ಮುಂಡಗೋಡ: 2019-20ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ರೈತರು ಸಲ್ಲಿಸಿದ ವಿಮೆಯಲ್ಲಿ ಬೆಳೆ ಸಮೀಕ್ಷೆಯೊಂದಿಗೆ ಬೆಳೆ ಹೊಂದಾಣಿಕೆಯಾಗದ ಕಾರಣ ತಾಲೂಕಿನ 1836 ರೈತರ ವಿಮೆಯನ್ನು ವಿಮೆ ಕಂಪನಿ ತಿರಸ್ಕೃತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅಕಾಲಿಕ ಮಳೆಯಿಂದ ರೈತರ ಬೆಳೆ ಸಂಪೂರ್ಣ ಹಾನಿಯಾದ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ತಾಲೂಕಿನಾದ್ಯಂತ ರೈತರು ಬೆಳೆವಿಮೆ ಮಾಡಿಸಿದ್ದು ಬೆಳೆ ಹಾನಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಕಂಪನಿ ವೀಕ್ಷಕರಿಗೆ ಮತ್ತು ಕೃಷಿ ಅಧಿಕಾರಿಗಳಿಗೆ ನೀಡಿದ್ದರು. ಆದರೆ ವಿಮೆ ಕಂಪನಿ 1836 ರೈತರ ವಿಮೆ ತಿರಸ್ಕೃತಗೊಂಡಿರುವ ಬಗ್ಗೆ ಕೃಷಿ ಇಲಾಖೆಗೆ ರೈತರ ಯಾದಿ ಬಿಡುಗಡೆ ಮಾಡಿದೆ. ಈ ಬಗ್ಗೆ ತಾಲೂಕಿನ ರೈತರು ಕೃಷಿ ಇಲಾಖೆಗೆ ಸಂಪರ್ಕಿಸಿದಾಗ ಅಧಿಕಾರಿಗಳು, ವಿಮೆ ಮಾಡಿಸಿದ ಬೆಳೆಗೂ ಮತ್ತು ಪಹಣಿ ಪತ್ರಿಕೆಯಲ್ಲಿ ನಮೂದಿಸಿದ ಬೆಳೆಗೂ ಹೊಂದಾಣಿಕೆ ಇಲ್ಲದ ಕಾರಣ ತಿರಸ್ಕಾರಗೊಂಡಿವೆ ಎನ್ನುತ್ತಿದ್ದಾರೆ. ಇದರಿಂದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ರೈತರ ಅಭಿಪ್ರಾಯ: ಬಿತ್ತನೆ ಮಾಡಿದ ಒಂದೂವರೆ ತಿಂಗಳ ನಂತರ ಗ್ರಾಮ ಸೇವಕರು ಬೆಳೆ ದೃಢೀಕರಣವನ್ನು ಪಹಣಿ ಪತ್ರಿಕೆಯಲ್ಲಿ ನಮೂದಿಸುತ್ತಾರೆ. ಅದೇ ಪ್ರಕಾರ ರೈತರು ಬೆಳೆವಿಮೆ ಕಂತನ್ನು ಸಂಬಂಧಿಸಿದ ಸಹಕಾರಿ ಸಂಸ್ಥೆಗಳಲ್ಲಿ ತುಂಬಿ ರಶೀದಿ ಪಡೆದಿರುತ್ತಾರೆ. ಮುಂದಿನ ದಿನಗಳಲ್ಲಿ ಆಕಾಲಿಕ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾದಾಗ ರೈತರು ಹವಮಾನಕ್ಕೆ ಅನುಗುಣವಾಗಿ ಬೇರೆ ಬೆಳೆಯನ್ನು ನಾಟಿ ಮಾಡುತ್ತಾರೆ. ಆ ವೇಳೆ ಬೆಳೆ ವಿಮೆ ಸಮೀಕ್ಷಕರು ಬಂದು ನೋಡಿದಾಗ ಬೇರೆ ಬೆಳೆ ಇರುತ್ತದೆ, ಆಗ ಅವರು ಅದೇ ಬೆಳೆಯ ಫೋಟೋ ತೆಗೆದು ಕಂಪನಿಗೆ ನೀಡುತ್ತಾರೆ. ಇದೇ ಕಾರಣಕ್ಕೆ ಬೆಳೆ ಹೊಂದಾಣಿಕೆ ಆಗುತ್ತಿಲ್ಲ ಎಂದು ವಿಮೆ ಕಂಪನಿ ರೈತರನ್ನು ಕೈಬಿಟ್ಟಿದ್ದಾರೆ.
