Advertisement

ಕೃಷಿಕರ ಪಾಲಿನ ಆಪತ್ಬಾಂಧವ ಹಲಸು: ಕೆ.ಎನ್‌. ಕೃಷ್ಣ ಭಟ್‌

08:31 PM Jun 08, 2019 | mahesh |

ಬದಿಯಡ್ಕ: ಕೃಷಿಕರ ಪಾಲಿನ ಆಪತ್ಬಾಂಧವನಾದ ಹಲಸು ಇಂದು ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. ಹಲಸು ಇಂದು ರಾಜ್ಯದಲ್ಲಿ ಶ್ರೇಷ್ಠ ಸ್ಥಾನವನ್ನು ಅಲಂಕರಿಸಿದ ಕಲ್ಪವೃಕ್ಷವಾಗಿದೆ. ಒಂದು ಕಾಲದಲ್ಲಿ ಬಡವರ ಪಾಲಿನ ಆಹಾರವಾದ ಹಲಸು ಇಂದು ಶ್ರೀಮಂತ ಸ್ಥಾನದಲ್ಲಿ ನೆಲೆನಿಂತಿದೆ. 33 ಕೋಟಿ ದೇವತೆಗಳ ಆವಾಸ ಸ್ಥಾನವಾದ ಗೋಮಾತೆಗೆ ಮೇವನ್ನು ನೀಡುವ ಸಲುವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮವು ಪುಣ್ಯಪ್ರದವಾದ ಕೆಲಸವಾಗಿದೆ ಮತ್ತು ಇಂತಹ ಕಾರ್ಯಕ್ರಮಗಳು ಔಚಿತ್ಯಪೂರ್ಣವಾಗಿವೆ ಎಂದು ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಹೇಳಿದರು.

Advertisement

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ಬಜಕೂಡ್ಲು ಅಮೃತ ಧಾರಾ ಗೋಶಾಲೆಯ ಗೋವುಗಳ ಮೇವಿನ ಉದ್ದೇಶದಿಂದ ಮುಳ್ಳೇರಿಯ ಹವ್ಯಕ ಮಂಡಲದ ಶಿಷ್ಯವೃಂದದವರ ನೇತೃತ್ವದಲ್ಲಿ, ಗೋ ಭಕ್ತರ ಹಾಗೂ ಬದಿಯಡ್ಕ ಮಹಿಳ್ಳೋದಯದ ಸಹಕಾರದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ “ಹಲಸು ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲಸು ಮೇಳ ಸ್ಫೂರ್ತಿ
ಶ್ರೀ ರಾಮಚಂದ್ರಾಪುರ ಮಠದ ಗೋಕರ್ಣ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪ್ರತಿಯೊಂದು ಹಲಸು ಮೇಳಗಳು ನಮಗೆ ಸ್ಫೂರ್ತಿದಾಯಕವಾಗಿದೆ. ಪ್ರಕೃತಿಯಲ್ಲಿ ನಮಗೆ ಪೂರಕವಾದ ಅಂಶಗಳು ಪ್ರಕೃತಿದತ್ತವಾಗಿ ನಿರ್ಮಾಣವಾಗಿದ್ದರೂ ನಾವು ಅದನ್ನು ಗಮನಿಸು ವುದಿಲ್ಲ. ಪ್ರತಿಯೊಂದು ವಸ್ತುವು ಪ್ರತಿಯೊಂದು ಜೀವಿಗೂ ಪರಸ್ಪರ ಪೂರಕವಾಗಿ ಆಹಾರ ರೂಪದಲ್ಲಿ ಹಾಗೂ ವಸ್ತುರೂಪದಲ್ಲಿ ನಮಗೆ ಒದಗಿಬರುತ್ತಿದೆ. ಈಗಾಗಲೇ ಹಲಸು ಕೇರಳ ರಾಜ್ಯದ ಫಲ ವೆಂದು ಅಂಗೀಕಾರವಾಗಿದೆ. ಹಲಸಿನಲ್ಲಿ ನಿರುಪಯುಕ್ತ ವಸ್ತುವೆಂಬುದಿಲ್ಲ. ಗೋವಿಗಾಗಿ ಹಮ್ಮಿಕೊಂಡ ಕಾರ್ಯಕ್ರಮವಿದಾಗಿದ್ದು ಹಲಸಿನ ಮೌಲ್ಯವರ್ಧನೆಗೆ ಕಾರಣವಾಗಿದೆ. ಹಲಸಿನ ಒಂದು ಕರೆಗೆ ಎಲ್ಲೆಡೆ ಒಂದು ತಿಂಗಳ ಕಾಲ ಹಲಸಿನ ಹಪ್ಪಳದ ಸಪ್ಪಳ ಕೇಳಿಬಂದಿದೆ. ಇದು ಇತರರಿಗೂ ಸ್ಫೂರ್ತಿಯಾಗಿ ಹಲಸಿನ ಸದ್ದು ಎಲ್ಲೆಡೆ ಮೊಳಗಲಿ, ಗೋಮಾತೆಯ ಚರಣಾರವಿಂದಕ್ಕೆ ಈ ಹಲಸು ಮೇಳ ಸಮರ್ಪಣೆಯಾಗಲಿ ಎಂದರು.

