಜಮೀನಿನಲ್ಲಿ ಬೆಳೆದ ಆರು ಟನ್ ಭತ್ತದ ಬೀಜವನ್ನು ಮಾರಾಟ ಮಾಡಿ, ರೂ.90,000 ಗಳಿಸಿದರು. 460 ರೈತ-ಸದಸ್ಯರೊಂದಿಗೆ ಆರಂಭಿಸಲಾದ ಈ ಕಂಪೆನಿಯಲ್ಲೀಗ ಇರುವ ರೈತ-ಸದಸ್ಯರ ಸಂಖ್ಯೆ 1,160.
ತಮಿಳುನಾಡಿನ ಈರೋಡಿನಲ್ಲಿ ರೈತ ಉತ್ಪಾದಕರ ಕಂಪೆನಿ ಅರಿಶಿನ ಕೃಷಿಕರ ಅಸೋಸಿಯೇಷನ್ ಅನ್ನು 2014ರಲ್ಲಿ ಆರಂಭಿಸಲಾಯಿತು. ನಂತರ 200 ರೈತ-ಸದಸ್ಯರಿಂದ ಅರಿಶಿನ ಸಂಗ್ರಹಿಸಿದ ಈ ಕಂಪೆನಿ, ಅಲ್ಲಿನ ಮಾರುಕಟ್ಟೆಯಲ್ಲಿ ಅರಿಶಿನದ ಬೆಲೆ ನಿರ್ಧರಿಸಲಿಕ್ಕೂ ಸಮರ್ಥವಾಯಿತು. ಗುಜರಾತಿನಲ್ಲಿ 135 ಮೀನುಗಾರರು ಒಟ್ಟು ಸೇರಿ 2013ರಲ್ಲಿ ಸ್ಥಾಪಿಸಿದ ಉತ್ಪಾದಕರ ಕಂಪೆನಿ, ತನ್ನ ಮೊದಲ ವರುಷದಲ್ಲೇ ಆದಾಯವನ್ನು ಇಮ್ಮಡಿಗೊಳಿಸಲು ಸಾಧ್ಯವಾಯಿತು. ದೇಶದ ಉದ್ದಗಲದಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲವೆಂದು ಕೃಷಿಕರು ಕೈಚೆಲ್ಲುತ್ತಿರುವಾಗ, ಈ ರೈತ ಉತ್ಪಾದಕರ ಕಂಪೆನಿಗಳ ಸಾಧನೆಗಳು ಆಶಾಕಿರಣವಾಗಿವೆ.
2001ರಲ್ಲಿ ರೈತ ಉತ್ಪಾದಕರ ಕಂಪೆನಿಗಳ ಪರಿಕಲ್ಪನೆ ನೀಡಿದವರು ಅಮುಲ್ ಸ್ಥಾಪಕರಾದ ಡಾ. ವರ್ಗೀಸ್ ಕುರಿಯನ್. ಇವುಗಳಿಗೆ ಪ್ರತ್ಯೇಕ ಕಾಯಿದೆ ಅಗತ್ಯವೆಂದು ಅವರು ಪ್ರತಿಪಾದಿಸಿದರು. 2002ರಲ್ಲಿ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ರೈತ ಉತ್ಪಾದಕರ ಕಂಪೆನಿಗಳ ಕಾಯಿದೆ ಜಾರಿಯಾಯಿತು. ಈ ಕಂಪೆನಿಗಳಿಗಾಗಿ ಮಾರ್ಗದರ್ಶಿ ನಿಯಮಗಳನ್ನು 2003ರಲ್ಲಿ ರೂಪಿಸಲಾಯಿತು. ಅದರ ಅನುಸಾರ, ಈ ಎಲ್ಲ ಕಂಪೆನಿಗಳನ್ನು ಕಂಪೆನಿ ವ್ಯವಹಾರಗಳ ಮಂತ್ರಾಲಯದಲ್ಲಿ ನೋಂದಾಯಿಸಬೇಕು.
ಈ ಕಾಯಿದೆ 2002ರಲ್ಲಿ ಜ್ಯಾರಿಯಾದರೂ, ಇದರ ಚಲಾವಣೆಗೆ ಬಿರುಸು ಬಂದದ್ದು ಹತ್ತು ವರುಷಗಳ ನಂತರ ಎನ್ನುತ್ತಾರೆ ಸಣ್ಣ ರೈತರ ಕೃಷಿಉದ್ಯಮ ಒಕ್ಕೂಟದ (ಎಸ್.ಎಫ್.ಎ.ಸಿ.) ರಾಖೇಶ್ ಶುಕ್ಲಾ. ಇದು ಕೇಂದ್ರ ಕೃಷಿ ಮತ್ತು ಕೃಷಿಕರ ಕಲ್ಯಾಣ ಮಂತ್ರಾಲಯ ಪ್ರವರ್ತಿಸಿರುವ ನೋಂದಾಯಿತ ಸೊಸೈಟಿ. 2011-12ರಲ್ಲಿ ಕೇವಲ ಏಳು ರೈತ ಉತ್ಪಾದಕರ ಕಂಪೆನಿಗಳು ಸ್ಥಾಪನೆಯಾಗಿದ್ದರೆ,2017-18ರಲ್ಲಿ ಸ್ಥಾಪನೆಯಾದ ಕಂಪೆನಿಗಳ ಸಂಖ್ಯೆ807ಕ್ಕೆ ಏರಿತು.
ಸಣ್ಣ ಮತ್ತು ಅತಿಸಣ್ಣ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮೀಣ ಸಹಕಾರಿ ಸಂಘಗಳು ಪರಿಣಾಮಕಾರಿಯಾಗಿಲ್ಲ. ಅದರಿಂದಾಗಿ, ಅವರು ರೈತ ಉತ್ಪಾದಕರ ಕಂಪೆನಿಗಳ ಸದಸ್ಯರಾಗುತ್ತಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಸಹಕಾರಿ ಸಂಘಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2000 2001ರಲ್ಲಿ 1,50,000 ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿದ್ದರೆ, 2014-15ರಲ್ಲಿ ಅವುಗಳ ಸಂಖ್ಯ 93,000ಕ್ಕಿಂತ ಕಡಿಮೆಯಾಗಿದೆ. ಕೆಲವೇ ಕೆಲವು ಜಮೀನಾªರರು ಅಥವಾ ರಾಜಕೀಯ ಧುರೀಣರು ತಮ್ಮ ಹಿತಾಸಕ್ತಿಗಳಿಗಾಗಿ ಸಹಕಾರ ಸಂಘಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದೂ ಸಣ್ಣ ಮತ್ತು ಅತಿಸಣ್ಣ ರೈತರು ಅವುಗಳಿಂದ ದೂರ ಸರಿಯಲು ಕಾರಣ.
ಜಾಗತೀಕರಣದ ಬೀಸಿನಲ್ಲಿ ಭಾರತದ ಕೃಷಿರಂಗ ತತ್ತರಿಸುತ್ತಿರುವಾಗ, ಅಸಹಾಯಕ ರೈತರಿಗೆ ಒತ್ತಾಸೆಯಾಗಿ ರೈತ ಉತ್ಪಾದಕರ ಕಂಪೆನಿಗಳು ಬೆಳೆದು ಬರುತ್ತಿರುವುದು ಆಶಾದಾಯಕ ಬೆಳವಣಿಗೆ.
– ಅಡೂxರು ಕೃಷ್ಣ ರಾವ್