Advertisement

ಬೆಳೆ ಸಮೀಕ್ಷೆಗೆ ಅನ್ನದಾತರ ನಿರಾಸಕ್ತಿ

06:22 PM Sep 14, 2020 | Suhan S |

ಚಿತ್ರದುರ್ಗ: ಕೃಷಿ ಕ್ಷೇತ್ರ ನಿಧಾನವಾಗಿ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದು, ಅಜ್ಜನ ಕಾಲದಲ್ಲಿ ಬೆಳೆಯುತ್ತಿದ್ದ ಬೆಳೆ ಪಹಣಿಗಳಲ್ಲಿ ಪರ್ಮನೆಂಟಾಗಿರುತ್ತಿದ್ದ ಕಾಲ ಬದಲಾಗಿದೆ. ಈಗ ಪ್ರತಿ ವರ್ಷ ರೈತ ತನ್ನ ಜಮೀನಿನಲ್ಲಿ ಬೆಳೆದ ಬೆಳೆಯನ್ನು ತಾಂತ್ರಿಕತೆ ಬಳಸಿಕೊಂಡು ಅಪ್ಡೆಟ್‌ ಮಾಡುವ ತಂತ್ರಜ್ಞಾನ ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ಜಾರಿಗೆ ಬಂದಿದೆ.ಆದರೆ ಜಿಲ್ಲೆಯ ರೈತರಿಂದ ಈ ಯೋಜನೆಗೆ ನಿರೀಕ್ಷಿತ ಪ್ರಮಾಣದ ಸ್ಪಂದನೆ ಸಿಕ್ಕಿದಂತೆ ಕಾಣುತ್ತಿಲ್ಲ.

Advertisement

ಜುಲೈ ಅಂತ್ಯದಿಂದ ಆಗಸ್ಟ್‌ 24 ರವರೆಗೆ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯ ಸಮೀಕ್ಷೆಯನ್ನು ಖುದ್ದು ರೈತರೇ ಮಾಡಿಕೊಳ್ಳಲು ಅವಕಾಶಕಲ್ಪಿಸಲಾಗಿತ್ತು. ಆದರೆ ಅಂದುಕೊಂಡಂತೆ ಸಮೀಕ್ಷೆ ಆಗಲಿಲ್ಲ. ಈಗ ಸರ್ಕಾರ ಬೆಳೆ ಸಮೀಕ್ಷೆಯ ಕಾಲಾವ ಧಿಯನ್ನು ವಿಸ್ತರಿಸಿದ್ದು, ಸೆ. 24 ರವರೆಗೆ ಸಮಯವಿದೆ. ಸದ್ಯದ ಅಂಕಿ ಅಂಶಗಳ ಪ್ರಕಾದ ಜಿಲ್ಲೆಯಲ್ಲಿ ಶೇ. 43 ರಷ್ಟು ಬೆಳೆ ಸಮೀಕ್ಷೆಯಾಗಿದೆ. ಒಟ್ಟಾರೆ 5,96,055 ತಾಕುಗಳಿದ್ದು, ಇದರಲ್ಲಿ 2,53,311 ತಾಕುಗಳ ರೈತರು ಸಮೀಕ್ಷೆ ಪೂರೈಸಿದ್ದಾರೆ. ಜಿಲ್ಲೆಯಲ್ಲಿ 2.98 ಲಕ್ಷ ರೈತರು ಕೃಷಿಯನ್ನು ಅವಲಂಬಿಸಿದ್ದಾರೆ.

ಬೆಳೆ ಸಮೀಕ್ಷೆ ಅತ್ಯಗತ್ಯ: ಲಾಕ್‌ಡೌನ್‌ ಸಂದರ್ಭದಲ್ಲಿ ಮೆಕ್ಕೆಜೋಳದ ಬೆಲೆ ಕುಸಿತವಾದಾಗ ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂ. ಘೋಷಣೆ ಮಾಡಿತ್ತು. ಈ ವೇಳೆ ಬೆಳೆ ಸಮೀಕ್ಷೆಯಲ್ಲಿ ನಮೂದಾಗಿದ್ದ ಮಾಹಿತಿಆಧರಿಸಿಯೇ ಹಣ ಜಮಾ ಮಾಡಲಾಗಿತ್ತು. ಈನಿಟ್ಟಿನಲ್ಲಿ ರೈತರು ಬೆಳೆ ಸಮೀಕ್ಷೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಪಹಣಿಯಲ್ಲಿ ಸಮರ್ಪಕ ಬೆಳೆ ಮಾಹಿತಿ ನಮೂದಿಸದ ಕಾರಣ ಬರಗಾಲ, ಮಳೆ ಹಾನಿ ಸಂದರ್ಭಗಳಲ್ಲಿ ಪರಿಹಾರ, ಬೆಳೆ ವಿಮೆ,ಕನಿಷ್ಠ ಬೆಂಬಲ ಬೆಲೆ ಯೋಜನೆಗಳಿಂದ ರೈತರು ವಂಚಿತರಾಗಬೇಕಾಗುತ್ತದೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ “ಬೆಳೆ ಸಮೀಕ್ಷೆ 2020-21′ ಎಂಬ ಮೊಬೆಲ್‌ ಆ್ಯಪ್‌ ಮೂಲಕ ರೈತರೇ ಬೆಳೆಯ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆ ಮಾಡಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಟ್ಟಿ ರೈತರು ಆಸಕ್ತಿ ವಹಿಸಬೇಕಿದೆ.

