Advertisement

ರೈತನ ಕೈಹಿಡಿದ ತಾಳೆ ಕೃಷಿ

10:26 AM Mar 09, 2020 | mahesh |

ಗ್ರಾಮೀಣ ಪ್ರದೇಶದ ರೈತರು ಆಧುನಿಕತೆಯೊಂದಿಗೆ ವೈಜ್ಞಾನಿಕ ಮಾದರಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಅತೀ ಕಡಿಮೆ ಭೂಮಿ ಇರುವ ಕೃಷಿಕರು ದೊಡ್ಡ ಸಾಧನೆಯನ್ನು ಮಾಡುವ ಹುಮ್ಮಸ್ಸಿನಲ್ಲಿರುತ್ತಾರೆ. ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ಪಾಳು ಬಿದ್ದ ಭೂಮಿಯಲ್ಲಿ ಕೃಷಿ ಮಾಡಿ ಸೈ ಎನಿಸಿಕೊಂಡವರೂ ನಮ್ಮ ನಡುವೆ ಇದ್ದಾರೆ. ಇಂಥವರ ಪೈಕಿ ಬಡಗನ್ನೂರು ಗ್ರಾಮದ ಅನಿಲೆ ನಿವಾಸಿ ಸಂಜೀವ ಮಡಿವಾಳರೂ ಒಬ್ಬರು. ಇವರು ಗುಡ್ಡದಲ್ಲಿ ಎಣ್ಣೆ ತಾಳೆ ಗಿಡವನ್ನು ಬೆಳೆಸಿ ಸೈ ಎನಿಸಿಕೊಂಡಿದ್ದಾರೆ.

Advertisement

ಜಿಲ್ಲೆಯಲ್ಲಿದ್ದಾರೆ ನೂರಾರು ಕೃಷಿಕರು
ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಲ್ಲಲ್ಲಿ ತಾಳೆ ಗಿಡವನ್ನು ಬೆಳೆಸುತ್ತಿದ್ದಾರೆ. ತಾಳೆ ಕೃಷಿಯಿಂದ ಉತ್ತಮ ಲಾಭವಿರುವುದೇ ಇದಕ್ಕೆ ಕಾರಣವಾಗಿದೆ. ಅಡಕೆ ಕೃಷಿಗೆ ರೋಗ ಬಾಧೆ ಉಂಟಾಗುವ ವೇಳೆ ಔಷಧಿ ಸಿಂಪಡಣೆ ಮಾಡಬೇಕಾಗುತ್ತದೆ. ತಾಳೆ ಮರಕ್ಕೆ ಗೊಬ್ಬರ ನೀರು ಹಾಕಿದರೆ, ಬೇರೆ ಯಾವ ಖರ್ಚು ಇರುವುದಿಲ್ಲ. ಈ ಕಾರಣಕ್ಕೆ ಅಡಕೆ ಮರಕ್ಕೆ ಬೇಕಾಗುವಷ್ಟು ಖರ್ಚು ತಾಳೆ ಮರಕ್ಕೆ ಬೇಕಾಗಿಲ್ಲ. ಒಂದು ತಾಳೆ ಮರದಿಂದ ಒಂದು ವರ್ಷಕ್ಕೆ 2ರಿಂದ 3 ಸಾವಿರ ಆದಾಯ ಬರುತ್ತದೆ.

80 ಗಿಡಗಳ ನಾಟಿ
ಸಂಜೀವ ಮಡಿವಾಳರು ತನ್ನ ಒಂದೂವರೆ ಎಕ್ರೆ ಪಾಳು ಭೂಮಿಯಲ್ಲಿ 80 ಗಿಡಗಳನ್ನು 6 ವರ್ಷದ ಹಿಂದೆ ನಾಟಿ ಮಾಡಿದ್ದಾರೆ. ಎಲ್ಲ ಗಿಡದಲ್ಲೂ ಹತ್ತೇ ತಿಂಗಳಿಗೆ ಕಾಯಿ ಬಿಟ್ಟಿದೆ. ಆದರೆ ಗಿಡಗಳ ಬೆಳವಣಿಗೆಯ ದೃಷ್ಟಿಯಿಂದ ಮೂರು ವರ್ಷ ಕಾಯಿ ಕೀಳುವಂತಿಲ್ಲ ಎಂಬ ಕಾರಣಕ್ಕೆ ಮೂರು ವರ್ಷ ಹೂ ಬಿಟ್ಟಾಗಲೇ ಅದನ್ನು ಕೀಳುತ್ತಿದ್ದರು. ಬಳಿಕ ಮೂರು ವರ್ಷಗಳ ಅನಂತರ ಮೊದಲ ಬೆಳೆಯಲ್ಲಿ 5 ಟನ್‌ ಕಾಯಿ ಪಡೆದು 60 ಸಾವಿರ ರೂ. ಆದಾಯ ಪಡೆದುಕೊಂಡಿದ್ದಾರೆ. ಒಂದು ಗಿಡದಿಂದ ಒಂದು ಸಾವಿರ ಆದಾಯ ಪಡೆದುಕೊಳ್ಳುವ ಮೂಲಕ ತಾಳೆ ಕೃಷಿಯಲ್ಲಿ ತೃಪ್ತಿಯನ್ನು ಕಂಡುಕೊಂಡಿದ್ದಾರೆ.

