Advertisement

ಶ್ರೀ ಸಿಮೆಂಟ್‌ ಕಾರ್ಯವೈಖರಿಗೆ ರೈತರ ಆಕ್ರೋಶ

12:37 PM Mar 31, 2022 | Team Udayavani |

ಸೇಡಂ: ತಾಲೂಕಿನ ಕೋಡ್ಲಾ-ಬೆನಕನಹಳ್ಳಿ ಸಮೀಪ ಕೆಲ ವರ್ಷಗಳ ಹಿಂದಷ್ಟೇ ಸ್ಥಾಪಿಸಲಾಗಿರುವ ಶ್ರೀ ಸಿಮೆಂಟ್‌ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಕಾರ್ಖಾನೆ ಆಡಳಿತ ಮಂಡಳಿ ಒಂದಾಗಿ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಶ್ರೀ ಸಿಮೆಂಟ್‌ ಕಾರ್ಖಾನೆಗೆ ಹೆಚ್ಚುವರಿ ಲೈಮ್‌ಸ್ಟೋನ್‌ (ಕಲ್ಲು ಗಣಿಗಾರಿಕೆ) ಪರವಾನಗಿ ನೀಡುವ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಶ್ರೀ ಸಿಮೆಂಟ್‌ ಕಂಪನಿಯಿಂದ ಜನಜೀವನದ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ರೈತರರು ಎಳೆಎಳೆಯಾಗಿ ಬಿಚ್ಚಿಟ್ಟರು.

ಶ್ರೀ ಸಿಮೆಂಟ್‌ ಕಾರ್ಖಾನೆ ಪರಿಸರದಲ್ಲಿ ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾಗಿದೆ. ನೀರು, ಗಾಳಿ ಕಲುಷಿತವಾಗುತ್ತಿದೆ. ಭಾರಿ ಪ್ರಮಾಣದ ರಾಸಾಯನಿಕ ಮಿಶ್ರಿತ ಧೂಳು ಹೊರಹಾಕಲಾಗುತ್ತಿದೆ. ಈ ವಾತಾವರಣದಿಂದ ಸುತ್ತಲಿನ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಇಷ್ಟೆ ಅಲ್ಲದೇ ಜಮೀನುಗಳು ಹಾಳಾಗಿದ್ದು, ಬೆಳೆ ನಾಶವಾಗಿವೆ. ಯಾವುದೇ ಕಾರಣಕ್ಕೂ ಹೆಚ್ಚುವರಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ರೈತರು ಎಚ್ಚರಿಸಿದರು.

ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ ನಾಮವಾರ ಹಾಗೂ ಕಾಂಗ್ರೆಸ್‌ ಮುಖಂಡ ಮುಕ್ರಂಖಾನ್‌ ನಡುವೆ ಮಾತಿನ ಚಕಮಕಿ ನಡೆಯಿತು. ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಜಮೀನು ಕಳೆದುಕೊಂಡವರಿಗೆ ಸರಿಯಾಗಿ ನೌಕರಿ ನೀಡಿಲ್ಲ. ನೀಡಿದವರಿಗೆ ಸರಿಯಾದ ಸಂಬಳವಿಲ್ಲ. ಸರೋಜಿನಿ ಮಹಿಷಿ ವರದಿ ಪ್ರಕಾರ ನೌಕರಿ ನೀಡದೇ ಕಾನೂನು ಪಾಲಿಸುತ್ತಿಲ್ಲ. ಸಿಎಸ್‌ಆರ್‌ ಅಡಿ ಸಣ್ಣಪುಣ್ಣ ಕೆಲಸ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಕಂಪನಿ ಬಗೆಹರಿಸುತ್ತಿಲ್ಲ ಎಂದು ದೂರಿದರು.

