ಶಿರಸಿ: ಜ.26 ರಂದು ರೈತ ಮತ್ತು ಕಾರ್ಮಿಕರ ಗಣರಾಜ್ಯೋತ್ಸವ ಪರೇಡ್ ನಡೆಸುವ ಮೂಲಕ ಪ್ರಮುಖ ಐದು ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಂಡಿಸಲಾಗುವುದು ಎಂದು ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದರು.
ಅವರು ಶುಕ್ರವಾರ ಸ್ಥಳೀಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ರೈತ ಗಣರಾಜ್ಯೋತ್ಸವ ಪರೇಡ್‌ನ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರವು ತರಲು ಉದ್ದೇಶಿಸಿದ ಎಪಿಎಂಸಿ ರದ್ದತಿ ಕಾಯ್ದೆ, ಆಹಾರ ಸರಕುಗಳ ದಾಸ್ತಾನು ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳು, ರೈತ ವಿರೋಧಿ ನೀತಿಯಿಂದ ರೈತರ ಸಂಪನ್ಮೂಲ ಮತ್ತು ಜೀವನದ ಭದ್ರತೆಗೆ ಮಾರಕವಾಗಿದ್ದು, ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು.
ಇದನ್ನೂ ಓದಿ:ಹವಾಮಾನ ವೈಪರೀತ್ಯ ಕೃಷಿಗೆ ತೊಂದರೆ
ವಿವಿಧ ಸಂಘಟನೆ ಭೂಮಿ ಹಕ್ಕು ಹೋರಾಟಗಾರ ಪ್ರಮುಖರಾದ ನಗರ ಅಧ್ಯಕ್ಷ ಪ್ರದೀಪ ಶೆಟ್ಟಿ ಗಣೇಶ ನಗರ, ಎಂ.ಆರ್. ನಾಯ್ಕ ಕಂಡ್ರಾಜಿ, ನೆಹರು ನಾಯ್ಕ ಬೀಳೂರು, ಮೋಹನ ನಾಯ್ಕ ಅಂಡಗಿ, ಕರಿಯಾ ಗೌಡ ಬಂಕನಾಳ, ಬಾಷಾಸಾಬ ಬಂಕನಾಳ, ಧರ್ಮೇಂದ್ರ ನಾಯ್ಕ ಕಂಡ್ರಾಜಿ, ನಾರಾಯಣ ನಾಯ್ಕ, ಹುಮ್ಮುಡಿ, ಭೀಮಣ್ಣ ಕಲ್ಕಡಿ, ಎಂ.ಕೆ ನಾಯ್ಕ ಕಂಡ್ರಾಜಿ, ಶ್ರೀಧರ ನಾಯ್ಕ ಕಂಡ್ರಾಜಿ, ಮುಂತಾದವರು ಉಪಸ್ಥಿತರಿದ್ದರು. ತಾಲೂಕಾಧ್ಯಕ್ಷ ಲಕ್ಷ್ಮಣ ಮಾಲಕ್ಕನವರ್ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರ-ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ರೈತ ಮತ್ತು ಕಾರ್ಮಿಕರ ಕಾಯ್ದೆಗಳನ್ನು ತಕ್ಷಣ ಸ್ಥಗಿತಗೊಳಿಸುವುದು, ರೈತರಿಗೆ ವೈಜ್ಞಾನಿಕ ಮತ್ತು ಲಾಭದಾಯಕ ಬೆಲೆ ನಿಗದಿಗೊಳಿಸುವುದು, ಕಂದಾಯ ಅರಣ್ಯ ಭೂಮಿ ಸಕ್ರಮ ಗೊಳಿಸುವುದು, ಬರ ಮತ್ತು ನೆರೆ ಪೀಡಿತ ಪ್ರದೇಶಕ್ಕೆ ಹೆಚ್ಚಿನ ಪರಿಹಾರ ಒದಗಿಸುವುದು ಹಾಗೂ ಕಾರ್ಮಿಕರಿಗೆ ಭದ್ರತೆ ಒದಗಿಸುವುದು ಮುಂತಾದ ಬೇಡಿಕೆಗಳಿಗೆ ರೈತರು ಗಣರಾಜ್ಯೋತ್ಸವದ ದಿನ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ರವೀಂದ್ರ ನಾಯ್ಕ ಹೇಳಿದರು.