ಕೆ.ಜಿ.ಗೆ 11 ರೂ.
ಒಂದು ಕೆ.ಜಿ. ತಾಳೆ ಕಾಯಿಗೆ 11 ರೂ. ಗಳಂತೆ ಮಾರಾಟ ಮಾಡಿದ್ದಾರೆ. ಕಾಯಿ ಕೊಯ್ದರೆ ಸಾಕು ಅದನ್ನು ಖರೀದಿಸಲು ಮನೆ ಬಾಗಿಲಿಗೆ ಬರುತ್ತಾರೆ. ಗಿಡವನ್ನು ನಾಟಿ ಮಾಡಿದ ಬಳಿಕ ಅದಕ್ಕೆ ಬೇಕಾದ ಪ್ರಮಾಣದಲ್ಲಿ ಗೊಬ್ಬರ ಮತ್ತು ನೀರನ್ನು ಹಾಕಿದರೆ ಸಾಕಾಗುತ್ತದೆ. ಮರಗಳಿಗೆ ಯಾವುದೇ ರೋಗ ತಗಲುವುದಿಲ್ಲ, ಕೀಟ ಬಾಧೆಯಿಲ್ಲ. ಬಾವಲಿಗಳಿಂದ, ಇತರೆ ಹಕ್ಕಿಗಳಿಂದ ಯಾವುದೇ ಬಾಧೆಯೂ ಇಲ್ಲ. ಗಿಡ ನೆಟ್ಟು ಆರಂಭದಲ್ಲಿ ಹಂದಿಗಳ ಕಾಟ ಇದ್ದಲ್ಲಿ ಸಮಸ್ಯೆಯಾಗುತ್ತದೆ. ಮರ ಸಿಹಿಯಾಗಿರುವ ಕಾರಣ ಹಂದಿಗಳು ಮರವನ್ನು ಕೊರೆದು ತಿನ್ನುತ್ತದೆ ಎನ್ನುತ್ತಾರೆ ಕೃಷಿಕ ಸಂಜೀವರು.

ತಾಳೆಗಿದೆ ಉತ್ತಮ ಭವಿಷ್ಯ
ಪ್ರಥಮ ಬಾರಿಗೆ ಎಣ್ಣೆ ತಾಳೆ ಕೃಷಿ ಮಾಡುತ್ತಿದ್ದೇನೆ. ಇದರಿಂದ ನಷ್ಟವಾಗಿಲ್ಲ. ಒಂದು ಬಾರಿ ಕಾಯಿಯನ್ನು ಮಾರಾಟ ಮಾಡಿದ್ದೇನೆ. 60 ಸಾವಿರ ರೂ. ಆದಾಯ ಬಂದಿದೆ. ಮುಂದಿನ ದಿನಗಳಲ್ಲಿ ತಾಳೆ ಕೃಷಿಗೆ ಒಳ್ಳೆಯ ಭವಿಷ್ಯವಿದೆ ಎಂದರೆ ತಪ್ಪಾಗಲಾರದು. ಖಾಲಿ ಗುಡ್ಡವಿರುವಲ್ಲಿ ತಾಳೆ ಕೃಷಿ ದಾರಾಳವಾಗಿ ಮಾಡಬಹುದು.
– ಸಂಜೀವ ಮಡಿವಾಳ  ತಾಳೆ ಕೃಷಿಕರು

Advertisement

ದಿನೇಶ್‌ ಪೇರಾಲು

Advertisement

Udayavani is now on Telegram. Click here to join our channel and stay updated with the latest news.

Next