ಲಕ್ಷ್ಮ್ಯೇಶ್ವರ: ತಾಲೂಕಿನ ಬಡ್ನಿ ಹಳ್ಳಕ್ಕೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿದ್ದ ಬಾಂದಾರ ನೀರಿನ ರಭಸಕ್ಕೆ ಕಿತ್ತು ಪಕ್ಕದ ಜಮೀನುಗಳನ್ನು ಕೊಚ್ಚಿಕೊಂಡು ಹೋಗಿವೆ. ಇದರಿಂದ ರೈತರು ಇರುವ ಅಲ್ಪಸ್ವಲ್ಪ ಜಮೀನು ಕಳೆದುಕೊಂಡು ಕಂಗಾಲಾಗಿದ್ದಾರೆ.
ಪ್ರತಿವರ್ಷ ಮಳೆಗಾಲದಲ್ಲಿ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದ ಸಂದರ್ಭದಲ್ಲಿ ಜಮೀನುಗಳಿಗೆ ನೀರು ನುಗ್ಗಿ ಜಮೀನು ಕೊಚ್ಚಿಕೊಂಡು ಹೋಗುತ್ತಿದೆ. ಇದಕ್ಕೆ ಪರಿಹಾರ ನೀಡಬೇಕು ಎಂದು ಗುರುವಾರ ಬಡ್ನಿ ಗ್ರಾಮದ ಅನೇಕ ರೈತರಾದ ಹಸನಸಾಬ ಯಳವತ್ತಿ, ಚಾಂದಸಾಬ ಯಳವತ್ತಿ, ಗಂಗಮ್ಮ ಬಾಡಗಿ, ತಿರಕಪ್ಪ ಕಡಕೋಳ, ಮಾಲಿಂಗಪ್ಪ ಕಡಕೋಳ, ಶಂಭವ್ವ ಮೇಟಿ, ಷಣ್ಮುಕಪ್ಪ ಮಡಿವಾಳರ ಮತ್ತಿತರರು ಸಂಬಂಧಪಟ್ಟ ಇಲಾಖೆಯವರಿಗೆ ಒಕ್ಕೂರಲಿನ ಮನವಿ ಮಾಡಿದ್ದಾರೆ.
ಪತ್ರಿಕೆಗೆ ಮಾಹಿತಿ ನೀಡಿದ ರೈತ ಹಸನಸಾಬ ಯಳವತ್ತಿ, ಜಮೀನಿಗೆ ಹೊಂದಿಕೊಂಡಿರುವ ಬಾಂದಾರ ಕಿತ್ತು ಕಳೆದ 3 ವರ್ಷದಿಂದ ನೀರು ಜಮೀನಿಗೆ ನುಗ್ಗುತ್ತಿದೆ. ಕಳೆದ 3 ವರ್ಷಗಳಿಂದಲೂ ಜಮೀನುಗಳ ಧಕ್ಕೆಯಾಗುತ್ತಿದ್ದು ಇರುವ ಅಲ್ಪಸ್ವಲ್ಪ ಜಮೀನು ಸಹ ಬಾಂದಾರಕ್ಕೆ ಬಲಿಯಾಗುತ್ತಿದೆ. ಕಳೆದ 5 ದಿನಗಳ ಹಿಂದೆಯಷ್ಟೇ ಹರಿದ ಹಳ್ಳದಿಂದ ಜಮೀನು ಮತ್ತಷ್ಟು ಕೊಚ್ಚಿ ಆಳವಾದ ಕಂದಕ ಬಿದ್ದಿದೆ. ಹಾಳಾಗುತ್ತಿರುವ ನಮ್ಮ ಜಮೀನು ರಕ್ಷಣೆ ಮಾಡಿಕೊಡಿ ಎಂದು ಅನೇಕ ಬಾರಿ ವಿನಂತಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
2015-16 ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ಗೊಜನೂರ- ಅಕ್ಕಿಗುಂದ-ಬಟ್ಟೂರ, ಪುಟಗಾಂವ್ ಬಡ್ನಿ ಮಾರ್ಗವಾಗಿ ಸಂಕದಾಳ ವರೆಗಿನ 12 ಕಿ.ಮೀ. ಉದ್ದದ ಹಳ್ಳಕ್ಕೆ 18 ಸರಣಿ ಬಾಂದಾರ ನಿರ್ಮಿಸಲಾಗಿದೆ. ಈ ಕಾಮಗಾರಿಯನ್ನು ಬೆಂಗಳೂರಿನ ಅಮೃತಾ ಕನóಕ್ಷನ್ ಅವರು ಗುತ್ತಿಗೆ ಪಡೆದಿದ್ದರು. ಈಗ ಗುತ್ತಿಗೆದಾರರ ನಿರ್ವಹಣಾ ಅವಧಿಯೂ ಮುಗಿದಿರುವುದರಿಂದ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ಹಾಳಾಗಿರುವ ಬಾಂದಾರಗಳ ದುರಸ್ಥಿಗೆ ಅನುದಾನವೂ ಇಲ್ಲದ್ದರಿಂದ ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ ಎಂದರು.
ಬಾಂದಾರಗಳ ನಿರ್ಮಾಣದಿಂದ ಸಾಕಷ್ಟು ಅನಕೂಲವಾದೀತು ಎಂದು ನಂಬಿದ್ದ ರೈತರಿಗೆ ಈಗ ಬಾಂದಾರಗಳಿಂದಲೇ ತೊಂದರೆ ಆಗುತ್ತಿದೆ. ಇದು ಕೇವಲ ಒಬ್ಬಿಬ್ಬ ರೈತರ ಗೋಳಾಗಿರದೇ ಈ ಹಳ್ಳದುದ್ದಕ್ಕೂ ಕಟ್ಟಿರುವ ಬಾಂದಾರಗಳಿಗೆ ಎರಡೂ ಕಡೆ ರಕ್ಷಣಾ ಗೋಡೆ ನಿರ್ಮಿಸದ್ದರಿಂದ ರೈತ ಪಾಲಿಗೆ ವರವಾಗುವ ಬದಲು ಶಾಪವಾಗುತ್ತಿವೆ ಎಂದು ತಿಳಿಸಿದರು.