ವೇದಿಕೆಯಲ್ಲಿ ಮುಳ್ಳೇರಿಯ ಹವ್ಯಕ ಮಂಡಲ ದಿಗªರ್ಶಕ ಬಿ.ಜಿ. ರಾಮ ಭಟ್‌ ಗೋಳಿತ್ತಡ್ಕ, ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ| ಶ್ರೀಕೃಷ್ಣ ಭಟ್‌, ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ, ಡಾ| ವೈ.ವಿ. ಕೃಷ್ಣಮೂರ್ತಿ, ಕುಸುಮಾ ಪೆರ್ಮುಖ, ಜಯಪ್ರಕಾಶ ಪಜಿಲ, ಕಾಸರಗೋಡು ಸಿಪಿಸಿಆರ್‌ಐಯ ವಿಜ್ಞಾನಿ ಡಾ| ಸರಿತಾ ಹೆಗ್ಡೆ, ವೆಂಕಟಕೃಷ್ಣ ಶರ್ಮ ಮುಳಿಯ ಉಪಸ್ಥಿತರಿದ್ದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.  ಹಲಸು ಮೇಳದ ಅಧ್ಯಕ್ಷ ಶಿವಪ್ರಸಾದ ವರ್ಮುಡಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಗಳನ್ನಾಡಿದರು. ಪೆರಡಾಲ ವಲಯ ಅಧ್ಯಕ್ಷ ಹರಿಪ್ರಸಾದ ಪೆರ್ಮುಖ ವಂದಿಸಿದರು.  ಶಂಕರ ಪ್ರಸಾದ ಕುಂಚಿನಡ್ಕ, ಗುರುಮೂರ್ತಿ ನಾಯ್ಕಪು, ಚಂದ್ರಶೇಖರ ಏತಡ್ಕ, ಸತ್ಯ ನಾರಾಯಣ ಶರ್ಮ ಪಂಜಿತ್ತಡ್ಕ, ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಶಿಷ್ಯವೃಂದದವರೆಲ್ಲ ಜತೆಗೂಡಿ ಗುರುವಂದನೆಯೊಂದಿಗೆ ಶ್ರೀ ಗುರುಗಳಿಗೆ ಚರಣ ಕಾಣಿಕೆಯನ್ನು ಸಮರ್ಪಿಸಿದರು.

ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವಿನ ಮೇವಿಗಾಗಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಹಮ್ಮಿಕೊಂಡ ಹಲಸು ಮೇಳದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಗ್ರಾಮೀಣ ಹಲಸಿನ ತಿಂಡಿ ತಿನಿಸುಗಳನ್ನು ಸೇವಿಸಿ ಮೆಚ್ಚುಗೆಯನ್ನು ಸೂಚಿಸಿದರು.