ಸಮೀಕ್ಷೆಗೆ ಇರುವ ಸಮಸ್ಯೆಗಳೇನು? : ರೈತರು ಬೆಳೆ ಸಮೀಕ್ಷೆ ಮಾಡಿಕೊಳ್ಳಲು ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್‌ ಸಮಸ್ಯೆ ಒಂದು ಕಾರಣವಾದರೆ, ಸ್ಮಾರ್ಟ್‌ ಫೋನ್‌ ಇಲ್ಲದಿರುವುದು ಮತ್ತೂಂದು ಕಾರಣವಾಗಿದೆ. ಒಂದು ವೇಳೆ ಇಂಟರ್‌ನೆಟ್‌ ಇದ್ದರೂ 2 ಜಿ ಸ್ಪೀಡ್‌ ಇದೆ ಎನ್ನುವ ಆರೋಪಗಳಿವೆ. ಇದರ ಜೊತೆಗೆ ರೈತರು ಜಮೀನುಗಳಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆದಿರುವುದರಿಂದ ಅಪ್ಲೋಡ್‌ ಸಮಸ್ಯೆ ಆಗುತ್ತಿದೆ. ಈ ಕಾರಣಕ್ಕೆ ಸರ್ಕಾರ ರೈತರಪರವಾಗಿ ಅವರ ಪರಿಚಯದವರೂ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಿತ್ತು. ಈಗ ಎರಡನೇ ಹಂತದಲ್ಲಿ ಪ್ರತಿ ಹಳ್ಳಿಗೆ ಒಬ್ಬರನ್ನು ನೇಮಿಸಿ ಸಮೀಕ್ಷೆಯಾಗದ ರೈತರ ಜಮೀನುಗಳಿಗೆ ತೆರಳಿ ಸಮೀಕ್ಷೆ ಮಾಡಿಸಲು ಸೂಚಿಸಿದೆ. ಬೆಳೆ ಸಮೀಕ್ಷೆಗೆ ಇನ್ನು ಹತ್ತು ದಿನಗಳಷ್ಟೇ ಬಾಕಿ ಇರುವುದರಿಂದ ಪ್ರತಿ ದಿನ 18 ರಿಂದ 20 ಸಾವಿರ ರೈತರು ಸಮೀಕ್ಷೆ ಮಾಡಿ ಅಪ್ಲೋಡ್‌ ಮಾಡುತ್ತಿದ್ದಾರೆ. ರೈತರು ಬೆಳೆ ಸಮೀಕ್ಷೆ ಮಾಡಿದ ವಿವರ ಹೋಬಳಿ ಹಂತದ ಅಧಿಕಾರಿಯ ಸರ್ವರ್‌ಗೆ ಹೋಗುತ್ತದೆ. ಅಲ್ಲಿ ಪರಿಷ್ಕರಣೆಯಾಗಿ ತಾಲೂಕು, ಜಿಲ್ಲಾ ಮಟ್ಟ, ಆನಂತರ ರಾಜ್ಯ ಮಟ್ಟದಲ್ಲೂ ಪರಿಷ್ಕರಣೆಯಾಗುತ್ತದೆ. ಎಲ್ಲ ಸಮಸ್ಯೆಗಳು ಇತ್ಯರ್ಥವಾದ ನಂತರ ಒಪ್ಪಿಗೆ ದೊರೆತು ಪಹಣಿಗೂ ಸೇರಿಸಲಾಗುತ್ತಿದೆ.

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸಮೀಕ್ಷೆ ಚೆನ್ನಾಗಿ ನಡೆಯುತ್ತಿದೆ. ರೈತರು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಈಗ ಪಿಆರ್‌ಗಳು ಸರ್ವೇ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಬಹು ವಿಧದ ಬೆಳೆಗಳಿರುವುದರಿಂದ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಬಹುದು. ಆದರೆ ಹಂತ ಹಂತವಾಗಿ ಸಮೀಕ್ಷೆ ಸರಳೀಕರಣವಾಗಲಿದೆ.  ಸದಾಶಿವ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

Advertisement

 

-ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next