ರೈತರು ಮೇ ತಿಂಗಳಿಂದ ಜೂನ್ ತಿಂಗಳವರೆಗೆ ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ಹಾನಿಯಾದಾಗ ಅದೇ ತಿಂಗಳಲ್ಲಿ ವಿಮಾ ಕಂಪನಿಯವರು ಬಂದು ಹಾನಿಯಾದ ಪ್ರದೇಶವನ್ನು ಗುರುತಿಸಿ ಪೂರ್ಣ ಪ್ರಮಾಣದ ಹಾನಿ ಮೊತ್ತವನ್ನು ನೀಡುವುದಾದರೆ ರೈತರು ಹಾನಿಯಾದ ಬೆಳೆಯನ್ನು ಕಟಾವಿನವರೆಗೂ ಅದೇ ಬೆಳೆಯನ್ನು ಮುಂದುವರೆಸುತ್ತಾರೆ ಎಂದು ತಾಲೂಕಿನ ರೈತ ಸಂಘದ ಅಧ್ಯಕ್ಷ ಫೀರಜ್ಜ ಸಾಗರ ನೇತೃತ್ವದ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕಲುಕರ್ಣಿ ಮಾತನಾಡಿ, 2019-20ನೇ ಸಾಲಿನಲ್ಲಿ ತಿರಸ್ಕೃತಗೊಂಡ ರೈತರ ಯಾದಿಯನ್ನು ಈಗಾಗಲೇ ತಾಲೂಕಿನ ಆಯಾ ಪಂಚಾಯಿತಿ ಮತ್ತು ಸೊಸೈಟಿಗಳಿಗೆ ಕಳಿಸಿದ್ದೇವೆ. ಆ ರೈತರು ತಾವು ಬೆಳೆದ ಬೆಳೆ ಸಮರ್ಥವಾಗಿದೆ ಎನ್ನುವುದಾದರೆ ದಾಖಲಾತಿಗಳನ್ನು ತಕ್ಷಣವೇ ಸಲ್ಲಿಸಲು ವಿನಂತಿಸಿದ್ದೇವೆ. ಇದಕ್ಕಾಗಿ ಮತ್ತೆ ಹೆಚ್ಚುವರಿಯಾಗಿ ಸಮಯಾವಕಾಶ ನೀಡಲಾಗಿದೆ.
ಬೆಳೆ ವಿಮೆ ಕಂತು ತುಂಬಿ ಮೂರು ವರ್ಷದ ನಂತರ 1836 ರೈತರ ಬೆಳೆ ಹೊಂದಾಣಿಕೆ ಇಲ್ಲ ಎಂದು ತಿರಸ್ಕೃತಗೊಳಿಸಿ ಯಾದಿ ಕಳಿಸಿದ್ದಾರೆ. ಈಗ ರೈತರಿಗೆ ಅವುಗಳ ದಾಖಲಾತಿಗಳು ನೆಮ್ಮದಿಯಲ್ಲಿ ಸಿಗುತ್ತಿಲ್ಲ. ಇದರಿಂದ ಗೊಂದಲವಾಗಿದೆ. 1836 ರೈತನು ಬೆಳೆವಿಮೆ ಹಣ ತುಂಬಿದ್ದಾರೆ. ಈ ಎಲ್ಲಾ ರೈತರನ್ನು ಕೈಬಿಡುವ ಬದಲು ಸರಿಸಮಾನ ವಿಮೆಯ ಹಣ ಹಂಚಿಕೆ ಮಾಡಿದರೆ ತುಂಬಿದ ಹಣವಾದರೂ ಬಂತು ಎಂದು ರೈತರು ನಿಟ್ಟುಸಿರು ಬಿಡುತ್ತಾರೆ. –
ನಿಂಗಪ್ಪ ಕುರಬರ, ರೈತ ಮುಖಂಡ
-ಮುನೇಶ ತಳವಾರ