ಸಿರುಗುಪ್ಪ: ತಾಲೂಕಿನಲ್ಲಿ ಈ ಬಾರಿ ಬಂಪರ್ ಭತ್ತದ ಬೆಳೆ ಬಂದಿದ್ದು, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ತುಂಗಭದ್ರಾ ಜಲಾಶಯದ ಎಲ್ ಎಲ್‌ಸಿ ಕಾಲುವೆಯ ಕೆಲ ರೈತರು ಭತ್ತ ಕಟಾವು ಮಾಡಿಸಿ ಒಂದು ಎಕರೆಗೆ 40 ರಿಂದ 45 ಚೀಲ (70ಕೆಜಿ) ಇಳುವರಿ ಬಂದಿದೆ.
ಈಗಾಗಲೇ ಎಲ್ ಎಲ್‌ಸಿ ಕಾಲುವೆ ಮತ್ತು ಪಂಪ್‌ಸೆಟ್ ಮೂಲಕ ಬೆಳೆದ ಭತ್ತದ ಶೇ. 25ರಷ್ಟು ಭತ್ತದ ಕಟಾವು ಮುಕ್ತಾಯವಾಗಿದೆ. ಈಗಾಗಲೆ ಭತ್ತವನ್ನು ರೈತರು ಮಾರುಕಟ್ಟೆಗೆ ತರುತ್ತಿದ್ದು, 70 ಕೆಜಿ ಚೀಲಕ್ಕೆ ಮೊದಲು ರೂ. 1800 ಇದ್ದ ದರ ಪ್ರಸ್ತುತ ರೂ. 1605ಕ್ಕೆ ಕುಸಿತ ಕಂಡಿದೆ. ಇನ್ನೂ ಶೇ. 75ರಷ್ಟು ಭತ್ತ ಕಟಾವು ಮಾಡುವುದು ಬಾಕಿ ಇದ್ದು, ಬಹುತೇಕ ರೈತರು ಮುಂದಿನ ವಾರದಲ್ಲಿ ಭತ್ತ ಕಟಾವು ಮಾಡಿ ಮಾರುಕಟ್ಟೆಗೆ ತರುವುದರಿಂದ ಮತ್ತಷ್ಟು ದರ ಕುಸಿಯುವ ಸಂಭವವಿದೆ.
ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರ ಭತ್ತಕ್ಕೆ (ಎ. ಗ್ರೇಡ್ 100 ಕೆಜಿ) ಕ್ವಿಂಟಲ್‌ಗೆ ರೂ. 1885, ಸಾಮಾನ್ಯ ಭತ್ತಕ್ಕೆ ರೂ. 1865 ಬೆಂಬಲ ದರ ಘೋಷಣೆ ಮಾಡಿತ್ತು. ಕಳೆದ ತಿಂಗಳು ಗಂಗಾಕಾವೇರಿ ರೂ. 1750, ಆರ್‌ಎನ್ ಆರ್ ಭತ್ತಕ್ಕೆ ರೂ. 1850ರಿಂದ ರೂ. 1900ರ ವರೆಗೆ ಮಾರಾಟವಾಗಿತ್ತು. ಆದರೆ ಸ್ಥಳಿಯ ಮಾರುಕಟ್ಟೆಯಲ್ಲಿ 75 ಕೆಜಿ, ಗಂಗಾ ಕಾವೇರಿ ರೂ. 1650, ಆರ್‌ಎನ್‌ಆರ್ ಭತ್ತಕ್ಕೆ ರೂ. 1650 ದರ ನಿಗದಿಯಾಗಿದ್ದರೂ ಭತ್ತ ಕೊಳ್ಳಲು ವ್ಯಾಪಾರಿಗಳು ಮುಂದೆ ಬಾರದೆ ಇರುವುದರಿಂದ ರೈತರು ಕಟಾವು ಮಾಡಿದ ಭತ್ತವನ್ನು ಹೊಲ ಮತ್ತು ಎಪಿಎಂಸಿ ಆವರಣದಲ್ಲಿ ರಾಶಿ ಹಾಕಿಕೊಳ್ಳುತ್ತಿದ್ದಾರೆ.
ಸದ್ಯ ಶೇ. 25ರಷ್ಟು ರೈತರು ಭತ್ತ ಕಟಾವು ಮಾಡಿ ಮಾರಾಟ ಮಾಡುತ್ತಿದ್ದು ಪ್ರಸ್ತುತ ಇರುವ ದರ ಮುಂಬರುವ ದಿನಗಳಲ್ಲಿ ಇರುವುದು ಖಚಿತವಿಲ್ಲ. ಹಿಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿಲ್ಲ. ಇದರಿಂದಾಗಿ ಭತ್ತದ ದರವು ಇನ್ನಷ್ಟು ಕುಸಿಯುವುದೆಂಬ ಆತಂಕ ಈ ಭಾಗದ ರೈತರನ್ನು ಕಾಡುತ್ತಿದೆ. ಆದ್ದರಿಂದ ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಭತ್ತಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುವುದರೊಂದಿಗೆ ತಾಲೂಕಿನ ಕರೂರು, ಸಿರಿಗೇರಿ, ಹಚ್ಚೊಳ್ಳಿ ಮತ್ತು ತೆಕ್ಕಲಕೋಟೆಯಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಆರ್.ಬಸವರೆಡ್ಡಿ ಕರೂರು