ಮುಖಂಡ ಮುಕ್ರಂಖಾನ್‌ ಮಾತನಾಡಿ, ಪರಿಸರ ಹಾನಿಯಾದರೂ ಸಹ ಮಾಲಿನ್ಯ ನಿಯಂತ್ರಣ ಮಂಡಳಿ ಎಂದೂ ಪರಿಶೀಲಿಸಿಲ್ಲ ಎಂದು ಆಪಾದಿಸಿದರು.

Advertisement

ಜೆಡಿಎಸ್‌ ಮುಖಂಡ ಬಾಲರಾಜ ಗುತ್ತೇದಾರ ಮಾತನಾಡಿ, ಶ್ರೀ ಸಿಮೆಂಟ್‌ ರೈತರ ಬಗ್ಗೆ ತಾರತಮ್ಯ ಧೋರಣೆ ಹೊಂದಿದೆ. ಕಾರ್ಖಾನೆಯಲ್ಲಿ 12 ಗಂಟೆ ಬದಲಾಗಿ 8 ಗಂಟೆ ನೌಕರಿ ಮಾಡಲು ಅವಕಾಶ ಕೊಡಬೇಕು. ಆರೋಗ್ಯ ಇಲಾಖೆ ವರದಿ ಪ್ರಕಾರ ಹೆಚ್ಚಿನ ಗಂಟಲು ಬೇನೆ, ಹೃದಯ ಸಂಬಂಧಿ ಕಾಯಿಲೆಗಳಿಂದ ಸೇಡಂನ ಹೆಚ್ಚು ಜನತೆ ಬಳಲುತ್ತಿದ್ದಾರೆ. ಇಲ್ಲಿನ ಸಿಮೆಂಟ್‌ ಕಾರ್ಖಾನೆಗಳಿಂದ ಪ್ರತಿನಿತ್ಯ ನೂರಾರು ಜನ ಅಸ್ತಮಾ, ಅಲರ್ಜಿ, ಹೃದಯರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಗೂ ಗೊತ್ತಿದೆ. ಕಾರ್ಖಾನೆ ಸ್ಥಾಪಿಸುವುದೇ ಆದಲ್ಲಿ ಹೊರದೇಶಗಳಲ್ಲಿ ಇರುವಂತೆ ಶೆಡ್‌ನ‌ಲ್ಲಿ ಕಾರ್ಖಾನೆ ನಡೆಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸತೀಶರೆಡ್ಡಿ ಪಾಟೀಲ ರಂಜೋಳ, ಬಸವರಾಜ ಪಾಟೀಲ ಬೆನಕನಹಳ್ಳಿ, ಬಲವಂತರೆಡ್ಡಿ ಮತ್ತಿತರರು ತಮ್ಮ ಸಲಹೆ ನೀಡಿದರು. ಜಿಲ್ಲಾಧಿಕಾರಿ ಯಶವಂತ ಗುರಿಕಾರ ಮಾತನಾಡಿ, ಸರೋಜಿನಿ ಮಹಿಷಿ ವರದಿ ಪ್ರಕಾರ ನೌಕರಿ ನೀಡಬೇಕು. ಜಾಬ್‌ಕಾರ್ಡ್‌ ವಾಪಸ್‌ ಕೊಟ್ಟರೆ ಕಠಿಣ ಕ್ರಮ ಕೈಗೊಳ್ಳುವೆ. ಕಂಪನಿ ಕೊಡುವ ಪಿಪಿಟಿ ನೋಡಿ ಬಕ್ರಾ ಆಗೋದಿಲ್ಲ. ಪ್ರತಿಯೊಬ್ಬರ ದೂರು, ಕರಾರುಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ನೋಡಿ ಕ್ರಮ ಕೈಗೊಳ್ಳುವೆ ಎಂದರು.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರಾಧಿಕಾರಿ ಮಧುಸೂಧನ, ಕಲಬುರಗಿ ಪರಿಸರಾಧಿಕಾರಿ ಮಂಜಪ್ಪ, ಸಹಾಯಕ ಆಯುಕ್ತೆ ಸುರೇಖಾ ಕೆಂಗಿ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next