Advertisement

ರುಚಿರುಚಿ ಖಾದ್ಯಗಳು ಅಚ್ಚುಕಟ್ಟಾದ ವ್ಯವಸ್ಥೆಯ ಮೂಲಕ ಸಂಘಟಕರು ಕಾರ್ಯಕ್ರಮವನ್ನು ರೂಪು ಗೊಳಿಸಿದ್ದರೂ ಏಕಕಾಲದಲ್ಲಿ ಜನರ ಆಗಮನದಿಂದ ಎಲ್ಲೆಡೆ ಜನ ತುಂಬಿ ತುಳುಕುತ್ತಿದ್ದುದು ಕಂಡುಬರುತ್ತಿತ್ತು. ತಮ್ಮ ಅಗತ್ಯದ ವಸ್ತುಗಳ ಖರೀದಿಗೆ ಹರಸಾಹಸ ಪಡಬೇಕಾಗಿ ಬಂದಿತ್ತು. ಮೇಳದ ವಿವಿಧ ಸ್ಟಾಲ್‌ಗ‌ಳಲ್ಲಿ ಹಲಸಿನ ಕಾಯಿ ದೋಸೆ, ಹಣ್ಣಿನ ದೋಸೆ, ಹಣ್ಣಿನ ಕೊಟ್ಟಿಗೆ, ಗೆಣಸಲೆ, ಹಣ್ಣು ಹಾಗೂ ಕಾಯಿಯ ಗುಳಿ ಅಪ್ಪ, ಸೇವಿಗೆ, ಹಲಸಿನ ಇಡ್ಲಿ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹಲ್ವ, ಬೀಜದ ಹಲ್ವ, ಉಂಡ್ಲಕಾಳು, ಚಿಪ್ಸ್‌, ಹಪ್ಪಳಗಳು, ಕಾಯಿಸೊಳೆ, ಹಣ್ಣಿನ ಸೊಳೆ, ಹಲಸಿನ ಹಣ್ಣಿನ ಡ್ರೈ ಸೊಳೆ, ಹಲಸಿನ ಹಣ್ಣಿನ ಕೇಕ್‌, ಹಲಸಿನ ಬೀಜದ ಬಿಸ್ಕತ್ತು, ವಡೆ, ಹಲಸಿನ ಸೊಳೆಯ ರೊಟ್ಟಿ, ಹಲಸಿನ ಹಣ್ಣಿನ ಜ್ಯೂಸ್‌, ಹಲಸಿನ ಹಣ್ಣಿನ ಜೆಲ್ಲಿ ಜಾಮ್‌, ಹಲಸಿನ ಕೇಕ್‌, ಹಲಸಿನ ಬೀಜದ ಪಾಯಸ, ಪೆರಟಿ ಪಾಯಸ, ಜೆರಡಿ ಪಾಯಸ, ಹಣ್ಣಿನ ಪಾಯಸ, ಕಾಯಿ ಚಿಪ್ಸ್‌, ಬೀಜದ ರಸಂ ಪುಡಿ, ಹಲಸಿನ ಐಸ್‌ ಕ್ರೀಂ, ಐಸ್‌ ಕ್ಯಾಂಡಿಗಳು, ಹಲಸಿನ ಗುಜ್ಜೆ ಮಂಚೂರಿ, ಗುಜ್ಜೆ ಕಬಾಬ್‌ ವಿವಿಧ ನಮೂನೆಯ ಸಮೋಸಗಳು, ಗುಜ್ಜೆ ಪಲಾವು ಅಲ್ಲದೆ ಇನ್ನೂ ಹಲವು ರೀತಿಯ ಹಲಸಿನ ವಿವಿಧ ರೀತಿಯ ತಿಂಡಿ ತಿನಿಸುಗಳು, ಉತ್ಪನ್ನಗಳನ್ನು ಮೇಳದಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಆಗಮಿಸಿದ ಅತಿಥಿಗಳಿಗೆ ಹಲಸಿನ ಬೀಜದ ಕಷಾಯವನ್ನು ಪಾನೀಯವಾಗಿ ನೀಡಲಾಗಿತ್ತು. ವಿವಿಧ ಜಾತಿಯ ಹಲಸಿನ ಗಿಡಗಳನ್ನು ಅನೇಕರು ಖರೀದಿಸಿದರು.

