ಕುಮಾರಸ್ವಾಮಿ ಅತಿ ಕೀಳಾಗಿ, ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ದಿಢೀರ್ ರಸ್ತೆ ತಡೆ ನಡೆಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಕಳೆದ 4 ವರ್ಷದಿಂದ ಬಾಕಿ ಇರುವ ಕಬ್ಬಿನ ಬಾಕಿ ಪಾವತಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಗೂಂಡಾಗಳು ಎಂಬುದಾಗಿ ಕರೆದಿರುವುದು ಅತ್ಯಂತ ಖಂಡನೀಯ. ನ್ಯಾಯಯುತ ಬೇಡಿಕೆಗೆ ಒತ್ತಾಯಿಸಿ ಹೋರಾಟ ನಡೆಸುವಂತಹ ಅನ್ನದಾತರನ್ನೇ ಗುರುತರ ಸ್ಥಾನದಲ್ಲಿರುವವರು ಗೂಂಡಾಗಳು ಎಂದು ಕರೆಯುವುದು ಅವರ ಬೇಜವಾಬ್ದಾರಿತನ ತೋರಿಸುತ್ತದೆ. ರೈತರು ಮತ್ತು ಹೋರಾಟಗಾರರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಪ್ರತಿಭಟನಾಕಾರರು ತಾಕೀತು ಮಾಡಿದರು.
Related Articles
Advertisement
ಇದ್ದಕ್ಕಿದ್ದಂತೆ ನಾನು ಬೆಳಗಾವಿಗೆ ಬರುವುದೇ ಇಲ್ಲ. ರೈತರೇ ಮಂಗಳವಾರ ಬೆಂಗಳೂರಿಗೆ ಬರಬೇಕು ಎಂಬುದಾಗಿ ಹೇಳಿದ್ದರಿಂದ ಕುಪಿತಗೊಂಡ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ತಪ್ಪು ನಡೆದಿರಬಹುದು. ಅಂದ ಮಾತ್ರಕ್ಕೆ ಅವರನ್ನ ಗೂಂಡಾಗಳು, ಹೊಲದಲ್ಲಿ ಕೆಲಸ ಮಾಡದೇ ಇದ್ದವರು ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಪ್ರತಿಭಟನಾಕಾರರು, ಕುಮಾರಸ್ವಾಮಿ ಏನು ನೋಟಿನ ಪ್ರಿಂಟಿಂಗ್ ಮಿಷಿನ್ ಇಟ್ಟುಕೊಂಡಿದ್ದಾರಾ ಎಂದು ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣ ಪ್ರಶ್ನಿಸಿದ್ದಾರೆ. ರೈತರಿಗೆ ನೋಟಿನ ಮಿಷನ್ ಗೊತ್ತಿಲ್ಲ. ಅಂತದ್ದೇನಿದ್ದರೂ ರೇವಣ್ಣನಂತಹ ದೊಡ್ಡವರಿಗೆ ಗೊತ್ತು ಎಂದು ವ್ಯಂಗ್ಯವಾಡಿದರು.
ಕಬ್ಬು ಒಳಗೊಂಡಂತೆ ರೈತರ ಸಮಸ್ಯೆಗಳ ಬಗ್ಗೆ ಮಂಗಳವಾರ ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಪ್ರತಿ ಜಿಲ್ಲೆಯಿಂದ ರೈತ ಮುಖಂಡರನ್ನು ಆಹ್ವಾನಿಸಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ರೈತರಿಗೆ ಸಭೆಯ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲ. ಈ ಕ್ಷಣದವರೆಗೆ ಸಭೆಗೆ ಕರೆದೊಯ್ಯುವ ಬಗ್ಗೆ ತಿಳಿಸಿಲ್ಲ ಎನ್ನುವುದು ರೈತರ ಕಾಳಜಿ ತೋರಿಸುತ್ತದೆ ಎಂದು ದೂರಿದರು. ಜಿಲ್ಲಾಧಿಕಾರಿ ಇಲ್ಲವೇ ತಹಶೀಲ್ದಾರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದಪ್ಪ, ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಕರೆದೊಯ್ಯುವ ವಿಚಾರವಾಗಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸೂಕ್ತ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ, ಚಿಕ್ಕನಹಳ್ಳಿ ಮಲ್ಲೇಶಪ್ಪ, ಆವರಗೆರೆ ಬಸವರಾಜ್, ಹೊನ್ನೂರು ರಾಜಣ್ಣ, ಕಬ್ಬೂರು ಸಂತೋಷ್‌ಕುಮಾರ್, ಕರೇಕಟ್ಟೆ ಖಲೀಂ, ಮಲ್ಲೇನಹಳ್ಳಿ ಅಜ್ಜಯ್ಯ ಇತರರು ಇದ್ದರು.