ಬೆಂಗಳೂರು: ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 16,730 ರೂ. ಬೆಂಬಲ ಬೆಲೆ ನೀಡುವಂತೆ ಹಾಗೂ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಜು.19ರಂದು ಫ್ರೀಡಂ ಪಾರ್ಕ್‌ನಲ್ಲಿ ತೆಂಗು ಬೆಳೆಗಾರರಿಂದ “ವಿಧಾನಸೌಧ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಜಿ.ಸಿ.ಬಯ್ನಾರೆಡ್ಡಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 6.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದ್ದು, ವಾರ್ಷಿಕ 2.18 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಉತ್ಪಾದನೆಯಾಗುತ್ತದೆ. ಮೊದಲು ಕ್ವಿಂಟಾಲ್ ಕೊಬ್ಬರಿಗೆ 16ರಿಂದ 18 ಸಾವಿರ ರೂ.ಗಳ ವರೆಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಕ್ವಿಂಟಾಲ್ ಕೊಬ್ಬರಿ ಬೆಲೆಯೂ ಕೇವಲ 6ರಿಂದ 7 ಸಾವಿರಕ್ಕೆ ಕುಸಿದಿದೆ.
ಇದರಿಂದಾಗಿ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಕೇಂದ್ರ ಸರಕಾರದ ತಪ್ಪು ಆಮದು ನೀತಿ ಮತ್ತು ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಇಂದು ರಾಜ್ಯದ ತೆಂಗು ಬೆಳೆಗಾರರು ಅತ್ಯಂತ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊರ ದೇಶಗಳಿಂದ ತೆಂಗು, ಕೊಬ್ಬರಿ, ತೆಂಗಿನ ಉಪ ಉತ್ಪನ್ನಗಳು ಹಾಗೂ ಪಾಮಾಯಿಲ್ ನಮ್ಮ ದೇಶಕ್ಕೆ ಲಗ್ಗೆ ಇಟ್ಟಿದ್ದು, ಇದರ ಪರಿಣಾಮವಾಗಿ ಸ್ಥಳೀಯ ತೆಂಗು ಬೆಳೆಗಾರರಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಕೇಂದ್ರ ಸರಕಾರ ಇಂಥ ತಪ್ಪು ಆಮದು ನೀತಿಗಳನ್ನು ಕೈಬಿಟ್ಟು ನಮ್ಮ ರೈತರ ನೆರವಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಎನ್. ವೆಂಕಟಾಚಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಉಪಸ್ಥಿತರಿದ್ದರು.