ಅಫಜಲಪುರ: ರೈತರು ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಲು ಅವರಿಗೆ ಕೃಷಿ ಕುರಿತಾದ ಹೆಚ್ಚಿನ ತಿಳಿವಳಿಕೆಯ ನೀಡುವುದರ ಮೂಲಕ ಹೆಚ್ಚಿನ ಸಾಲ ಸೌಲಭ್ಯ ಒದಗಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಅಫಜಲಪುರ, ಬಡದಾಳ, ಭೋಸಗಾ, ಜೇವರಗಿ, ಉಡಚಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 2021-22 ನೇ ಸಾಲಿನ ಹೊಸ ರೈತರಿಗೆ ಬಡ್ಡಿ ರಹಿತ ಸಾಲ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರು ಸಹಕಾರಿ ಸಂಘದಿಂದ ಪಡೆದ ಸಾಲವನ್ನು ಮರು ಪಾವತಿ ಮಾಡುವ ಮೂಲಕ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸಹಕರಿಸಬೇಕು. ಮೂಲತಃ ತಾವೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡಿದ್ದೇವೆ. ಹೀಗಾಗಿಯೇ ತಾವು ಮೂರು ಸಲ ಶಾಸಕರಾಗಿ ತಾಲೂಕಿನ ಜನತೆ ಸೇವೆ ಮಾಡುವ ಸೌಭಾಗ್ಯ ದೊರೆತಿದೆ ಎಂದು ಹೇಳಿದರು.
ರೈತರು ಸಾಲಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್ ಎದುರು ಗಿರಾಕಿಯಂತೆ ನಿಲ್ಲುವ ಬದಲು, ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲ ಮರು ಪಾವತಿ ಮಾಡುವ ಮೂಲಕ ಮಾಲೀಕನಂತೆ ಸಾಲ ಪಡೆಯುವ ವ್ಯವಸ್ಥೆ ಇದೆ. ರೈತರು ಮೂರು ಲಕ್ಷ ರೂ. ವರೆಗೂ ಬಡ್ಡಿ ರಹಿತ ಸಾಲ ಪಡೆದುಕೊಳ್ಳಲು ಸಂಘದೊಂದಿಗೆ ವಿಶ್ವಾಸಹೊಂದಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ರೈತರು ಸಹಕಾರಿ ಸಂಘಗಳಿಂದ ಹೆಚ್ಚಿನ ಸಾಲ ಪಡೆದು ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಬೇಕು. ಈ ನಿಟ್ಟಿನಲ್ಲಿ ಮಹಾಂತಗೌಡ ಪಾಟೀಲ ರೈತರ ಸೇವೆಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತಗೌಡ ಪಾಟೀಲ ಮಾತನಾಡಿ, ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ಪಾಟೀಲ ಕುಟುಂಬ ನಿರಂತರವಾಗಿ ಸೇವೆ ಸಲ್ಲಿಸುತ್ತ ಬಂದಿದೆ. ಹೀಗಾಗಿ ತಮ್ಮೆಲ್ಲರ ಆಶೀರ್ವಾದದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಳಿಕ ಕಡಿಮೆ ಸಮಯದಲ್ಲಿಯೇ 14 ಸಾವಿರ ಹೊಸ ರೈತರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.
ಮುಖಂಡರಾದ ಶರಣು ರೆಡ್ಡಿ, ಎಸ್. ಎಸ್.ಪಾಟೀಲ, ಶರಣು ಭಾಸಗಿ, ಮಹಾಂತೇಶ ಗುಣಾರಿ, ಸೋಮನಾಥ ನೂಲಾ, ಕಿಶೋರ ಪಾಟೀಲ, ನಾನಾಸಾಹೇಬಗೌಡ ಪಾಟೀಲ ಹಾಗೂ ಸಹಕಾರಿ ಸಂಘಗಳ ಸದಸ್ಯರು ಇದ್ದರು.