Advertisement

ಶೇಂಗಾ ಬಿತ್ತನೆ ಬೀಜಕ್ಕೆ ರೈತರ ಪರದಾಟ

10:20 AM Jun 25, 2019 | Team Udayavani |

ನಾಯಕನಹಟ್ಟಿ: ತಳಕು ಹೋಬಳಿಯಲ್ಲಿ ಭಾನುವಾರ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಸೋಮವಾರ ತಳಕು ರೈತ ಸಂಪರ್ಕ ಕೇಂದ್ರಕ್ಕೆ ಧಾವಿಸಿದರು. ಆದರೆ ಅಲ್ಲಿ ಬಿತ್ತನೆ ಶೇಂಗಾ ದೊರೆಯದ ಕಾರಣ ಕೃಷಿ ಅಧಿಕಾರಿ ಜೊತೆಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ.

Advertisement

ರೈತ ಸಂಪರ್ಕ ಕೇಂದ್ರದಲ್ಲಿ ಒಂದೆಡೆ ಲಾರಿ ಲೋಡ್‌ ಬಂದಿಲ್ಲವೆಂಬ ನಾಮಫಲಕ ಇದ್ದರೆ, ಮತ್ತೂಂದೆಡೆ ಶೇಂಗಾ ದಾಸ್ತಾನು ಇಲ್ಲ, ಶೇಂಗಾ ವಿತರಣೆ ಹಾಗೂ ಟೋಕನ್‌ ವಿತರಣೆ ಮಾಡಲಾಗುವುದಿಲ್ಲ ಎಂದು ನಾಮಫಲಕ ಹಾಕಲಾಗಿದೆ. ಇದರಿಂದ ರೈತರು ಪರದಾಡುವಂತಾಗಿದೆ. ಅಧಿಕಾರಿಗಳು ಒಂದೆರಡು ದಿನಗಳಲ್ಲಿ ಒಂದು ಲೋಡ್‌ ಬಿತ್ತನೆ ಶೇಂಗಾ ದೊರೆಯಲಿದೆ ಎಂದು ಭರವಸೆ ನೀಡಿದರಾದರೂ ಈ ಉತ್ತರ ರೈತರಿಗೆ ಸಮಾಧಾನ ತರಲಿಲ್ಲ.

ನೂರಾರು ಕ್ವಿಂಟಲ್ ಶೇಂಗಾಕಾಯಿಗೆ ಬೇಡಿಕೆ ಇದೆ. ಕೇವಲ ಒಂದು ಲೋಡ್‌ ಏತಕ್ಕೂ ಸಾಲದು. ತಕ್ಷಣ ಬಿತ್ತನೆ ಶೇಂಗಾವನ್ನು ವಿತರಣೆ ಮಾಡಬೇಕು. ಈಗಾಗಲೇ ಶೇಂಗಾ ವಿತರಿಸುವ ಪಂಚಾಯತ್‌ವಾರು ಪಟ್ಟಿಯನ್ನು ಹಾಕಲಾಗಿದೆ. ಸೋಮವಾರ ಮೂರು ಗ್ರಾಪಂಗಳಿಗೆ ವಿತರಣೆ ಮಾಡಬೇಕಾಗಿತ್ತು. ಆದರೆ ಶೇಂಗಾ ವಿತರಣೆಗೆ ಬದಲಾಗಿ ನೋ ಸ್ಟಾಕ್‌ ಬೋರ್ಡ್‌ ಹಾಕಲಾಗಿದೆ ಎಂದು ರೈತರು ಆರೋಪಿಸಿದರು.

ರೈತರ ಅಹವಾಲು ಆಲಿಸಿದ ಕೃಷಿ ಅಧಿಕಾರಿ ಗಿರೀಶ್‌ ಮಾತನಾಡಿ, ಇಲಾಖೆಯಿಂದ ಬಿತ್ತನೆ ಬೀಜ ಸರಬರಾಜಾಗಿಲ್ಲ. ಹೀಗಾಗಿ ವಿತರಣೆ ತಡವಾಗಿದೆ. ಮಂಗಳವಾರ ತಳಕು ಹಾಗೂ ಪರಶುರಾಮಪುರ ರೈತ ಸಂಪರ್ಕ ಕೇಂದ್ರಗಳಿಗೆ ತಲಾ ಒಂದು ಲೋಡ್‌ ಬಿತ್ತನೆ ಶೇಂಗಾ ಬೀಜ ಬರುವ ನಿರೀಕ್ಷೆಯಿದೆ. ರೈತರು ಕಡ್ಡಾಯವಾಗಿ ಪ್ರೂಟ್ಸ್‌ ತಂತ್ರಾಂಶದಲ್ಲಿ ಲಿಂಕ್‌ ಮಾಡಬೇಕಾಗಿದೆ. ಇದಕ್ಕಾಗಿ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು. ಒಂದೆರಡು ದಿನಗಳಲ್ಲಿ ಶೇಂಗಾ ಬಿತ್ತನೆ ಬೀಜ ವಿತರಿಸುತ್ತೇವೆಂಬ ಭರವಸೆ ದೊರೆತಿದ್ದರಿಂದ ರೈತರು ಗ್ರಾಮಗಳಿಗೆ ಹಿಂದಿರುಗಿದರು.

Advertisement

Udayavani is now on Telegram. Click here to join our channel and stay updated with the latest news.

Next