ಹಲಸಿನ ಕ್ಯಾಂಡಿ, ಐಸ್‌ ಕ್ರೀಂ
ಬದಿಯಡ್ಕ ಮಹಿಳ್ಳೋದಯದ ಸ್ಟಾಲ್‌ ಹೆಚ್ಚು ಜನಾಕರ್ಷಣೆಯ ಕೇಂದ್ರವಾಗಿತ್ತು. ಹಲಸಿನ ಕ್ಯಾಂಡಿ, ಐಸ್‌ ಕ್ರೀಂ ಸವಿದು ಜನ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಸಮಸ್ತ ಗೋ ಭಕ್ತರು ಒಂದುಗೂಡಿ ಕಾರ್ಯಕ್ರಮದ ಯಶಸ್ಸಿಗೆ ದುಡಿದಿದ್ದರು.

ವೇದಿಕೆಯಲ್ಲಿ….
ಹಲಸಿನ ಕಾಯಿ ಹಾಗೂ ಹಲಸಿನ ಉತ್ಪನ್ನಗಳಿಂದ ರಚಿಸಿದ ಚಿತ್ರಣಗಳು ವೇದಿಕೆಯಲ್ಲಿ ಗಮನ ಸೆಳೆದವು.
ಗೋಮಾತೆಗಾಗಿ ಹಪ್ಪಳ ಸಮರ್ಪಣೆ ನಡೆಯಿತು.
ಹಪ್ಪಳ ಖರೀದಿಯನ್ನು ನಿವೃತ್ತ ಸಬ್‌ ರಿಜಿಸ್ಟ್ರಾರ್‌ ಮುಹಮ್ಮದಾಲಿ ಪೆರ್ಲ ನಿರ್ವಹಿಸಿದರು.
ವೇದಿಕೆಯಲ್ಲಿ ಹಲಸಿನ ಕಾಯಿ ಯಿಂದ ನಿರ್ಮಿಸಲಾದ “ಶಿವಲಿಂಗ’ದ ಪ್ರತಿ ರೂಪ ಜನರನ್ನು ತನ್ನತ್ತ ಆಕರ್ಷಿಸಿತು.
 ಬೆಳಗ್ಗೆ 11 ಗಂಟೆಯ ವೇಳೆಗೆ 2,000 ಮಂದಿ ನೋಂದಣಿ ಮಾಡಿದ್ದರು.
ಸಿಪಿಸಿಆರ್‌ಐಯ ವಿಜ್ಞಾನಿ ಡಾ| ಸರಿತಾ ಹೆಗ್ಡೆ ಹಾಗೂ ವೆಂಕಟಕೃಷ್ಣ ಶರ್ಮ ಮುಳಿಯ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಹಲಸು ಸಂಸ್ಕೃತಿಯ ಅವಿಭಾಜ್ಯ ಅಂಗ
ಮನುಷ್ಯ-ಗೋವು-ಹಲಸು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆೆ. ಮನೆ ಕಟ್ಟುವ ಮೊದಲ ಹಂತದಲ್ಲಿ ಹಲಸಿನ ತುಂಡನ್ನು ನಾವು ಉಪಯೋಗಿಸುತ್ತೇವೆ. ಮನೆ ಕಟ್ಟಿದ ಅನಂತರವೂ ಮನೆಯ ಮುಂಭಾಗದಲ್ಲಿ ಹಲಸು ಇರುವುದು ಸರ್ವಸಾಮಾನ್ಯವಾಗಿದೆ. ನಶಿಸಿ ಹೋಗುವ ಸಂಪ್ರದಾಯಕ್ಕೆ ಹೊಸ ಮೆರುಗನ್ನು ನೀಡಿ ಹವ್ಯಕ ಸಮುದಾಯದ ನೇತೃತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವು ಶ್ಲಾಘನೀಯವಾಗಿದೆ. ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿಯೂ ಹಲಸಿನ ಹಣ್ಣನ್ನು ಎಲ್ಲರೂ ಉಪಯೋಗಿಸುವಂತಾಗಬೇಕು. ಹಲಸಿನ ಪುನಶ್ಚೇತನಕ್ಕೆ ಈ ಕಾರ್ಯಕ್ರಮವು ಕಾರಣವಾಗಲಿ.
-ಮುಹಮ್ಮದಾಲಿ ಪೆರ್ಲ, ನಿವೃತ್ತ ಸಬ್‌ ರಿಜಿಸ್ಟ್ರಾರ್‌

Advertisement

Udayavani is now on Telegram. Click here to join our channel and stay updated with the latest news.

Next